ಕಾರ್ಕಳ : ಕಸ ಎಸೆದಾತನಿಂದಲೇ ಕಸ ಹೆಕ್ಕಿಸಿದ ನೀರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ; ಸಾರ್ವಜನಿಕರಿಂದ ಮೆಚ್ಚುಗೆ
Published
2
ವರದಿ : ಬಿ.ಎಸ್.ಆಚಾರ್ಯ
ಕಾರ್ಕಳ : ರಸ್ತೆ ಬದಿ ಕಸ ಎಸೆದಾತನಿಗೆ ನೀರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಂಡ ಹಾಕಿ ಅವರಿಂದಲೇ ಆ ಕಸವನ್ನು ತೆಗೆಸಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ಪಡೆದಿದೆ.
ಕಾರ್ಕಳ ತಾಲೂಕು ನೀರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಡ್ಡಿನಂಗಡಿ ಸುರಕ್ಷಿತ ಅರಣ್ಯ ಬಳಿಯ ಉಡುಪಿ – ಕಾರ್ಕಳ ಹೈವೆ ಯಲ್ಲಿ ಜಾರ್ಕಳ ಮೂಲದ ವ್ಯಕ್ತಿಯೋರ್ವರು ಬೈಕಿನಲ್ಲಿ ಬಂದು ರಟ್ಟು ಪ್ಲಾಸ್ಟಿಕ್ ಇತರೆ ತ್ಯಾಜ್ಯ ವನ್ನು ರಸ್ತೆ ಬದಿ ಎಸೆದಿರುವುದನ್ನು ನೀರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಂಕಿತಾ ನಾಯಕ್ ಬೆಳಿಗ್ಗೆ ಕರ್ತವ್ಯಕ್ಕೆ ಬರುತ್ತಿದ್ದಾಗ ಗಮನಿಸಿದ್ದಾರೆ. ಬಳಿಕ ಆ ವ್ಯಕ್ತಿಯನ್ನು ಹಿಂಬಾಲಿಸಿಕೊಂಡು ಹೋಗಿ ಘಟನಾ ಸ್ಥಳಕ್ಕೆ ಗ್ರಾಮ ಪಂಚಾಯತ್ ಬಿಲ್ ಕಲೆಕ್ಟರ್ ಗಣೇಶ್ ರವರನ್ನು ಬರುವಂತೆ ತಿಳಿಸಿ ಸ್ಥಳದಲ್ಲೇ ಕಸ ಎಸೆದಾತನಿಗೆ ರೂ.500 ದಂಡ ವಿಧಿಸಿ, ಅದೇ ವ್ಯಕ್ತಿಯಿಂದ ಕಸವನ್ನು ತೆಗೆಸಿ ಎಸ್ .ಎಲ್ .ಆರ್ .ಎಂ .ವಾಹನಕ್ಕೆ ಹಾಕಲು ಸೂಚಿಸಿರುತ್ತಾರೆ.
Advertisement. Scroll to continue reading.
ನೀರೇ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯಾರೂ ಎಲ್ಲೆಂದರಲ್ಲಿ ಕಸವನ್ನು ಹಾಕುವಂತಿಲ್ಲ. ಹಾಕಿದಲ್ಲಿ ದಂಡ ವಿಧಿಸಲಾಗುವುದು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಒಬ್ಬ ಮಹಿಳಾ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಗಿರುವ ಅಂಕಿತಾ ನಾಯಕ್ ,ಕಸ ಎಸೆದಾತನ ಹಿಂಬಾಲಿಸಿಕೊಂಡು ಹೋಗಿ ದಂಡ ವಿಧಿಸಿರುವ ಅವರ ಕಾರ್ಯ ವೈಖರಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.