ರಾಷ್ಟ್ರೀಯ

ಸಂಸದರು, ಶಾಸಕರು ಲಂಚ ಪಡೆದರೆ ಇನ್ನು ಯಾವುದೇ ರಕ್ಷಣೆ ಇಲ್ಲ: 1998ರ ತೀರ್ಪು ರದ್ದು ಮಾಡಿದ ಸುಪ್ರೀಂ

0

ನವದೆಹಲಿ: ಸಂಸದರು ಮತ್ತು ಶಾಸಕರು ಸೇರಿದಂತೆ ತಮ್ಮ ಮತಗಳಿಗೆ ಮತ್ತು ಸಂಸತ್ತಿನಲ್ಲಿ ಭಾಷಣಕ್ಕಾಗಿ ಹಣದ ಲಾಭವನ್ನು ಪಡೆದರೆ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸುಪ್ರೀಂ ಕೋರ್ಟ್‌ನ ಏಳು ನ್ಯಾಯಾಧೀಶರ ಪೀಠ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರ ನೇತೃತ್ವದ ಏಳು ಸದಸ್ಯರ ಸಂವಿಧಾನಿಕ ಪೀಠ ಇಂದು ತೀರ್ಪು ನೀಡಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ, ಎಂ.ಎಂ.ಸುಂದರೇಶ್, ಪಿ.ಎಸ್.ನರಸಿಂಹ, ಜೆ.ಬಿ.ಪರ್ಡಿವಾಲ, ಸಂಜಯ್ ಕುಮಾರ್ ಮತ್ತು ಮನೋಜ್ ಮಿಶ್ರಾ ಇದ್ದರು.

Advertisement. Scroll to continue reading.

ಸಂಸತ್ ಸದಸ್ಯರು ಹಾಗೂ ರಾಜ್ಯಗಳ ವಿಧಾನ ಮಂಡಲದ ಸದಸ್ಯರು ಲಂಚ ಪಡೆದಾಗ, ಭ್ರಷ್ಟಾಚಾರ ಎಸಗಿದಾಗ ಅವರ ವಿರುದ್ಧ ತನಿಖೆ ನಡೆಯದಂತೆ ಕಾನೂನು ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಜನಪ್ರತಿನಿಧಿಗಳಿಗೆ ಸುಪ್ರೀಂಕೋರ್ಟ್‌ ಶಾಕ್ ಕೊಟ್ಟಿದೆ.

ಅಕ್ಟೋಬರ್ 5, 2023 ರಂದು ತನ್ನ ತೀರ್ಪನ್ನು ಕಾಯ್ದಿರಿಸಿದ್ದ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಸಂವಿಧಾನ ಪೀಠವು ಈ ವಿಷಯದ ಬಗ್ಗೆ ಇಂದು ತೀರ್ಪು ಪ್ರಕಟಿಸಿತು.

ಇಂದು ಸರ್ವಾನುಮತದ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್‌, ಶಾಸನ ಸಭೆಯ ಸದಸ್ಯರು ಭ್ರಷ್ಟಾಚಾರ ನಡೆಸುವುದು ಅಥವಾ ಲಂಚ ಪಡೆಯುವುದು ಸಾರ್ವಜನಿಕ ಜೀವನದ ನೈತಿಕತೆಯನ್ನು ನಶಿಸುತ್ತದೆ ಎಂದು ಹೇಳಿದರು.

ಅಷ್ಟೇ ಅಲ್ಲದೆ, ಸಂಸತ್ ಅಥವಾ ಶಾಸಕಾಂಗದ ಕಾರ್ಯಚಟುವಟಿಕೆಗೆ ಸಂಬಂಧಿಸದ ಯಾವುದೇ ಸವಲತ್ತನ್ನು ನೀಡಿದರೆ, ಅದು ಕಾನೂನಿನ ಚೌಕಟ್ಟಿನ ಒಳಗೆ ಬರದಿರುವ ವಿನಾಯಿತಿಗಳನ್ನು ಅನುಭವಿಸುವ ವರ್ಗವನ್ನು ಸೃಷ್ಟಿಸಲು ಕಾರಣವಾಗುತ್ತದೆ. ಸಂಸತ್ತಿನ ಸವಲತ್ತುಗಳು ಮೂಲಭೂತವಾಗಿ ಸದನದ ಎಲ್ಲರಿಗೂ ಸಂಬಂಧಿಸಿರುವುದು ಎಂದು ಹೇಳಿದೆ. ರಾಜ್ಯಸಭೆಗೆ ಅಥವಾ ರಾಷ್ಟ್ರಪತಿ/ಉಪರಾಷ್ಟ್ರಪತಿ ಕಚೇರಿಗೆ ನಡೆಯುವ ಚುನಾವಣೆಗಳು ಸಂಸದೀಯ ಸವಲತ್ತುಗಳಿಗೆ ಅನ್ವಯವಾಗುವ ಸಾಂವಿಧಾನಿಕ ನಿಬಂಧನೆಗಳ ವ್ಯಾಪ್ತಿಯಲ್ಲಿ ಬರುತ್ತವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

Advertisement. Scroll to continue reading.

ಅಲ್ಲದೆ, ಈ ಹಿಂದೆ 1998ರಲ್ಲಿ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ಪೀಠ ನೀಡಿದ್ದ ತೀರ್ಪನ್ನು ಇದೀಗ ಸುಪ್ರೀಂ ಕೋರ್ಟ್‌ ಸಪ್ತ ಸದಸ್ಯ ಪೀಠ ಬದಲಾವಣೆ ಮಾಡಿದೆ.

1998ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನ ಅನ್ವಯ, ಸಂಸದರು ಹಾಗೂ ಶಾಸಕರು ಹಣ ಪಡೆದು ಭಾಷಣ ಮಾಡಿದ್ದರೆ ಅಥವಾ ಮತ ಹಾಕಿದ್ದರೆ ಅವರಿಗೆ ಲಂಚ ಪ್ರಕರಣದ ತನಿಖೆ ಅಡಿ ಕಾನೂನಿನ ರಕ್ಷಣೆ ಸಿಗುತ್ತಿತ್ತು. ಇದೀಗ ಸುಪ್ರೀಂ ಕೋರ್ಟ್‌ ನ್ಯಾಯ ಪೀಠ, ಶಾಸಕರು ಹಾಗೂ ಸಂಸದರಿಗೆ ಇದ್ದ ಆ ಸವಲತ್ತನ್ನು ರದ್ದು ಮಾಡಿದೆ.

ಸಂಸದೀಯ ಸೌಲಭ್ಯಗಳ ಅಡಿ ಲಂಚ ಸ್ವೀಕಾರವನ್ನು ಸೇರ್ಪಡೆ ಮಾಡಲು ಸಾಧ್ಯವಿಲ್ಲ ಎಂದಿರುವ ನ್ಯಾಯಪೀಠ, 1998ರಲ್ಲಿ ನೀಡಿದ್ದ ತೀರ್ಪು ಸಂವಿಧಾನದ ಆರ್ಟಿಕಲ್ 105 ಹಾಗೂ 194ಕ್ಕೆ ವ್ಯತಿರಿಕ್ತ ನಿಲುವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ತೀರ್ಪು ಸ್ವಾಗತಿಸಿದ ಪ್ರಧಾನಿ ಮೋದಿ

Advertisement. Scroll to continue reading.

ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ವಾಗತಿಸಿದ್ದು, ತೀರ್ಪು ಶುದ್ಧ ರಾಜಕಾರಣವನ್ನು ಖಚಿತಪಡಿಸುತ್ತದೆ ಮತ್ತು ವ್ಯವಸ್ಥೆ ಮೇಲೆ ಜನರಿಗಿರುವ ನಂಬಿಕೆ ಮತ್ತಷ್ಟು ಹೆಚ್ಚಾಗುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com