ಬೆಂಗಳೂರು: ಅವಧಿ ಮೀರಿ ಪಬ್ನಲ್ಲಿ ಪಾರ್ಟಿ ಮಾಡಿದ ಪ್ರಕರಣ ಸಂಬಂಧ ನಟ ದರ್ಶನ್ ಸೇರಿ 8 ಮಂದಿಗೆ ಸೋಮವಾರ ಪೊಲೀಸರು ವಿವರಣೆ ಕೇಳಿ ನೊಟೀಸ್ ಜಾರಿ ಮಾಡಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕಾಟೇರ’ ಚಿತ್ರ ಬಿಡುಗಡೆಯಾಗಿ ಭಾರೀ ಯಶಸ್ಸು ಕಂಡು 100 ಕೋಟಿ ಕ್ಲಬ್ ಸೇರಿದೆ. ವಿದೇಶದಲ್ಲಿ ಕೂಡ ಸದ್ದು ಮಾಡುತ್ತಿದೆ. ಈ ಹಿನ್ನೆಲೆ ಚಿತ್ರತಂಡ ಜನವರಿ 3ರಂದು ಬೆಂಗಳೂರಿನ ರಾಜಾಜಿನಗರದಲ್ಲಿರುವ ಜೆಟ್ ಲ್ಯಾಗ್ ಪಬ್ ನಲ್ಲಿ ಸಕ್ಸಸ್ ಪಾರ್ಟಿ ಇಟ್ಟುಕೊಂಡಿತ್ತು. ಇದರಲಕ ಚಿತ್ರದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಿರ್ದೇಶಕ ತರುಣ್ ಸುಧೀರ್, ನಾಯಕ ನಟ ದರ್ಶನ್ ಸೇರಿದಂತೆ ಸ್ಯಾಂಡಲ್ ವುಡ್ ನ ಹಲವು ನಟ, ನಟಿಯರು ಭಾಗಿಯಾಗಿದ್ದರು.
ಬಾರ್ ಅಂಡ್ ರೆಸ್ಟೋರೆಂಟ್ ಗೆ ವಿಧಿಸಿರುವ ನಿಯಮ ಪ್ರಕಾರ ಮಧ್ಯರಾತ್ರಿ 1 ಗಂಟೆಗೆ ಪಬ್ ಬಂದ್ ಆಗಬೇಕು. ಆದರೆ ಚಿತ್ರತಂಡ ಮಧ್ಯರಾತ್ರಿ ಮೀರಿ ಬೆಳಗಿನ ಜಾವದವರೆಗೂ ಪಾರ್ಟಿ ಮಾಡಿದ್ದು ಪಾರ್ಟಿ ಮುಗಿಸಿಕೊಂಡು ಹೊರಬರುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
Advertisement. Scroll to continue reading.
ಮೊದಲಿಗೆ ಪಾರ್ಟಿಯಲ್ಲಿ ಭಾಗಿ ಆದ ನಟ ದರ್ಶನ್, ಅಭಿಷೇಕ್ ಅಂಬರೀಷ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಆದರೆ, ಈಗ ಪಾರ್ಟಿಯಲ್ಲಿ ಭಾಗಿ ಆಗಿದ್ದ ನಟ ಡಾಲಿ ಧನುಂಜಯ್, ನಟ ಚಿಕ್ಕಣ್ಣ, ನಿನಾಸಂ ಸತೀಶ್, ನಿರ್ದೇಶಕ ತರುಣ್ ಸುಧೀರ್, ಸಂಗೀತ ನಿರ್ದೇಶಕ ಹರಿಕೃಷ್ಣ ಅವರಿಗೆ ಸಹ ನೊಟೀಸ್ ನೀಡಲಾಗಿದೆ ಎಂದು ಹೇಳಲಾಗಿದೆ. ಸದ್ಯ ನಟ ದರ್ಶನ್ ಸೇರಿದಂತೆ ‘ಕಾಟೇರ’ ಚಿತ್ರತಂಡ ದುಬೈನಲ್ಲಿ ಬೀಡುಬಿಟ್ಟಿದೆ. ಈ ವಾರ ಸಿನಿಮಾ ಹೊರ ದೇಶಗಳಲ್ಲಿ ರಿಲೀಸ್ ಆಗಿದೆ. ದುಬೈನಲ್ಲಿ ನಡೆದ ಗೋಲ್ಡನ್ ಪ್ರೀಮಿಯರ್ನಲ್ಲಿ ಚಿತ್ರತಂಡ ಭಾಗಿ ಆಗಿತ್ತು. ಇನ್ನು ಕರ್ತವ್ಯಲೋಪದ ಹಿನ್ನೆಲೆಯಲ್ಲಿ 6 ಜನ ಪೊಲೀಸರಿಗೂ ನೋಟಿಸ್ ಜಾರಿಯಾಗಿದೆ.