ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಕಹಿ ನೆನಪು ಮಾಡಿಸುವ ಮುನ್ನವೇ ಬೆಂಗಳೂರಿನ ಶಾಲೆಯೊಂದರ ಮುಂಭಾಗದಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ.
ಬೆಳ್ಳಂದೂರಿನ ಪ್ರಕ್ರಿಯಾ ಶಾಲೆ ಮುಂಬಾಗದ ಖಾಲಿ ಜಮೀನಿನಲ್ಲಿ ಬಾಂಬ್ ತಯಾರಿಸಲು ಬಳಸುವ ಜಿಲೆಟಿನ್ ಕಡ್ಡಿ, ಡಿಟೋನೇಟರ್ ಹಾಗೂ ಇತರ ಕೆಲವು ವಸ್ತುಗಳು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಸ್ಫೋಟಕಗಳನ್ನು ಟ್ರಾಕ್ಟರ್ ಒಂದರಲ್ಲಿ ಇಟ್ಟಿರುವುದು ಕಂಡು ಬಂದಿದ್ದು ಮೇಲ್ನೋಟಕ್ಕೆ ಕಟ್ಟಡ ನಿರ್ಮಾಣ ಮಾಡುವ ಜಾಗದಲ್ಲಿ ಬಂಡೆಗಳ ಸ್ಫೋಟಿಸಲು ಸ್ಫೋಟಕಗಳನ್ನು ತಂದಿರುವ ಸಾಧ್ಯತೆ ಇದೆ ಎನ್ನಲಾಗಿದ್ದರೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Advertisement. Scroll to continue reading.
ಬೆಂಗಳೂರಿನ ಹಲವು ಶಾಲೆಗಳಿಗೆ ಕೆಲದಿನಗಳ ಹಿಂದೆ ಬಾಂಬ್ ದಾಳಿ ಬೆದರಿಕೆ ಸಂದೇಶ ಬಂದಿತ್ತು. ನಂತರ ಅದು ನಕಲಿ ಬೆದರಿಕೆ ಎಂಬುದು ತಿಳಿದು ಬಂದಿದ್ದರೂ, ಬೆದರಿಕೆ ಸಂದೇಶದ ಹಿಂದೆ ವಿದೇಶಿ ಉಗ್ರ ಸಂಘಟನೆಗಳ ಕೈವಾಡ ಇರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು.
ಅದಾದ ನಂತರ ಕೆಲವು ದಿನಗಳಲ್ಲಿ ತಮಿಳುನಾಡು ಮತ್ತು ಇತರ ಕೆಲವು ರಾಜ್ಯಗಳ ಶಾಲೆಗಳಿಗೂ ಬೆದರಿಕೆ ಸಂದೇಶ ಬಂದಿತ್ತು. ಇದರ ನಡುವಲ್ಲೇ ಬೆಂಗಳೂರಿನ ಶಾಲೆಯ ಆವರಣದಲ್ಲಿ ಸ್ಪೋಟಕ ವಸ್ತುಗಳು ಪತ್ತೆಯಾಗಿರುವುದು ಆತಂಕ ಹೆಚ್ಚಾಗುವಂತೆ ಮಾಡಿದೆ.
ಮಾರ್ಚ್ ಒಂದರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ್ದ ಬಾಂಬ್ ಸ್ಪೋಟದಲ್ಲಿ ಐದು ಮಂದಿ ಗಾಯಗೊಂಡಿದ್ದರು. ಘಟನೆ ಬಗ್ಗೆ ಸಿಸಿಬಿ ಪೊಲೀಸರು ಹಾಗೂ ರಾಷ್ಟ್ರೀಯ ತನಿಖಾ ದಳ ತನಿಖೆ ನಡೆಸುತ್ತಿವೆ.
ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ ಬಿಡುಗಡೆ ಮಾಡಲಾಗಿದೆ. ಆದಾಗ್ಯೂ, ಕೆಫೆಯಲ್ಲಿ ಬಾಂಬ್ ಇಟ್ಟು ಹೋಗಿದ್ದ ಉಗ್ರನನ್ನು ಬಂಧಿಸಲು ಇನ್ನೂ ಸಾಧ್ಯವಾಗಿಲ್ಲ. ಈ ಎಲ್ಲ ಹಿನ್ನೆಲೆಯಲ್ಲಿ ಪೊಲೀಸರು ಸ್ಫೋಟಕ ಪತ್ತೆಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
Advertisement. Scroll to continue reading.