ಹೊಸದಿಲ್ಲಿ: ಬಹುನಿರೀಕ್ಷಿತ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ 15 ಆಟಗಾರರ ಭಾರತ ತಂಡವನ್ನು ಮಂಗಳವಾರ ಬಿಸಿಸಿಐ ಪ್ರಕಟಿಸಿದೆ. ನಿರೀಕ್ಷಯಂತೆ ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದು, ಉಪ ನಾಯಕನ ಜವಾಬ್ದಾರಿಯನ್ನು ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ನೀಡಲಾಗಿದೆ.
ಹಾಗೆಯೆ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟರ್ಗಳಾಗಿ ಸಂಜು ಸ್ಯಾಮ್ಸನ್ ಹಾಗೂ ರಿಷಭ್ ಪಂತ್ ಕಾಣಿಸಿಕೊಂಡಿದ್ದಾರೆ. ಈ ಬಾರಿಯ ಐಪಿಎಲ್ನಲ್ಲಿ ಸಿಎಸ್ಕೆ ಪರ ಭರ್ಜರಿ ಪ್ರದರ್ಶನ ನೀಡಿರುವ ಶಿವಂ ದುಬೆಗೂ ವಿಶ್ವಕಪ್ ತಂಡದಲ್ಲಿ ಸ್ಥಾನ ಲಭಿಸಿದೆ.
ಮತ್ತೊಂದೆಡೆ ಶುಭ್ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಹಾಗೂ ಅವೇಶ್ ಖಾನ್ ಅವರನ್ನು ಮೀಸಲು ಆಟಗಾರರನ್ನಾಗಿ ಆಯ್ಕೆ ಮಾಡಲಾಗಿದೆ. ಅಂದರೆ 15 ಸದಸ್ಯರ ತಂಡದಿಂದ ಯಾರಾದರು ಹೊರಬಿದ್ದರೆ ಈ ನಾಲ್ವರು ಆಟಗಾರರಿಂದ ಒಬ್ಬರನ್ನು ಆಯ್ಕೆ ಮಾಡಲಾಗುತ್ತದೆ. ಇದಾಗ್ಯೂ ಈ ಬಳಗದಲ್ಲಿ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಗೆ ಸ್ಥಾನ ಕಲ್ಪಿಸಲಾಗಿಲ್ಲ.
Advertisement. Scroll to continue reading.
ಹಾಗೆಯೇ ಈ ಬಾರಿಯ ಐಪಿಎಲ್ನಲ್ಲಿ ವೇಗದ ಬೌಲಿಂಗ್ನೊಂದಿಗೆ ಮಿಂಚಿದ್ದ ಮಯಾಂಕ್ ಯಾದವ್ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ. ಬದಲಾಗಿ ವೇಗಿಗಳಾಗಿ ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್ ಹಾಗೂ ಜಸ್ಪ್ರೀತ್ ಬುಮ್ರಾಗೆ ಸ್ಥಾನ ನೀಡಲಾಗಿದೆ.
ಇನ್ನು ಸ್ಪಿನ್ನರ್ಗಳಾಗಿ ಕುಲ್ದೀಪ್ ಯಾದವ್ ಹಾಗೂ ಯುಜ್ವೇಂದ್ರ ಚಹಲ್ ಸ್ಥಾನ ಪಡೆದರೆ, ಸ್ಪಿನ್ ಆಲ್ರೌಂಡರ್ಗಳಾಗಿ ಅಕ್ಷರ್ ಪಟೇಲ್ ಹಾಗೂ ರವೀಂದ್ರ ಜಡೇಜಾ ತಂಡದಲ್ಲಿದ್ದಾರೆ. ಹಾಗೆಯೇ ವೇಗದ ಬೌಲಿಂಗ್ ಆಲ್ರೌಂಡರ್ಗಳಾಗಿ ಟೀಮ್ ಇಂಡಿಯಾ ಹಾರ್ದಿಕ್ ಪಾಂಡ್ಯ ಹಾಗೂ ಶಿವಂ ದುಬೆ ಕಾಣಿಸಿಕೊಂಡಿದ್ದಾರೆ.
ತಂಡ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿ.ಕೀ), ಸಂಜು ಸ್ಯಾಮ್ಸನ್ (ವಿ.ಕೀ), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್ , ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
Advertisement. Scroll to continue reading.
ಮೀಸಲು ಆಟಗಾರರು: ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಆವೇಶ್ ಖಾನ್