ಮಾಲೆ: ಭಾರತ-ಮಾಲ್ಡೀವ್ಸ್ ರಾಜತಾಂತ್ರಿಕ ಸಂಬಂಧಗಳ ಮುನಿಸಿನ ನಡುವೆ ಪ್ರವಾಸಿಗರನ್ನು ಮರಳಿ ಸೆಳೆಯಲು ಭಾರತದಲ್ಲಿ ರೋಡ್‌ಶೋಗಳನ್ನು ನಡೆಸುವುದಾಗಿ ಮಾಲ್ಡೀವ್ಸ್ ಪ್ರವಾಸೋದ್ಯಮ ಸಂಸ್ಥೆ ಹೇಳಿದೆ.
ಈ ಸಂಬಂಧ ಮಾಲ್ಡೀವ್ಸ್ ಅಸೋಸಿಯೇಶನ್ ಆಫ್ ಟ್ರಾವೆಲ್ ಏಜೆಂಟ್ಸ್ ಮತ್ತು ಟೂರ್ ಆಪರೇಟರ್ಸ್ (ಮಾಟಾಟೋ) ಅವರು ಮಾಲೆಯಲ್ಲಿ ಭಾರತೀಯ ಹೈಕಮಿಷನರ್ ಮುನು ಮಹಾವರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಭಾರತದ ಪ್ರಮುಖ ನಗರಗಳಲ್ಲಿ ಸಮಗ್ರ ರೋಡ್ ಶೋಗಳನ್ನು ನಡೆಸುವುದರ ವಿಚಾರವಾಗಿ ಪ್ರಸ್ತಾಪಿಸಿದ್ದಾರೆ.
ಇತ್ತೀಚೆಗೆ ಗಮನಾರ್ಹ ಕುಸಿತ ಕಂಡ ಪ್ರವಾಸೋದ್ಯಮ ಸಂಸ್ಥೆಯನ್ನು ಮತ್ತಷ್ಟು ಉತ್ತೇಜಿಸಲು ಭಾರತದಾದ್ಯಂತದ ಪ್ರಮುಖ ಪ್ರವಾಸಿ ಸಂಘಗಳು ಮತ್ತು ಉದ್ಯಮದ ಪಾಲುದಾರರೊಂದಿಗೆ ಪಾಲುದಾರಿಕೆಯನ್ನು ಹೊಂದಲು ಅವರು ಎದುರು ನೋಡುತ್ತಿದ್ದಾರೆ ಎಂದು ಮಾಟಾಟೋ ತಿಳಿಸಿರುವುದಾಗಿ ವರದಿಯಾಗಿದೆ.
Advertisement. Scroll to continue reading.
ಪ್ರಸ್ತುತ ಭಾರತದ ಪ್ರಮುಖ ನಗರಗಳಲ್ಲಿ ಸಮಗ್ರ ರೋಡ್ ಶೋಗಳನ್ನು ಪ್ರಾರಂಭಿಸಲು ಮತ್ತು ಮುಂಬರುವ ತಿಂಗಳುಗಳಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಯೋಜನೆಗಳು ನಡೆಯುತ್ತಿವೆ ಎಂದು ಮಾಲ್ಡೀವ್ಸ್ ಪ್ರವಾಸೋದ್ಯಮ ಸಂಸ್ಥೆ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.
ಪ್ರವಾಸಿಗರ ಕುಸಿತ ಏಕೆ..?: ಜನವರಿ 6 ರಂದು ಲಕ್ಷ ದ್ವೀಪಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಲ್ಡೀವ್ಸ್‌ನ ಮೂವರು ಅಧಿಕಾರಿಗಳು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು. ಇದರ ಬೆನ್ನಲ್ಲೇ ಮಾಲ್ಡೀವ್ಸ್‌ಗೆ ಭೇಟಿ ನೀಡುವವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಭಾರತ 6ನೇ ಸ್ಥಾನಕ್ಕೆ ಕುಸಿದಿತ್ತು.
ಮಾಲ್ಡೀವ್ಸ್‌ನ ಪ್ರವಾಸೋದ್ಯಮ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ದೇಶಕ್ಕೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಪ್ರಸ್ತುತ ಮಾಲ್ಡೀವ್ಸ್‌ಗೆ ಭೇಟಿ ನೀಡುವವರ ಪಟ್ಟಿಯಲ್ಲಿ ಚೀನಾ 71,995 ಪ್ರವಾಸಿಗರೊಂದಿಗೆ ಅಗ್ರಸ್ಥಾನ ಪಡೆದುಕೊಂಡಿದೆ. ಇದರ ನಂತರದಲ್ಲಿ ಬ್ರಿಟನ್ (66,999), ರಷ್ಯಾ (66,803), ಇಟಲಿ (61,379), ಜರ್ಮನಿ (52,256) ದೇಶಗಳಿವೆ. ಭಾರತ 37,417 ಪ್ರವಾಸಿಗರೊಂದಿಗೆ 6ನೇ ಸ್ಥಾನದಲ್ಲಿದೆ.
Advertisement. Scroll to continue reading.