ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು. ಹಾಸನ ನಗರದ ಹೇಮಾವತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯ್ತು. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರಗತಿಪರ ಸಂಘಟನೆಗಳು, ಸಾಹಿತಿ, ಚಿಂತಕರು ಪ್ರತಿಭಟನೆ ನಡೆಸಿ, ಪ್ರಜ್ವಲ್ ರೇವಣ್ಣ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ಹೊರಹಾಕಿದರು.
ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿ ಸಿ ಸತ್ಯಭಾಮಾ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಮನವಿ ಪತ್ರ ಸ್ವೀಕರಿಸಿದ ನಂತರ ಮಾತನಾಡಿದ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು, ಪೆನ್‌ಡ್ರೈವ್ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿದ್ದು ತನಿಖಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಪಾಪದ ಕೊಡ ತುಂಬಿದಾಗ ಎಲ್ಲವೂ ಹೊರ ಬರಬೇಕು. ಶಿಶು ಪಾಲನಿಗೆ ಕೃಷ್ಣ ನೂರು ತಪ್ಪು ಮಾಡಲು ಅವಕಾಶ ಕೊಟ್ಟ. 101ನೇ ತಪ್ಪು ಮಾಡಲು ಅವಕಾಶ ಕೊಡಲಿಲ್ಲ ಎಂದು ಪೌರಾಣಿಕ ಹಿನ್ನೆಲೆಯ ಸಂದೇಶವನ್ನು ವಿವರಿಸುವ ಮೂಲಕ ಪ್ರಜ್ವಲ್ ರೇವಣ್ಣ ಕುಟುಂಬದ ವಿರುಧ್ಧ ಅಸಮಾಧಾನ ವ್ಯಕ್ತಪಡಿಸಿದರು. ಈಗಲೂ ಎಲ್ಲಾ ರೀತಿಯಲ್ಲೂ ನ್ಯಾಯ ಸಿಗುತ್ತದೆ ಎಂದು ಭರವಸೆ ನೀಡಿದ ಜಿಲ್ಲಾಧಿಕಾರಿ, ಇಲ್ಲಿ ಎಲ್ಲಾ ಹೋರಾಟಗಾರರು ಬಂದಿದ್ದೀರಿ. ನಿಮ್ಮೆಲ್ಲ ಮನವಿಯನ್ನು ಪರಿಗಣಿಸಿದ್ದೇನೆ. ಸೂಕ್ತ ತನಿಖೆಯಾಗಿ ನಿಮಗೆಲ್ಲಾ ನ್ಯಾಯ ಸಿಗುತ್ತದೆ ಎಂದು ಭರವಸೆ ವ್ಯಕ್ತ ಪಡಿಸಿದರು.
Advertisement. Scroll to continue reading.