ವಿನ್ನರ್ ಆರ್‌ಸಿಬಿಗೆ ಸಿಕ್ಕ ಬಹುಮಾನ ಮೊತ್ತವೆಷ್ಟು? ಉಳಿದ ಯಾರಿಗೆಲ್ಲ ಪ್ರಶಸ್ತಿ? ಇಲ್ಲಿದೆ ಮಾಹಿತಿ…
Published
1
ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್-2 ಕ್ಕೆ ತೆರೆಬಿದ್ದಿದೆ. ದೆಹಲಿಯಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಟೂರ್ನಿ ಅಭೂತಪೂರ್ವ ಯಶಸ್ಸು ಸಾಧಿಸಿದೆ. ಫೈನಲ್ ಪಂದ್ಯದ ಬಳಿಕ ಪ್ರಶಸ್ತಿ ವಿತರಣಾ ಸಮಾರಂಭ ನಡೆದಿದ್ದು, ಇದರಲ್ಲಿ ಯಾರ್ಯಾರಿಗೆ ಯಾವ ಪ್ರಶಸ್ತಿ ಲಭಿಸಿದೆ ಎಂಬ ಮಾಹಿತಿ ಇಲ್ಲಿದೆ..
ಆರ್‌ಸಿಬಿಗೆ ಸಿಕ್ಕ ಬಹುಮಾನ ಮೊತ್ತ: ಫೈನಲ್ ಪಂದ್ಯದಲ್ಲಿ ವಿಜೇತರಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿಯೊಂದಿಗೆ 6 ಕೋಟಿ ರೂ. ಬಹುಮಾನ ಮೊತ್ತ ಪಡೆದುಕೊಂಡಿದೆ.
ರನ್ನರ್ ಅಪ್: ಆರ್ಸಿಬಿ ವಿರುದ್ಧ ಫೈನಲ್ ಪಂದ್ಯದಲ್ಲಿ ಸೋತ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಟ್ರೋಫಿಯೊಂದಿಗೆ 3 ಕೋಟಿ ರೂ. ಬಹುಮಾನ ಮೊತ್ತ ಪಡೆದುಕೊಂಡಿದೆ.
Advertisement. Scroll to continue reading.
ಆರೆಂಜ್ ಕ್ಯಾಪ್: ವುಮೆನ್ಸ್ ಪ್ರೀಮಿಯರ್ ಲೀಗ್ನ 2ನೇ ಸೀಸನ್ನಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಆರ್ಸಿಬಿ ಆಟಗಾರ್ತಿ ಎಲ್ಲಿಸ್ ಪೆರ್ರಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಇದರ ಜೊತೆಗೆ ಆಸ್ಟ್ರೇಲಿಯನ್ ಆಟಗಾರ್ತಿಗೆ 5 ಲಕ್ಷ ರೂ. ಬಹುಮಾನ ಮೊತ್ತ ಸಿಕ್ಕಿದೆ.
ಪರ್ಪಲ್ ಕ್ಯಾಪ್: ಈ ಬಾರಿಯ ಟೂರ್ನಿಯಲ್ಲಿ 12 ವಿಕೆಟ್ ಕಬಳಿಸಿ ಮಿಂಚಿದ್ದ ಶ್ರೇಯಾಂಕಾ ಪಾಟೀಲ್ ಪರ್ಪಲ್ ಕ್ಯಾಪ್ ಜೊತೆ 5 ಲಕ್ಷ ರೂ. ಮೊತ್ತವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಉದಯೋನ್ಮುಖ ಆಟಗಾರ್ತಿ: ಈ ಬಾರಿಯ ಎಮರ್ಜಿಂಗ್ ಪ್ಲೇಯರ್ ಆಫ್ ದಿ ಸೀಸನ್ ಪ್ರಶಸ್ತಿ ಆರ್ಸಿಬಿ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ಗೆ ಒಲಿದಿದೆ. ಈ ಪ್ರಶಸ್ತಿಯೊಂದಿಗೆ ಕನ್ನಡತಿ 5 ಲಕ್ಷ ರೂ. ಬಹುಮಾನ ಮೊತ್ತ ಪಡೆದಿದ್ದಾರೆ.
ಅತ್ಯುತ್ತಮ ಸ್ಟ್ರೈಕ್ ರೇಟ್ ಪ್ರಶಸ್ತಿ: ಈ ಬಾರಿಯ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಅತ್ಯುತ್ತಮ ಸ್ಟ್ರೈಕ್ ರೇಟ್ ಪ್ರದರ್ಶಿಸಿದ್ದ ಆರ್ಸಿಬಿ ಆಟಗಾರ್ತಿ ಜಾರ್ಜಿಯಾ ವೇರ್‌ಹ್ಯಾಮ್ 5 ಲಕ್ಷ ರೂ. ಬಹುಮಾನ ಮೊತ್ತ ಪಡೆದಿದ್ದಾರೆ.
ಫೈನಲ್ ಪಂದ್ಯದ ಶ್ರೇಷ್ಠ ಆಟಗಾರ್ತಿ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ 3 ವಿಕೆಟ್ ಕಬಳಿಸಿ ಮಿಂಚಿದ್ದ ಸೋಫಿ ಮೊಲಿನೊ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಯೊಂದಿಗೆ 2.5 ಲಕ್ಷ ರೂ. ಬಹುಮಾನ ಮೊತ್ತ ಪಡೆದಿದ್ದಾರೆ.
ಹೆಚ್ಚು ಸಿಕ್ಸ್‌ಗಳ ಪ್ರಶಸ್ತಿ: ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್-2 ನಲ್ಲಿ ಅತೀ ಹೆಚ್ಚು ಸಿಕ್ಸ್ ಸಿಡಿಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ್ತಿ ಶಫಾಲಿ ವರ್ಮಾ 5 ಲಕ್ಷ ರೂ. ಬಹುಮಾನ ಮೊತ್ತ ಪಡೆದಿದ್ದಾರೆ.
Advertisement. Scroll to continue reading.
ಕ್ಯಾಚ್ ಆಫ್ ದಿ ಸೀಸನ್: ಡಬ್ಲ್ಯೂಪಿಎಲ್ 2023 ರಲ್ಲಿ ಅತ್ಯುತ್ತಮ ಕ್ಯಾಚ್ ಹಿಡಿದು ಮಿಂಚಿದ್ದ ಮುಂಬೈ ಇಂಡಿಯನ್ಸ್ ತಂಡದ ಆಟಗಾರ್ತಿ ಎಸ್. ಸಜನಾ ಅವರಿಗೆ 5 ಲಕ್ಷ ರೂ. ಬಹುಮಾನ ಮೊತ್ತ ಸಿಕ್ಕಿದೆ.
ಅತ್ಯಂತ ಮೌಲ್ಯಯುತ ಆಟಗಾರ್ತಿ: ಈ ಬಾರಿಯ ಡಬ್ಲ್ಯೂಪಿಎಲ್ನ ಅತ್ಯಂತ ಮೌಲ್ಯಯುತ ಆಟಗಾರ್ತಿಯಾಗಿ ಯುಪಿ ವಾರಿಯರ್ಸ್ ತಂಡದ ದೀಪ್ತಿ ಶರ್ಮಾ ಹೊರಹೊಮ್ಮಿದ್ದಾರೆ. ಈ ಪ್ರಶಸ್ತಿಯೊಂದಿಗೆ ದೀಪ್ತಿ 5 ಲಕ್ಷ ರೂ. ಬಹುಮಾನ ಮೊತ್ತ ಪಡೆದಿದ್ದಾರೆ.
ಫೈನಲ್ ಸಿಕ್ಸರ್ ಪ್ರಶಸ್ತಿ: ಫೈನಲ್ ಪಂದ್ಯದಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ಶಫಾಲಿ ವರ್ಮಾ 1 ಲಕ್ಷ ರೂ. ಬಹುಮಾನ ಮೊತ್ತವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಫೇರ್ ಪ್ಲೇ ಪ್ರಶಸ್ತಿ: ಟೂರ್ನಿಯುದ್ದಕ್ಕೂ ಅತ್ಯುತ್ತಮ ಕ್ರೀಡಾ ಸ್ಪೂರ್ತಿಯೊಂದಿಗೆ ಆಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಫೇರ್ ಪ್ಲೇ ಅವಾರ್ಡ್ ಒಲಿದಿದೆ. ಈ ಪ್ರಶಸ್ತಿಯೊಂದಿಗೆ ಆರ್ಸಿಬಿ ತಂಡ 5 ಲಕ್ಷ ರೂ. ಪಡೆದುಕೊಂಡಿದೆ.