ನಟಿ ಮಾನ್ವಿತಾ ಕಾಮತ್ಗೆ ಕೂಡಿಬಂದ ಕಂಕಣ ಭಾಗ್ಯ; ಹುಡುಗ ಯಾರು?
Published
1
ಕನ್ನಡದ ಮತ್ತೋರ್ವ ನಟಿ ಹೊಸ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಕೆಂಡ ಸಂಪಿಗೆ ಸಿನಿಮಾ ಮೂಲಕ ಚಿತ್ರೋದ್ಯಮಕ್ಕೆ ಕಾಲಿಟ್ಟ ಮಾನ್ವಿತಾ ಕಾಮತ್ ಮೇ 1ರಂದು ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮದುವೆ ಕುರಿತಾದ ಡಿಜಿಟೆಲ್ ಆಮಂತ್ರಣ ಪತ್ರಿಕೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಅವರು ಅಪ್ ಲೋಡ್ ಮಾಡಿದ್ದಾರೆ.
ಅಂದಹಾಗೆ, ಮಾನ್ವಿತಾರನ್ನು ಕೈಹಿಡಿಯುತ್ತಿರುವ ವರ ಯಾರು? ಅರುಣ್ ಕುಮಾರ್. ಹೌದು, ಮ್ಯೂಸಿಕ್ ಪ್ರೊಡ್ಯೂಸರ್ ಆಗಿರುವ ಅರುಣ್ ಕುಮಾರ್ ಅವರು ಮಾನ್ವಿತಾ ಜೊತೆಗೆ ಸಪ್ತಪದಿ ತುಳಿಯಲಿದ್ದಾರೆ.
ನಟಿ ಮಾನ್ವಿತಾ ಮತ್ತು ಅರುಣ್ ಕುಮಾರ್ ಅವರ ವಿವಾಹವು ಮೇ 1ರಂದು ಮಂಗಳೂರಿನಲ್ಲಿ ಜರುಗಲಿದೆ. ಹಳದಿ ಶಾಸ್ತ್ರವು ಏಪ್ರಿಲ್ 29ರಂದು ನಡೆಯಲಿದೆ ಮತ್ತು ಸಂಗೀತ್ ಶಾಸ್ತ್ರವು ಏಪ್ರಿಲ್ 30ರಂದು ನಡೆಯಲಿದೆ. ಕೊಂಕಣಿ ಸಾಂಪ್ರದಾಯದಂತೆ ಮೇ 1ರಂದು ಮಾನ್ವಿತಾ ಮತ್ತು ಅರುಣ್ ದಾಂಪತ್ಯ ಬದುಕಿಗೆ ಕಾಲಿಡಲಿದ್ದಾರೆ.
ದಕ್ಷಿಣ ಕನ್ನಡದ ಮಾನ್ವಿತಾ ಮೊದಲು ಬಣ್ಣ ಹಚ್ಚಿದ್ದು ‘ದುನಿಯಾ’ ಸೂರಿ ಅವರ ‘ಕೆಂಡಸಂಪಿಗೆ’ ಚಿತ್ರಕ್ಕಾಗಿ. ಆನಂತರ ‘ಟಗರು’ ಸಿನಿಮಾದಿಂದ ಅವರ ಖ್ಯಾತಿ ಇನ್ನಷ್ಟು ಹೆಚ್ಚಿತು. ಇದರ ನಡುವೆ ‘ಕನಕ’, ‘ಚೌಕ’, ‘ತಾರಕಾಸುರ’, ‘ರಿಲ್ಯಾಕ್ಸ್ ಸತ್ಯ’, ‘ಇಂಡಿಯಾ ವರ್ಸಸ್ ಇಂಗ್ಲೆಂಡ್’, ‘ಶಿವ 143’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಾನ್ವಿತಾ ನಟನೆಯ ‘ಅಪ್ಪಾ ಐ ಲವ್ ಯೂ’ ಸಿನಿಮಾ (ಏ.12) ಇಂದು ತೆರೆಕಂಡಿದೆ. ‘ಬ್ಯಾಡ್’, ‘ರಾಜಸ್ಥಾನ್ ಡೈರೀಸ್’, ‘ಹ್ಯಾಪಿಲಿ ಮ್ಯಾರೀಡ್’ ಸಿನಿಮಾಗಳು ತೆರೆಗೆ ಬರಬೇಕಿವೆ.