ರಾಷ್ಟ್ರೀಯ

ಕಚ್ಚತೀವು ದ್ವೀಪವನ್ನು ಶ್ರೀಲಂಕಾಗೆ ಕಾಂಗ್ರೆಸ್‌ ಬಿಟ್ಟುಕೊಟ್ಟಿದೆಯಾ? ಏನಿದು ವಿವಾದ?

0

ದೇಶದಲ್ಲಿ ಲೋಕಸಭಾ ಚುನಾವಣಾ ಕಾವು ಬೇಸಿಗೆಯಷ್ಟೇ ಏರಿದೆ. ಈ ಹೊತ್ತಿನಲ್ಲಿ ಶತಮಾನಗಳ ವಿವಾದವಾಗಿರುವ ಕಚ್ಚತೀವು ದ್ವೀಪದ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ದ್ವೀಪದ ಹೆಸರು ಪ್ರಸ್ತಾಪಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಹಾಗೂ ಡಿಎಂಕೆ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದು ದೇಶದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಅಷ್ಟಕ್ಕೂ ಏನಿದು ಕಚ್ಚತೀವು ದ್ವೀಪ? ಇದು ಎಲ್ಲಿದೆ? ದ್ವೀಪದ ವಿಚಾರದಲ್ಲಿ ಕಾಂಗ್ರೆಸ್‌ ಹೆಸರು ಬಂದಿದ್ದೇಕೆ? ಭಾರತದ ಹಿತಾಸಕ್ತಿಗೆ ಇದು ಏಕೆ ಮುಖ್ಯ? ವಿವಾದದ ಬಗ್ಗೆ ಶ್ರೀಲಂಕಾ ಏನು ಹೇಳುತ್ತೆ? ಪ್ರಧಾನಿ ಮೋದಿ ಮಾತಿಗೆ ಕಾಂಗ್ರೆಸ್ ಪ್ರತಿಕ್ರಿಯೆ ಏನು ಎಂಬ ಪ್ರಶ್ನೆಗಳು ಮೂಡುವುದು ಸಹಜ.

1974-76ರ ನಡುವಿನ ಭಾರತ-ಶ್ರೀಲಂಕಾ ಕಡಲ ಗಡಿ ಒಪ್ಪಂದಗಳ ಪ್ರಕಾರ ಈಗ ಶ್ರೀಲಂಕಾದ ಭಾಗವಾಗಿರುವ ಕಚ್ಚತೀವು ದ್ವೀಪವನ್ನು ಸಾಂಪ್ರದಾಯಿಕವಾಗಿ ಭಾರತಕ್ಕೆ ಹಿಂಪಡೆಯಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಸರ್ಕಾರಿ ಸಮಾರಂಭದಲ್ಲಿ ಒತ್ತಾಯಿಸಿದ್ದರು. ತಮಿಳುನಾಡು ಮೀನುಗಾರರು ಎದುರಿಸುತ್ತಿರುವ ಮಹತ್ವದ ಸಮಸ್ಯೆಯನ್ನು ಪರಿಹರಿಸಲು ಕಚ್ಚತೀವುವನ್ನು ಹಿಂಪಡೆಯಬೇಕು. ತಮಿಳುನಾಡು ಮೀನುಗಾರರು ತಮ್ಮ ಸಾಂಪ್ರದಾಯಿಕ ಮೀನುಗಾರಿಕಾ ವಲಯದಲ್ಲಿ ತಮ್ಮ ಹಕ್ಕುಗಳನ್ನು ಚಲಾಯಿಸುವಂತಾಗಬೇಕು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಇದು ಸೂಕ್ತ ಸಮಯ. ಈ ಬಗ್ಗೆ ಪ್ರಧಾನಿ ಮೋದಿ ಅವರಿಗೆ ನೆನಪಿಸುವ ಕರ್ತವ್ಯ ನನ್ನದು ಎಂದು ಹೇಳಿದ್ದರು.

Advertisement. Scroll to continue reading.

ಜೊತೆಗೆ ತಮಿಳುನಾಡು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಅವರ ಅರ್ಜಿಗೆ ಆರ್‌ಟಿಐ ನೀಡಿದ್ದ ಉತ್ತರವನ್ನು ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಕಿಡಿಕಾರಿದ್ದರು. 75 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಭಾರತದ ಭಾವೈಕ್ಯ ಮತ್ತು ಹಿತಾಸಕ್ತಿಯನ್ನು ಕಡೆಗಣಿಸಿದೆ ಎಂದು ಮೋದಿ ಆರೋಪಿಸಿದ್ದರು. ಅಲ್ಲಿಂದ ಕಚ್ಚತೀವು ದ್ವೀಪದ ವಿಚಾರ ಮತ್ತೆ ಮುನ್ನೆಲೆಗೆ ಬಂತು. ಲೋಕಸಭಾ ಚುನಾವಣೆ ಹೊತ್ತಲ್ಲಿ ರಾಜಕೀಯ ಸ್ವರೂಪ ಪಡೆದುಕೊಂಡಿತು. ಕಚ್ಚತೀವು ಹಿಂಪಡೆಯಬೇಕೆಂಬ ಬೇಡಿಕೆ ಬಹಳ ಹಿಂದಿನಿಂದಲೂ ಇದೆ. ಆದರೆ ಗಮನಾರ್ಹವಾಗಿ, ಈ ಬಾರಿಯ ಬೇಡಿಕೆಯು ಶ್ರೀಲಂಕಾ ತನ್ನ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಮಯದಲ್ಲಿ ಬಂದಿದೆ. ಏಪ್ರಿಲ್ 2022 ರ ಹೊತ್ತಿಗೆ ಶ್ರೀಲಂಕಾದ ಹಣದುಬ್ಬರ ದರವು 33.8% ರಷ್ಟಿದೆ.

ಏನಿದು ಕಚ್ಚತೀವು ದ್ವೀಪ, ಎಲ್ಲಿದೆ?
ಕಚ್ಚತೀವು ಭಾರತ ಮತ್ತು ಶ್ರೀಲಂಕಾ ನಡುವಿನ ಪಾಕ್ ಜಲಸಂಧಿಯಲ್ಲಿರುವ ಒಂದು ಸಣ್ಣ ಜನವಸತಿಯಿಲ್ಲದ ದ್ವೀಪವಾಗಿದೆ. ಸುಮಾರು 285 ಎಕರೆ ವಿಸ್ತೀರ್ಣ ಹೊಂದಿದೆ. ಇದರ ಉದ್ದ 1.6 ಕಿಮೀಗಿಂತ ಹೆಚ್ಚಿಲ್ಲ. ಭಾರತದ ಕರಾವಳಿಯಿಂದ ಸುಮಾರು 33 ಕಿಮೀ ದೂರದಲ್ಲಿ ರಾಮೇಶ್ವರಂನ ಈಶಾನ್ಯದಲ್ಲಿದೆ. ಶ್ರೀಲಂಕಾದ ಉತ್ತರ ತುದಿಯಲ್ಲಿ ಜಾಫ್ನಾದಿಂದ ಸುಮಾರು 62 ಕಿಮೀ ನೈರುತ್ಯದಲ್ಲಿದೆ. ಶ್ರೀಲಂಕಾಕ್ಕೆ ಸೇರಿದ ಜನವಸತಿ ಡೆಲ್ಫ್ಟ್‌ ದ್ವೀಪದಿಂದ 24 ಕಿಮೀ ದೂರದಲ್ಲಿದೆ. ಬಂಗಾಳ ಕೊಲ್ಲಿಯನ್ನು ಅರಬ್ಬಿ ಸಮುದ್ರಕ್ಕೆ ಸಂಪರ್ಕಿಸುತ್ತದೆ. ಇದು ಶ್ರೀಲಂಕಾ ಮತ್ತು ಭಾರತದ ನಡುವಿನ ವಿವಾದಿತ ಪ್ರದೇಶವಾಗಿದೆ. ಭಾರತವು 1976 ರವರೆಗೆ ಈ ದ್ವೀಪದ ಮೇಲೆ ಹಕ್ಕು ಸಾಧಿಸಿತ್ತು. ಪ್ರಸ್ತುತ ಶ್ರೀಲಂಕಾ ಆಡಳಿತದ ವ್ಯಾಪ್ತಿಗೆ ಒಳಪಟ್ಟಿದೆ.

ದ್ವೀಪದ ಇತಿಹಾಸ ಏನು?
14 ನೇ ಶತಮಾನದಲ್ಲಿ ಜ್ವಾಲಾಮುಖಿ ಸ್ಫೋಟದಿಂದಾಗಿ ಕಚ್ಚತೀವು ದ್ವೀಪವು ರೂಪುಗೊಂಡಿತು. ರಾಮನಾಡಿನ ರಾಜರು (ಇಂದಿನ ರಾಮನಾಥಪುರಂ, ತಮಿಳುನಾಡು) ಕಚ್ಚತೀವು ದ್ವೀಪವನ್ನು ಹೊಂದಿದ್ದರು. ಅದು ನಂತರ ಮದ್ರಾಸ್ ಪ್ರೆಸಿಡೆನ್ಸಿಯ ಭಾಗವಾಯಿತು. 1921 ರಲ್ಲಿ, ಶ್ರೀಲಂಕಾ ಮತ್ತು ಭಾರತ ಎರಡೂ ದೇಶಗಳು ಈ ಭೂಮಿಯನ್ನು ಮೀನುಗಾರಿಕೆಗಾಗಿ ಹಕ್ಕು ಸಾಧಿಸಿದವು. ಆಗ ವಿವಾದವು ಇತ್ಯರ್ಥವಾಗಲಿಲ್ಲ. 285 ಎಕರೆ ಭೂಮಿಯನ್ನು ಬ್ರಿಟಿಷ್ ಆಳ್ವಿಕೆಯಲ್ಲಿ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಡಳಿತ ನಡೆಸಿದ್ದವು.

ಕಚ್ಚತೀವು ದ್ವೀಪ ವಿವಾದವೇನು?
ಎರಡೂ ದೇಶಗಳ ಮೀನುಗಾರರು ಬಹಳ ವರ್ಷಗಳಿಂದ ಸಂಘರ್ಷವಿಲ್ಲದೆ ಪರಸ್ಪರರು ಇಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು. ಭಾರತ-ಶ್ರೀಲಂಕಾ ಸಮುದ್ರ ಗಡಿ ಒಪ್ಪಂದಗಳಿಗೆ ಸಹಿ ಹಾಕಿದಾಗ ಈ ಸಮಸ್ಯೆ ತಲೆದೋರಿತು. ಒಪ್ಪಂದಗಳು ಭಾರತ ಮತ್ತು ಶ್ರೀಲಂಕಾದ ಅಂತರರಾಷ್ಟ್ರೀಯ ಸಮುದ್ರ ಗಡಿಯನ್ನು ಗುರುತಿಸಿವೆ.

Advertisement. Scroll to continue reading.

ಈ ಒಪ್ಪಂದವು ಪಾಕ್ ಜಲಸಂಧಿಯಲ್ಲಿ ಸಂಪನ್ಮೂಲ ನಿರ್ವಹಣೆ ಮತ್ತು ಕಾನೂನು ಜಾರಿಯನ್ನು ಸುಲಭಗೊಳಿಸುವ ಗುರಿಯನ್ನು ಹೊಂದಿದೆ. ಈಗ ಭಾರತೀಯ ಮೀನುಗಾರರಿಗೆ ದ್ವೀಪವನ್ನು ವಿಶ್ರಾಂತಿ, ಬಲೆ ಒಣಗಿಸುವಿಕೆ ಮತ್ತು ವಾರ್ಷಿಕ ಸೇಂಟ್ ಆಂಥೋನಿ ಉತ್ಸವಕ್ಕಾಗಿ ಮಾತ್ರ ಬಳಸಲು ಅನುಮತಿಸಲಾಗಿದೆ. ಮೀನುಗಾರಿಕೆಗೆ ದ್ವೀಪವನ್ನು ಬಳಸಲು ಅವರಿಗೆ ಅನುಮತಿ ಇಲ್ಲ.

ಒಪ್ಪಂದದ ಬಳಿಕ ಮುಂದಿನ ಕೆಲವು ದಶಕಗಳು ಉತ್ತಮವಾಗಿ ಸಾಗಿದವು. ಆದರೆ ಭಾರತೀಯ ಭೂಖಂಡದ ಕಪಾಟಿನಲ್ಲಿ ಮೀನು ಮತ್ತು ಜಲಚರಗಳ ಅಭಾವ ಎದುರಾದಾಗ ಸಮಸ್ಯೆ ಗಂಭೀರವಾಯಿತು. ಇದರ ಪರಿಣಾಮವಾಗಿ ಈ ಪ್ರದೇಶದಲ್ಲಿ ಭಾರತೀಯ ಮೀನುಗಾರರ ಸಂಖ್ಯೆ ಹೆಚ್ಚಾಯಿತು. ಅವರು ಆಧುನಿಕ ಮೀನುಗಾರಿಕೆ ಟ್ರಾಲಿಗಳನ್ನು ಸಹ ಬಳಸುತ್ತಿದ್ದಾರೆ. ಇದು ಸಮುದ್ರ ಜೀವಿಗಳು ಮತ್ತು ಪರಿಸರ ವ್ಯವಸ್ಥೆಗೆ ಹಾನಿ ಮಾಡುತ್ತದೆ ಎನ್ನಲಾಗಿದೆ.

ಎಲ್‌ಟಿಟಿಇ ಯುಗ ಮತ್ತು ಚಟುವಟಿಕೆಗೆ ನಿರ್ಬಂಧ
ಎಲ್‌ಟಿಟಿಇ (ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ, ಶ್ರೀಲಂಕಾದ ಪ್ರತ್ಯೇಕತಾವಾದಿ ಗುಂಪು) ಯುಗದಲ್ಲಿ, ಶ್ರೀಲಂಕಾ ಸರ್ಕಾರವು ಮೀನುಗಾರರ ಸುಲಭ ಚಟುವಟಿಕೆಗೆ ನಿರ್ಬಂಧ ವಿಧಿಸಿತು. 2009 ರಲ್ಲಿ, ಶ್ರೀಲಂಕಾವು ಪಾಕ್ ಜಲಸಂಧಿಯಲ್ಲಿ ತನ್ನ ಕಡಲ ಗಡಿಯನ್ನು ಹೆಚ್ಚು ಕಾಪಾಡಲು ಪ್ರಾರಂಭಿಸಿತು. ತಮಿಳು ಬಂಡುಕೋರರು ದೇಶಕ್ಕೆ ನುಸುಳುವ ಸಾಧ್ಯತೆಯನ್ನು ಕಡಿಮೆ ಮಾಡಲು ಹೀಗೆ ಮಾಡಿತು.

ಕೇಂದ್ರ ವರ್ಸಸ್ ತಮಿಳುನಾಡು ಸರ್ಕಾರ
1974 ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು 1974-76 ರ ನಡುವೆ ನಾಲ್ಕು ಸಮುದ್ರ ಗಡಿ ಒಪ್ಪಂದಗಳಿಗೆ ಸಹಿ ಹಾಕಿದರು. ಆಗಿನ ಶ್ರೀಲಂಕಾ ಅಧ್ಯಕ್ಷರಾಗಿದ್ದ ಶ್ರೀಮಾವೋ ಬಂಡಾರನಾಯಕೆ ಅವರೊಂದಿಗೆ ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಟ್ಟರು. ಇದಕ್ಕೆ ಪ್ರತಿಕ್ರಿಯೆಯಾಗಿ 1991 ರಲ್ಲಿ ತಮಿಳುನಾಡು ವಿಧಾನಸಭೆಯು ನಿರ್ಣಯದ ಮೂಲಕ ಕಚ್ಚತೀವು ದ್ವೀಪವನ್ನು ಹಿಂಪಡೆಯಲು ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸಿತು.

Advertisement. Scroll to continue reading.

2008 ರಲ್ಲಿ ಅಂದಿನ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ, ಕಚ್ಚತೀವು ಒಪ್ಪಂದಗಳನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದರು. ಕಚ್ಚತೀವುವನ್ನು ಶ್ರೀಲಂಕಾಕ್ಕೆ ನೀಡಿದ ದೇಶಗಳ ನಡುವಿನ ಎರಡು ಒಪ್ಪಂದಗಳು ಅಸಂವಿಧಾನಿಕ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಹೇಳೋದೇನು?
1974 ರಲ್ಲಿ ಸ್ನೇಹಪರ ಒಪ್ಪಂದದ ಪ್ರಕಾರ ದ್ವೀಪವನ್ನು ಶ್ರೀಲಂಕಾಗೆ ಬಿಟ್ಟುಕೊಡಲಾಗಿದೆ. ಭಾರತದ ನೆರೆ ರಾಷ್ಟç ಬಾಂಗ್ಲಾದೇಶದ ಜೊತೆಗೂ ಇದೇ ರೀತಿಯ ಸ್ನೇಹದ ಭಾವನೆ ತೋರಲಾಗಿದೆ. ಚುನಾವಣೆ ಸಂದರ್ಭದಲ್ಲಿ ಇಂತಹ ಸೂಕ್ಷ್ಮ ವಿಚಾರಗಳನ್ನು ಮುನ್ನೆಲೆಗೆ ತರುತ್ತಿರುವುದು ಮೋದಿ ಅವರ ಹತಾಶೆ ಭಾವನೆ ತೋರುತ್ತದೆ. ಕಳೆದ 10 ವರ್ಷಗಳಿಂದ ಆಡಳಿತ ನಡೆಸಿರುವ ಅವರು ದ್ವೀಪವನ್ನು ಮರಳಿ ಪಡೆಯುವ ಪ್ರಯತ್ನವನ್ನು ಯಾಕೆ ಮಾಡಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.

ಶ್ರೀಲಂಕಾ ಏನು ಹೇಳುತ್ತೆ?
ಭಾರತವು ಕಚ್ಚತೀವು ದ್ವೀಪವನ್ನು ಶ್ರೀಲಂಕಾದಿಂದ ಹಿಂಪಡೆದುಕೊಳ್ಳಲು ಯಾವುದೇ ಆಧಾರವಿಲ್ಲ. ಭಾರತದಲ್ಲಿ ಈಗ ಚುನಾವಣಾ ಸಮಯ. ಹೀಗಾಗಿ ಕಚ್ಚತೀವು ಹಿಂಪಡೆಯುವ ಕುರಿತಾದ ಮಾತುಗಳು ಕೇಳಿಬರುವುದು ವಿಶೇಷವೇನಲ್ಲ. 1974 ರ ಒಪ್ಪಂದದ ಪ್ರಕಾರ, ಎರಡೂ ದೇಶಗಳು ದ್ವೀಪದ ಬಳಿ ತಮ್ಮ ತಮ್ಮ ವ್ಯಾಪ್ತಿಗೆ ಬರುವ ಜಲಪ್ರದೇಶಗಳಲ್ಲಿ ಮೀನುಗಾರಿಕೆ ನಡೆಸಬಹುದಾಗಿತ್ತು. ಬಳಿಕ, 1976 ರಲ್ಲಿ ಒಪ್ಪಂದದ ತಿದ್ದುಪಡಿಯಾಗಿದೆ. ಅದರನ್ವಯ, ದ್ವೀಪದ ನೆರೆಯ ಸಾಗರದಲ್ಲಿ ಎರಡೂ ಕಡೆಯವರು ಮೀನುಗಾರಿಕೆ ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ಶ್ರೀಲಂಕಾ ಸಚಿವ ದೇವಾನಂದ ತಿಳಿಸಿದ್ದಾರೆ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com