ಜೆರುಸಲೇಂ: ನಿರೀಕ್ಷೆಯಂತೆಯೇ ಇಸ್ರೇಲ್ ಮೇಲೆ ಇರಾನ್ ದಾಳಿ ನಡೆಸಿದೆ. ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ ಕ್ರೂಸ್ ಕ್ಷಿಪಣಿಗಳು ಸೇರಿದಂತೆ 200ಕ್ಕೂ ಹೆಚ್ಚು ಬಗೆಯ ಡ್ರೋನ್ ಹಾಗೂ ಕ್ಷಿಪಣಿಗಳ ದಾಳಿಗಳನ್ನು ನಡೆಸಿದೆ.
ಸಿರಿಯಾದ ರಾಜಧಾನಿ ಡಮಾಸ್ಕಸ್ನಲ್ಲಿರುವ ತನ್ನ ರಾಯಭಾರ ಕಚೇರಿ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗೆ ಪ್ರತಿಯಾಗಿ ಇರಾನ್ ಈ ಕ್ರಮ ಕೈಗೊಂಡಿದೆ.
ಇಸ್ರೇಲಿ ಮಿಲಿಟರಿಯ ವಕ್ತಾರ, ರಿಯರ್ ಅಡ್ಮ್. ಡೇನಿಯಲ್ ಹಗರಿ ಮಾತನಾಡಿ, ಇರಾನ್ ಹಲವಾರು ಡ್ರೋನ್ಗಳು, ಕ್ರೂಸ್ ಕ್ಷಿಪಣಿಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದ್ದು, ಬಹುಪಾಲು ಕ್ಷಿಪಣಿ ಹಾಗೂ ಡ್ರೋಣ್ ಗಳನ್ನು ಇಸ್ರೇಲ್ನ ಗಡಿಯ ಹೊರಗೆ ತಡೆಹಿಡಿಯಲಾಗಿದೆ ಎಂದು ಹೇಳಿದ್ದಾರೆ.
Advertisement. Scroll to continue reading.
ಡ್ರೋನ್ಗಳು ಹಾಗೂ ಕ್ಷಿಪಣಿಗಳನ್ನು ಗಾಳಿಯಲ್ಲಿ ಹೊಡೆದುರುಳಿಸುವಲ್ಲಿ ಅಮೆರಿಕ ಹಾಗೂ ಬ್ರಿಟಿಷ್ ವಾಯುಪಡೆಗಳು ಇಸ್ರೇಲ್ಗೆ ಸಹಾಯ ಮಾಡಿವೆ. ಇಸ್ರೇಲ್ ದಕ್ಷಿಣ ಭಾಗದಲ್ಲಿರುವ ಸೇನಾ ನೆಲೆಯಲ್ಲಿ ಸಣ್ಣಪುಟ್ಟ ಹಾನಿಗಳಾಗಿವೆ. ಈ ದಾಳಿಯಿಂದ ಯಾವುದೇ ಸಾವು, ನೋವು ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.
ಇದೇ ವೇಳೆ ದಾಳಿಗೆ ಇಸ್ರೇಲ್ ಪ್ರತಿಕ್ರಿಯೆ ನೀಡುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ದೇಶದ ಭದ್ರತೆ ರಕ್ಷಣೆಗೆ ಸೇನೆ ಏನನ್ನೂ ಬೇಕಾದರೂ ಮಾಡುತ್ತದೆ ಎಂದಿದ್ದಾರೆ.
ಇನ್ನು ಇರಾನ್ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಹೇಳಿಕೆ ನೀಡಿ, ಇರಾನ್ನ ಹಿತಾಸಕ್ತಿಗಳಿಗೆ ಹಾನಿ ಮಾಡುವ ಯಾವುದೇ ಬೆಂಬಲ ಅಥವಾ ಭಾಗವಹಿಸುವಿಕೆಗೆ ಇರಾನ್ನ ಸಶಸ್ತ್ರ ಪಡೆಗಳು ತಕ್ಕ ಉತ್ತರ ನೀಡಲಿದೆ ಎಂದು ಅಮೆರಿಕಾಗೆ ಎಚ್ಚರಿಕೆ ನೀಡಿದೆ.
ಇಸ್ರೇಲ್ ಬೆಂಬಲಕ್ಕೆ ನಿಂತಿರುವ ಅಮೆರಿಕಾ, ದಾಳಿಯನ್ನು ಖಂಡಿಸಿದೆ. ಮಿತ್ರ ರಾಷ್ಟ್ರ ಇಸ್ರೇಲ್ ಪರ ನಿಲ್ಲುವುದಾಗಿ ಹೇಳಿದ್ದ ಬೈಡನ್ ಅವರು, ಇಸ್ರೇಲ್ಗೆ ಸೇನಾ ನೆರವನ್ನು ಒದಗಿಸಿದ್ದಾರೆ.
Advertisement. Scroll to continue reading.
ಈ ನಡುವೆ ಇಸ್ರೇಲ್ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಮತ್ತು ಯುಎಸ್ ಸೆಕ್ರೆಟರಿ ಜನರಲ್ ಆಂಟೊನಿಯೊ ಗುಟೆರಸ್ ಇರಾನ್ ದಾಳಿಯನ್ನು ಖಂಡಿಸಿದ್ದಾರೆ. ಇರಾನ್ ದಾಳಿಯ ಕುರಿತು ಇಸ್ರೇಲ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆಯನ್ನು ಕರೆದಿದೆ.
ಡಮಾಸ್ಕಸ್ನಲ್ಲಿರುವ, ಇರಾನ್ ರಾಯಭಾರ ಕಚೇರಿ ಮೇಲೆ ಏಪ್ರಿಲ್ 1 ರಂದು ವೈಮಾನಿಕ ದಾಳಿ ನಡೆಸಿದ್ದ ಇಸ್ರೇಲ್ ಅಟ್ಟಹಾಸ ಮೆರೆದಿದೆ ಎಂದು ಇರಾನ್ ಆರೋಪಿಸಿತ್ತು. ಡಮಾಸ್ಕಸ್ ಮೇಲೆ ಇಸ್ರೇಲ್ ದಾಳಿ ಮಾಡಿದಾಗ, ಇರಾನ್ ಸೇನಾಧಿಕಾರಿಗಳು ಸೇರಿ ಹಲವು ಇರಾನ್ ಅಧಿಕಾರಿಗಳು ಜೀವ ಬಿಟ್ಟಿದ್ದಾರೆ ಎಂದು ಮಾಹಿತಿ ನೀಡಿ ಆಕ್ರೋಶ ಹೊರಹಾಕಿತ್ತು ಇರಾನ್. ಹೀಗೆ ಡಮಾಸ್ಕಸ್ ದಾಳಿಗೆ, ಇರಾನ್ ಪ್ರತಿದಾಳಿ ಆರಂಭಿಸಿದೆ.
Advertisement. Scroll to continue reading.