ಚಂದನವನ : ಖ್ಯಾತ ನಟ ‘ಸಾಹಸ ಸಿಂಹ’ ಡಾ. ವಿಷ್ಣುವರ್ಧನ್ ಅಂತ್ಯಕ್ರಿಯೆ ನಡೆದ ಪುಣ್ಯಭೂಮಿಯನ್ನು ಉಳಿಸಿಕೊಳ್ಳುವ ಸಲುವಾಗಿ ಭಾನುವಾರ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ವಿಷ್ಣುವರ್ಧನ್ ಅಭಿಮಾನಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಬರೋಬ್ಬರಿ 14 ವರ್ಷಗಳ ನಂತರ ಕೂಡ ವಿಷ್ಣುವರ್ಧನ್ ಸ್ಮಾರಕ ಅವರ ಅಂತ್ಯಕ್ರಿಯೆ ನಡೆದಿರುವ ಜಾಗದಲ್ಲಿ ಇನ್ನೂ ಸ್ಮಾರಕ ಆಗಿಲ್ಲ ಇದು ಸಹಜವಾಗೇ ಅಭಿಮಾನಿಗಳನ್ನು ಕೆರಳಿಸಿದೆ.
ವಿಷ್ಣು ಅಭಿಮಾನಿಗಳ ಹೋರಾಟಕ್ಕೆ ಅನೇಕ ಸಂಘ, ಸಂಸ್ಥೆಗಳು ಬೆಂಬಲ ನೀಡಿವೆ. ಕಿಚ್ಚ ಸುದೀಪ್, ಡಾಲಿ ಧನಂಜಯ್, ಪ್ರೇಮ್ ಮುಂತಾದ ನಟರು ಕೂಡ ಬೆಂಬಲ ಸೂಚಿಸಿದ್ದಾರೆ.
ಡಾ. ವಿಷ್ಣುವರ್ಧನ್ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಬೇಕು ಎಂದು ಒತ್ತಾಯ ಕೂಡ ಮಾಡಲಾಗುತ್ತಿದೆ.
ಡಾ.ವಿಷ್ಣು ಅಪ್ಪಾಜಿ ಸ್ಮಾರಕ ಕುರಿತು ನನ್ನದು ಅಂದು -ಇಂದು ಒಂದೇ ನಿಲುವು. ಮೈಸೂರಿನಲ್ಲಿ ಸ್ಮಾರಕವಾದರೂ, ಅಂತ್ಯ ಸಂಸ್ಕಾರಗೊಂಡ ಸ್ಥಳದಲ್ಲಿಯೂ ಪುಣ್ಯಭೂಮಿ ಆಗಬೇಕು. ಈ ವಿಷಯವಾಗಿ ಅಭಿಮಾನಿ ಸಂಘಗಳ ಹೋರಾಟಕ್ಕೆ ನನ್ನ ಬೆಂಬಲವಿದೆ. ನಾನೂ ನಿಮ್ಮಲ್ಲೊಬ್ಬ ಎಂದು ಭಾವಿಸಿ ನೀವು ಮುನ್ನಡೆಯಿರಿ ನನ್ನಿಂದಾಗುವ ಎಲ್ಲವನ್ನೂ ಪುಣ್ಯಭೂಮಿಗಾಗಿ ಮಾಡುವೆ ಎಂದು ಕಿಚ್ಚ ಸುದೀಪ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನು ನಟ ಧನಂಜಯಗ ಕೂಡ ಈ ಕುರಿತು ದನಿಯಾಗಿದ್ದು, ಕನ್ನಡ ಚಿತ್ರರಂಗದ ಮೇರು ನಟರು, ಹಿರಿಯಣ್ಣರಲ್ಲಿ ಒಬ್ಬರಾದ ಡಾ.ವಿಷ್ಣು ಸರ್ ಪುಣ್ಯಭೂಮಿಗೆ ರಾಜಧಾನಿಯಲ್ಲಿ ಅಂಗೈಯಗಲ ಜಾಗವಿಲ್ಲವೆಂಬುದು ಯಾಕೋ ಅರಗಿಸಿಕೊಳ್ಳಲಾಗುತ್ತಿಲ್ಲ. ಸರ್ಕಾರ ಕೂಡಲೇ ಡಾ.ವಿಷ್ಣು ಸರ್ ಪುಣ್ಯಭೂಮಿ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸುವೆ. ಅವರ ಅಭಿಮಾನಿಗಳ ಹೋರಾಟದಲ್ಲಿ ನಾನೂ ಇದ್ದೇನೆ. ಈ ವಿಷಯ ಬೇಗ ಸುಖಾಂತ್ಯ ಕಾಣಲಿ ಎಂದು ಪೋಸ್ಟ್ ಮಾಡಿದ್ದಾರೆ.
Advertisement. Scroll to continue reading.
ದಿವಂಗತ ನಟ ವಿಷ್ಣುವರ್ಧನ್ ಅವರ ಪುಣ್ಯ ಭೂಮಿ ಕುರಿತು ವಿಷ್ಣು ಸರ್ ಅಭಿಮಾನಿಗಳೆಲ್ಲ ಏನು ಹೋರಾಟ ಕೈಗೊಂಡಿದಾರೆ, ಅದಕ್ಕೆ ವಿಷ್ಣು ಸರ್ ಅಭಿಮಾನಿಯಾಗಿ ನಾನೂ ಸಹ ಸದಾ ನಿಮ್ ಜತೆಗಿರ್ತೀನಿ. ಈ ಪ್ರತಿಭಟನೆ ಸಾರಥ್ಯ ವಹಿಸಿರುವಂಥ ನನ್ನ ಆತ್ಮೀಯ ಸ್ನೇಹಿತ ವೀರಕಪುತ್ರ ಶ್ರೀನಿವಾಸ್ ಅವರಿಗೆ ಧನ್ಯವಾದಗಳು. ಶೀನಪ್ಪ, ನಾನು ಸದಾ ಕಾಲ ನಿನ್ನ ಜತೆಗಿರ್ತೀನಿ. ಎಲ್ಲರಿಗೂ ನನ್ನ ಧನ್ಯವಾದಗಳು’ ಎಂದು ನಟ, ಲವ್ಲಿ ಸ್ಟಾರ್ ಪ್ರೇಮ್ ಹೇಳಿದ್ದಾರೆ.