ಸಾಲಿಗ್ರಾಮ – ಭಿಕ್ಷಾಟನೆ ಮಾಡಿ 1ಲಕ್ಷ ರೂ ಸಾಲಿಗ್ರಾಮ ದೇವಳಕ್ಕೆ ನೀಡಿದ ಅಜ್ಜಿ ಶಬರಿಮಲೆ ಯಾತ್ರೆಗೆ
Published
1
ಕೋಟ: ಕಳೆದ ವಾರ ಸಾಲಿಗ್ರಾಮ ದೇವಳದ ಅನ್ನದಾನಕ್ಕೆ ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ 1ಲಕ್ಷ ರೂ ನೀಡಿದ ಅಜ್ಜಿ ಮಂಗಳವಾರ ಶ್ರೀ ಗುರುನರಸಿಂಹನ ಸನ್ನಿಧಿಯಲ್ಲಿ ಪೊಳಲಿಯ ನಾಗೇಶ ಗುರುಸ್ವಾಮಿ ನೇತೃತ್ವದಲ್ಲಿ ಇರುಮುಡಿ ಕಟ್ಟಿ ಅನ್ನದಾನ ಪೂರೈಸಿ ಶಬರಿಮಲೆ ಯಾತ್ರೆ ಹೊರಟಿದ್ದಾರೆ. ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ಅಧ್ಯಕ್ಷ ಕೆ.ಅನಂತಪದ್ಮನಾಭ ಐತಾಳ್ ಹಾಗೂ ಮಯ್ಯ ಟೀಫಿನ್ ಮಾಲಿಕ ರಾಫವೇಂದ್ರ ಮಯ್ಯ ಸಮ್ಮುಖದಲ್ಲಿ ಅಶ್ವಥಮ್ಮ ಇರುಮುಡಿ ಕಟ್ಟುವ ಕಾರ್ಯ ನಡೆಸಿದರು. ಕಳೆದ 26 ವರ್ಷಗಳಿಂದ ವಿವಿಧ ಕ್ಷೇತ್ರಗಳಿಗೆ ದಾನಗೈದು ಶಬರಿಮಲೆ ಯಾತ್ರೆ ಕೈಗೊಂಡಿದ್ದು ಅದರಂತೆ ತಾನು ಭಿಕ್ಷಾಟನೆ ಮಾಡಿ ಸಂಗ್ರಹಿಸಿದ ಹಣವನ್ನು ಉಡುಪಿ, ದಕ್ಷಿಣಕನ್ನಡ ಸೇರಿದಂತೆ ಹೊರರಾಜ್ಯ ಕೇರಳದ ಅಯ್ಯಪ್ಪನ ಸನ್ನಿಧಾನಕ್ಕೂ ಲಕ್ಷರೂ ನೀಡಿ ಮನೆಮಾತಾಗಿರುವ ಅಶ್ವಥಮ್ಮ ಇದೀಗ ಈ ಬಾರಿ ಸಾಲಿಗ್ರಾಮ ಕ್ಷೇತ್ರದಿಂದ ಯಾತ್ರೆಗೆ ಹೊರಟಿರುವುದು ವಿಶೇಷತೆಯಾಗಿದೆ.
ಅಜ್ಜಿಯ ಪಾದಕ್ಕೆರಗಿ ಆಶೀರ್ವಾದ ಪಡೆದರು :
ಅಶ್ವಥಮ್ಮ ಶಬರಿಮಲೆ ಹೊರಡುವ ವಿಚಾರ ಗಮನಿಸಿದ ಸ್ಥಳೀಯ ಅಯ್ಯಪ್ಪ ಭಕ್ತಾಧಿಗಳು,ಇನ್ನಿತರರು ಅಜ್ಜಿಯ ಪಾದಕ್ಕೆರಗಿ ಆಶೀರ್ವಾದ ಪಡೆದು ಅಜ್ಜಿಯ ಹರಕೆಯಂತೆ ಶ್ರೀ ಕ್ಷೇತ್ರ ಅನ್ನದಾನದಲ್ಲಿ ಪಾಲ್ಗೊಂಡು ಸಂತುಷ್ಟರಾದರು.
ಕಳೆದ ಹಲವು ವರ್ಷಗಳಿಂದ ಶ್ರೀ ದೇವಳದ ಎದುರುಗಡೆ ಭಿಕ್ಷಾಟನೆ ಮಾಡುವ ಅಶ್ವಥಮ್ಮನಿಗೆ ಭದ್ರತೆಯ ದೃಷ್ಠಿಯಿಂದ ಶ್ರೀಕ್ಷೇತ್ರದ ಸ್ಥಳದಲ್ಲಿ ಇರಲು ವ್ಯವಸ್ಥೆ ಕಲ್ಪಿಸಲಾಗಿದೆ.