ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಟ ಹಾಗೂ ಡಿಎಂಡಿಕೆ ಪಕ್ಷದ ಅಧ್ಯಕ್ಷ ಕ್ಯಾಪ್ಟನ್ ವಿಜಯಕಾಂತ್ ಅವರು ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ನ್ಯೂಮೋನಿಯಾ ಜ್ವರದಿಂದ ಕೊರೊನಾ ಸೋಂಕು ತಗುಲಿ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ತೀವ್ರ ಜ್ವರದಿಂದ ಬಳಲುತ್ತಿದ್ದ ಅವರನ್ನು ಕಳೆದ ತಿಂಗಳು ನವೆಂಬರ್ 20ರಂದು ನಿಯಮಿತ ಆರೋಗ್ಯ ತಪಾಸಣೆಗಾಗಿ ಚೆನ್ನೈನ ಎಂಐಒಟಿ ಇಂಟರ್ನ್ಯಾಷನಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಂತರ ಅವರನ್ನು ವೆಂಟಿಲೇಟರ್ನಲ್ಲಿ ಇರಿಸಲಾಗಿತ್ತು.
ಸ್ವಲ್ಪ ಗುಣಮುಖರಾದ ಅವರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮನೆಗೆ ಮರಳಿ ಬಂದಿದ್ದರು. ಮತ್ತೆ ಅವರಿಗೆ ಕೊರೋನಾ ಸೋಂಕು ತಗುಲಿತ್ತು. ತೀವ್ರ ಉಸಿರಾಟದ ಸಮಸ್ಯೆ ಉಂಟಾಗಿ ಗುರುವಾರ ಇಹಲೋಕ ತ್ಯಜಿಸಿದ್ದಾರೆ.
Advertisement. Scroll to continue reading.
ವಿಜಯಕಾಂತ್ 1952ರ ಆಗಸ್ಟ್ 25ರಂದು ಮಧುರೈನಲ್ಲಿ ಜನಿಸಿದರು. ಅವರ ಪೋಷಕರು ಕೆ.ಎನ್.ಅಲಗರಸ್ವಾಮಿ ಮತ್ತು ಆಂಡಾಳ್ ಅಳಗರ್ಸ್ವಾಮಿ. ಜನವರಿ 31, 1990 ರಂದು ಪ್ರೇಮಲತಾ ಅವರನ್ನು ವಿವಾಹವಾಗಿ ಷಣ್ಮುಗ ಪಾಂಡಿಯನ್ ಸೇರಿದಂತೆ ಇಬ್ಬರು ಗಂಡು ಮಕ್ಕಳಿದ್ದಾರೆ.
ವಿಜಯ್ ಕಾಂತ್, ತಮಿಳು ಚಿತ್ರರಂಗದಲ್ಲಿ ಸ್ಟಾರ್ ಆಗಿ ಮೆರೆದ ನಟ. ಕ್ಯಾಪ್ಟನ್ ಪ್ರಭಾಕರ್, ಮಹಾನಗರ ಕಾವಲ್, ವಾನತ್ತೆಪೊಲ, ರಮಣ, ಚಿನ್ನ ಗೌಂಡರ್, ನರಸಿಂಹ ಸೇರಿದಂತೆ 150 ಸಿನಿಮಾಗಳಿಗೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 2005ರಲ್ಲಿ ದೇಸಿಯ ಮುರಪೊಕ್ಕು ದ್ರಾವಿಡ ಕಳಗಂ ಹೆಸರಿನ ತಮ್ಮದೇ ರಾಜಕೀಯ ಪಕ್ಷವನ್ನೂ ಸಹ ಸ್ಥಾಪಿಸಿ, ರಾಜಕೀಯಕ್ಕೆ ಧುಮುಕಿದ ವಿಜಯ್ಕಾತ್ 2011ರಿಂದ 2016 ರ ವರೆಗೆ ತಮಿಳುನಾಡು ವಿಧಾನಸಭೆ ವಿರೋಧ ಪಕ್ಷ ನಾಯಕನಾಗಿಯೂ ಕೆಲಸ ಮಾಡಿದ್ದಾರೆ.
Advertisement. Scroll to continue reading.