ಅಂತಾರಾಷ್ಟ್ರೀಯ

‘ಪುನೀತ ನೆನಪು’ ಕನ್ನಡಿಗಾಸ್ ಫೆಡರೇಷನ್ ವತಿಯಿಂದ ಅಪ್ಪು ‘ನುಡಿನಮನ’ : ದ್ವಾರಕೀಶ್, ಎಂ.ಬಿ ಪಾಟೀಲ್ ಭಾಗಿ

0

ಅಕ್ಟೋಬರ್29 ಶುಕ್ರವಾರ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ವಿಧಿವಶರಾದ ಕನ್ನಡ ಚಿತ್ರರಂಗದ ಯುವರತ್ನ ಸೂಪರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುವ ‘ಪುನೀತ ನೆನಪು’ ಎಂಬ ನುಡಿನಮನ ಕಾರ್ಯಕ್ರಮವನ್ನು ಅಂತಾರಾಷ್ಟ್ರೀಯ ಕನ್ನಡಿಗಾಸ್ ಫೆಡರೇಷನ್ ಆಯೋಜಿಸಿತ್ತು.

ವಿಶ್ವದ 14ಕ್ಕೂ ಹೆಚ್ಚಿನ ದೇಶಗಳಲ್ಲಿ ನೆಲೆಸಿರುವ 38ಕ್ಕೂ ಹೆಚ್ಚಿನ ಕನ್ನಡ ಪರ ಸಂಘಟನೆಗಳು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಅಪ್ಪು ಅಭಿಮಾನಿಗಳು ತಮ್ಮನ್ನಗಲಿದ ನೆಚ್ಚಿನ ನಟನ ಜೊತೆ ತಮಗಿದ್ದ ಒಡನಾಟ, ಪ್ರೀತಿ, ಅಭಿಮಾನವನ್ನು ಮುಕ್ತವಾಗಿ ಹಂಚಿಕೊಂಡು ನುಡಿನಮನ ಸಲ್ಲಿಸಿದರು.

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ರವರು ಪಾಲ್ಗೊಂಡು, ‘ನನ್ನ ಸ್ವಂತ ಮಗನನ್ನು ಕಳೆದುಕೊಂಡಷ್ಟು ದುಃಖವಾಗಿದೆ’ ಎಂದು ಅಪ್ಪು ಜೊತೆಗಿನ ಹಲವು ನೆನಪುಗಳನ್ನು ಹಂಚಿಕೊಂಡರು. ಮಾಜಿ ಗೃಹ ಸಚಿವರಾದ ಎಂ.ಬಿ ಪಾಟೀಲ್ ರು ಮಾತನಾಡಿ ಅಪ್ಪು ಜೊತೆಗಿನ ಸವಿನಯ ಸಂಬಂಧ ಹಾಗೂ ಅವರ ಜೊತೆ ಕೊನೆಯ ಭೇಟಿ ಸಂದರ್ಭದ ಘಟನೆಯನ್ನು ನೆನಪಿಸಿಕೊಂಡು, ಭಾವುಕರಾಗಿ ಶೃದ್ಧಾಂಜಲಿ ಅರ್ಪಿಸಿದರು. ಬೆಂಗಳೂರಿನ ಶಾಂತಿನಗರ ಕ್ಷೇತ್ರದ ಶಾಸಕ ಎನ್ ಎ ಹ್ಯಾರಿಸ್ ಮಾತನಾಡಿ, ಪುನೀತ್ ರಾಜಕುಮಾರ್ ಜೀವನದಲ್ಲಿ ಅಳವಡಿಸಿದ್ದ ಸರಳತೆಯ ಕುರಿತು ನೆನಪಿನಂಗಳದಿಂದ ಹಲವು ಘಟನೆಗಳನ್ನು ಸ್ಮರಿಸಿದರು.

Advertisement. Scroll to continue reading.

ಮೂಡುಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್, ಅಪ್ಪು ರವರ ಮೊದಲ ಭೇಟಿಯಲ್ಲೇ ತೋರಿದ ವಿನಯ ಮತ್ತು ಪ್ರೀತಿಯ ಅನುಭವವನ್ನು ಮಾತಿನಲ್ಲಿ ಹಂಚಿಕೊಂಡರು. ಮಂಗಳೂರು ಸಿಟಿ ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ನಟರಾಜ್ ರವರು ಮಾತನಾಡಿ, ಪುನೀತ್ ಜೀವನದಲ್ಲಿ ಅಳವಡಿಸಿಕೊಂಡ ಆದರ್ಶಗಳನ್ನು ಹಲವು ನೆನಪುಗಳ ಸಹಿತ ಮೆಲುಕು ಹಾಕಿದರು. ದುಬೈನ ಉದಯೋನ್ಮುಖ ಗಾಯಕ ಉಮರ್ ಸೈಫ್ ರವರು ಪುನೀತ್ ರಾಜಕುಮಾರ್ ರವರ ‘ಬೊಂಬೆ ಹೇಳುತೈತೆ’ ‘ನಿನ್ನಿಂದಲೇ’ ಹಾಡನ್ನು ಮನಮುಟ್ಟುವಂತೆ ಹಾಡಿದಾಗ ನೆರೆದಿದ್ದ ಅಭಿಮಾನಿಗಳೆಲ್ಲರೂ ಅಪ್ಪು ನೆನೆದು ಗದ್ಗದಿತರಾದರು.

ಕಾರ್ಯಕ್ರಮದ ಸಂಘಟಕ, ಕನ್ನಡಿಗಾಸ್ ಫೆಡರೇಷನ್ ಸಂಚಾಲಕ ಹಿದಾಯತ್ ಅಡ್ಡೂರ್ ಮಾತನಾಡಿ, ನಮ್ಮ ಜೀವನದಲ್ಲಿ ಪುನೀತ್ ರವರಂತಹ ಸರಳತೆ, ಪ್ರಚಾರ ಬಯಸದೇ ನೆರವಾಗುವ ಗುಣವನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸೋಣ, ಆ ಮೂಲಕ ನಿಜಾರ್ಥದಲ್ಲಿ ಶೃದ್ಧಾಂಜಲಿ ಅರ್ಪಿಸೋಣ ಎಂದರು. ಈ ಸಂದರ್ಭದಲ್ಲಿ ಕನ್ನಡಿಗಾಸ್ ಫೆಡರೇಷನ್ ವತಿಯಿಂದ ಪುನೀತ್ ರವರಿಗೆ ಶೃದ್ಧಾಂಜಲಿ ಅರ್ಪಿಸುವ ವೀಡಿಯೊ ಹಾಗೂ ಕಳೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬಂದು ಪುನೀತ್ ರಾಜಕುಮಾರ್ ಶುಭ ಹಾರೈಸಿದ್ದ ವೀಡಿಯೊ ಸಂದೇಶವನ್ನು ಪ್ರದರ್ಶಿಸಲಾಯಿತು.

ಬಹರೈನ್ ಕನ್ನಡ ಸಂಘ ಅಧ್ಯಕ್ಷರಾದ ಪ್ರದೀಪ್ ಶೆಟ್ಟಿ, ಅಬುಧಾಬಿ ಕರ್ನಾಟಕ ಸಂಘ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಹಾಲೆಂಡ್ ಕನ್ನಡ ಸಂಘದ ಅಶೋಕ್, ಕನ್ನಡ ಸಂಘ ಉಗಾಂಡ ಅಧ್ಯಕ್ಷರಾದ ಸುಧೀರ್, ಬ್ಯಾಂಕಾಕ್ ಕನ್ನಡ ಸಂಘದ ಶಿವು ಪೂಜಾರಿ, ಇಟಲಿ ಕನ್ನಡ ಸಂಘದ ಅಧ್ಯಕ್ಷರಾದ ಹೇಮೇಗೌಡ, ಕನ್ನಡಿಗರು ದುಬೈ ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೌಡ, ಕನ್ನಡ ಮಿತ್ರರು ಯುಎಇ ಅಧ್ಯಕ್ಷ ಶಶಿಧರ ನಾಗರಾಜಪ್ಪ, ನಮ್ಮ ರೇಡಿಯೋ ಸ್ಥಾಪಕ ಅವನಿಧಾರ್ ಹವಾಲ್ದಾರ್, ಓವರ್ಸೀಸ್ ಕನ್ನಡ ಮೂವೀಸ್ ನ ದೀಪಕ್ ಸೋಮಶೇಖರ್ ಪುನೀತ್ ರಾಜಕುಮಾರ್ ರವರಿಗೆ ನುಡಿನಮನ ಸಲ್ಲಿಸಿದರು.

ದ್ವಾರಕೀಶ್ ರವರ ಪುತ್ರ ಸುಕೇಶ್ ದ್ವಾರಕೀಶ್, ಬಾ| ಮಮತಾ ರಡಾರ್, ಕೆ ಎನ್ ಆರೈ ಫೋರಂ ಯುಎಇ ಸದಸ್ಯರಾದ ದಯಾ ಕಿರೋಡಿಯನ್, ಮಂಗಳೂರಿನ ಖ್ಯಾತ ರೇಡಿಯೋ ಜಾಕಿ ಆರ್.ಜೆ ಎರೋಲ್, ಲಕ್ಷ್ಮೀ ಲಿಂಗದಳ್ಳಿ, ವಡೆಕಾರ್ ಅಬುಧಾಬಿ, ಕನ್ನಡ ಮಿತ್ರರು ತಂಡದ ನಾಗರಾಜ್ ರಾವ್, ಕನ್ನಡಿಗಾಸ್ ಫೆಡರೇಷನ್ ನ ಇಮ್ರಾನ್ ಖಾನ್ ಎರ್ಮಾಳ್, ಸೆಂಥಿಲ್ ಬೆಂಗಳೂರು, ಅನ್ಸಾರ್ ಬಾರ್ಕೂರ್, ಸಮೀರ್ ಉದ್ಯಾವರ್ ಪ್ರೀತಿಯ ಅಪ್ಪು ರವರಿಗೆ ಅಭಿಮಾನದಿಂದ ನುಡಿನಮನ ಸಲ್ಲಿಸಿದರು. ಕಾರ್ಯಕ್ರಮವನ್ನು ವಿಷ್ಣುಮೂರ್ತಿ ಮೈಸೂರು ರವರು ನಿರೂಪಿಸಿದರು ಹಾಗೂ ಪುನೀತ್ ಗೆ ಇಷ್ಟವಾದ ಭಕ್ತಿಗೀತೆಯನ್ನೂ ಹಾಡಿದರು, ಮಮತಾ ಶಾರ್ಜಾ ರವರು ವಂದಿಸಿದರು.

Advertisement. Scroll to continue reading.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com