ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್ 2023ರಲ್ಲಿ ಭಾರತ ಕ್ರಿಕೆಟ್ ತಂಡ ಅದ್ಭುತ ಪ್ರದರ್ಶನ ನೀಡಿ ಸೆಮಿ ಫೈನಲ್‌ಗೆ ಲಗ್ಗೆಯಿಟ್ಟಿರುವ ಬೆನ್ನಲ್ಲೇ ದೊಡ್ಡ ಬದಲಾವಣೆಯನ್ನು ಮಾಡಲಾಗಿದೆ. ಹೌದು, ಗಾಯದಿಂದ ಬಳಲುತ್ತಿರುವ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ವಿಶ್ವಕಪ್ ಟೂರ್ನಿಯಿಂದಲೇ ಔಟ್ ಆಗಿದ್ದಾರೆ.
ಆಲ್ ರೌಂಡರ್ ಹಾಗೂ ಉಪನಾಯಕ ಹಾರ್ದಿಕ್ ಪಾಂಡ್ಯ ಅವರು ಗಾಯದಿಂದ ಚೇತರಿಸಿಕೊಳ್ಳದ ಕಾರಣ ಅವರ ಸ್ಥಾನಕ್ಕೆ ಮತ್ತೊಬ್ಬ ಕನ್ನಡಿಗ ಪ್ರಸಿದ್ಧ್ ಕೃಷ್ಣ ಲಗ್ಗೆ ಇಟ್ಟಿದ್ದಾರೆ. ಹೀಗಾಗಿ ಬಲಿಷ್ಠ ಸೌತ್ ಆಫ್ರಿಕಾ ತಂಡದ ವಿರುದ್ಧದ ಮ್ಯಾಚ್‌ನಲ್ಲಿ ಕೃಷ್ಣ ಬೌಲಿಂಗ್ ಮಾಡಲಿದ್ದಾರೆ ಎನ್ನಲಾಗಿದೆ. ಕಳೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಗಾಯಕ್ಕೆ ತುತ್ತಾಗಿದ್ದರು.
ಈಗಾಗಲೇ ಭಾರತ ತಂಡದಲ್ಲಿ 17 ಪಂದ್ಯಗಳನ್ನು ಆಡಿರುವ ಪ್ರಸಿದ್ಧ್ ಕೃಷ್ಣ 29 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದೇ ಮೊದಲ ಬಾರಿಗೆ ಅವರಿಗೆ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಭಾಗ್ಯ ಒಲಿದು ಬಂದಿರುವುದು ವಿಶೇಷ. ಇದರೊಂದಿಗೆ ಕೆಎಲ್ ರಾಹುಲ್ , ಕೃಷ್ಣ ಕರ್ನಾಟಕದ ಇಬ್ಬರು ತಂಡವನ್ನು ಪ್ರತಿನಿಧಿಸಿದಂತಾಗುತ್ತದೆ.
Advertisement. Scroll to continue reading.
ಹಾರ್ದಿಕ್ ಪಾಂಡ್ಯ ಅವರು ಚಿಕಿತ್ಸೆಗಾಗಿ ಬೆಂಗಳೂರಿನ ಕ್ರಿಕೆಟ್ ಅಕಾಡೆಮಿಗೆ (NCA) ತೆರಳಿದ್ದರು. ವರದಿಯಲ್ಲಿ ಪಾಂಡ್ಯ ಕಾಲಿನಲ್ಲಿ ಯಾವುದೇ ಮುರಿತ ಕಂಡುಬರದಿದ್ದರೂ, ಕೆಲವು ದಿನಗಳ ಕಾಲ ವಿಶ್ರಾಂತಿ ತೆಗೆದುಕೊಂಡರೆ ಉತ್ತಮ ಎಂದು ತಿಳಿದುಬಂದಿದೆ. ಅಲ್ಲದೆ ದಕ್ಷಿಣ ಆಫ್ರಿಕಾ ವಿರುದ್ಧ ಅಥವಾ ಸೆಮಿ ಫೈನಲ್‌ನ ಪಂದ್ಯಕ್ಕೆ ಲಭ್ಯರಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಗಾಯದ ಪ್ರಮಾಣ ದೊಡ್ಡದಿರುವ ಕಾರಣ ಹಾಗೂ ಚೇತರಿಸಿಕೊಳ್ಳಲು ಇನ್ನೂ ಸಮಯ ಬೇಕಾಗಿರುವುದರಿಂದ ಪಾಂಡ್ಯ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
ಐಸಿಸಿ ಏಕದಿನ ವಿಶ್ವ ಕಪ್‌ನಲ್ಲಿ ಭಾನುವಾರ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿ ಆಗಲಿದೆ. ಈ ಪಂದ್ಯ ಕೋಲ್ಕತ್ತಾ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿದೆ.
Advertisement. Scroll to continue reading.