ಗಾಜಾಪಟ್ಟಿ : ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿದ ಬಳಿಕ ಪ್ರತಿದಾಳಿ ನಡೆಸುತ್ತಿರುವ ಇಸ್ರೇಲ್ ವಾಯು ಪಡೆ, ಗಾಜಾಪಟ್ಟಿ ಮೇಲೆ ನಿರಂತರವಾಗಿ ಬಾಂಬ್ಗಳ ಮಳೆ ಸುರಿಸುತ್ತಿದೆ. ಜೊತೆಯಲ್ಲೇ 24 ಗಂಟೆಗಳ ಒಳಗೆ ಗಾಜಾಪಟ್ಟಿ ಬಿಟ್ಟು ಹೊರಡಿ ಎಂದು ಪ್ಯಾಲಿಸ್ತೀನ್ ನಾಗರಿಕರಿಗೆ ಆದೇಶಿಸಿದೆ. ಒಂದು ವೇಳೆ ಪ್ಯಾಲಿಸ್ತೀನ್ ನಾಗರಿಕರು 24 ಗಂಟೆಗಳ ಒಳಗೆ ಗಾಜಾಪಟ್ಟಿ ಬಿಟ್ಟು ಹೋಗದಿದ್ದರೆ ಮುಂದಾಗುವ ಅನಾಹುತಗಳಿಗೆ ನಾವು ಹೊಣೆಯಲ್ಲ ಎಂದು ಇಸ್ರೇಲ್ ಎಚ್ಚರಿಕೆ ನೀಡಿದೆ.
ಹಮಾಸ್ ಉಗ್ರರ ಬೇಟೆಗಾಗಿ ಗಾಜಾಪಟ್ಟಿ ಮೇಲೆ ಮುಗಿಬೀಳಲು ಇಸ್ರೇಲ್ ಭೂ ಸೇನೆ ಸಜ್ಜಾಗಿದೆ. ಹೀಗಾಗಿ ಗಾಜಾಪಟ್ಟಿಯಿಂದ ಸುರಕ್ಷಿತ ಸ್ಥಳಗಳಿಗೆ ರವಾನೆಯಾಗಲು ಪ್ಯಾಲಿಸ್ತೀನ್ ಜನ ಸಾಮಾನ್ಯರಿಗೆ ಇಸ್ರೇಲ್ 24 ಗಂಟೆಗಳ ಕಾಲಾವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಪ್ಯಾಲಿಸ್ತೀನ್ ಜನತೆ ತಮ್ಮ ಬಟ್ಟೆ ಬರೆ ಹಾಗೂ ಅಗತ್ಯ ವಸ್ತುಗಳ ಸಮೇತ ಗಾಜಾ ಪಟ್ಟಿ ತೊರೆಯುತ್ತಿದ್ದಾರೆ.
ಕಾರ್ಗಳ ಮೇಲೆ ಹಾಸಿಗೆ, ಬಟ್ಟೆ, ಮನೆಯ ದಿನ ಬಳಕೆ ವಸ್ತುಗಳನ್ನು ಹೇರಿಕೊಂಡು ಪ್ಯಾಲಿಸ್ತೀನ್ ನಾಗರಿಕರು ಗಾಜಾ ಪಟ್ಟಿಯ ಉತ್ತರ ಭಾಗದಿಂದ ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Advertisement. Scroll to continue reading.
ಭಾರೀ ಸಂಖ್ಯೆಯ ವಾಹನಗಳಲ್ಲಿ ಪ್ಯಾಲಿಸ್ತೀನ್ ಜನತೆ ಗಾಜಾಪಟ್ಟಿಯ ದಕ್ಷಿಣ ಭಾಗಕ್ಕೆ ಸ್ಥಳಾಂತರ ಆಗುತ್ತಿದ್ದಾರೆ. ಇಸ್ರೇಲ್ ಸೇನೆ ಯಾವುದೇ ಕ್ಷಣದಲ್ಲೂ ಗಾಜಾಪಟ್ಟಿಗೆ ನುಗ್ಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜನರು ಆತಂಕದಲ್ಲಿದ್ದಾರೆ.
ಉತ್ತರ ಗಾಜಾ ಪ್ರಾಂತ್ಯದಲ್ಲಿ ನೆಲೆಸಿದ್ದ ಜನರು ದಕ್ಷಿಣದತ್ತ ಸಾಗುತ್ತಿದ್ದಾರೆ. ಗಾಜಾ ನಗರ, ಬೈತ್ ಲಹಿಯಾ, ಬೈತ್ ಹನೌನ್ ಹಾಗೂ ಜಬೀಲಾ ಆರ್.ಸಿ. ನಗರಗಳಲ್ಲಿ ವಾಸವಿದ್ದ ಜನರು ತಮ್ಮ ಮನೆಗಳನ್ನು ಖಾಲಿ ಮಾಡಿಕೊಂಡು ದಕ್ಷಿಣದತ್ತ ಹೊರಟಿದ್ದಾರೆ.
ಏಕೆಂದರೆ, ಇಸ್ರೇಲ್ ಸೇನೆಯು ತನ್ನ ದಾಳಿ ಆರಂಭ ಆದ ಬಳಿಕ ಆಗುವ ಅನಾಹುತಗಳಿಗೆ ತಾನು ಹೊಣೆಯಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಪ್ಯಾಲಿಸ್ತೇನ್ನಲ್ಲಿ ಇರುವ ವರದಿಗಾರರೊಬ್ಬರು ಟ್ವಿಟ್ಟರ್ (ಎಕ್ಸ್)ನಲ್ಲಿ ವಿಡಿಯೋ ಸಮೇತ ಈ ಮಾಹಿತಿ ಪ್ರಕಟಿಸಿದ್ದಾರೆ.
Advertisement. Scroll to continue reading.