ಬೆಂಗಳೂರು: ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ನೀಡಿರುವ ಆರೋಪ ಹೊತ್ತಿರುವ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ವಿದೇಶದಲ್ಲಿದ್ದು, ಅವರನ್ನು ಬಂಧಿಸುವುದು ಬಲು ಸುಲಭ, ಅದಕ್ಕೆ ಪ್ರಧಾನಿಗೆ ಪತ್ರ ಬರೆಯಬೇಕೆಂದಿಲ್ಲ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹೇಳಿದ್ದಾರೆ.
ಆರೋಪಿ ಪ್ರಜ್ವಲ್ ರೇವಣ್ಣ ವಿದೇಶದಲ್ಲಿರುವುದರಿಂದ ಅವರನ್ನು ಬಂಧಿಸಿ ಕರೆತರಲು ಕೇಂದ್ರ ವಿದೇಶಾಂಗ ಸಚಿವಾಲಯ ಮಧ್ಯಪ್ರವೇಶ ಮಾಡಬೇಕು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ಅಣ್ಣಾಮಲೈ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾರ್ಯವಿಧಾನದ ಪ್ರಕಾರ, ಎಸ್ಐಟಿ ಅಥವಾ ಸಿಐಡಿ ಸಿಬಿಐಗೆ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆ. ವಿದೇಶಕ್ಕೆ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸಲು ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲು ಅಥವಾ ಇಂಟರ್ಪೋಲ್ (International Police Agency) ನೆರವು ಪಡೆಯಲು ರಾಜ್ಯ ಸರ್ಕಾರ ಸಿಬಿಐ ನಿರ್ದೇಶಕರಿಗೆ ಪತ್ರ ಬರೆಯಬೇಕು.
Advertisement. Scroll to continue reading.
ಬಳಿಕ ರೆಡ್ ಕಾರ್ನರ್ ಜಾರಿಗೊಳಿಸಲಾಗುತ್ತದೆ. ಆಗ ಆರೋಪಿ ಯಾವುದೇ ವಿಮಾನ ನಿಲ್ದಾಣಕ್ಕೆ ಬಂದರೆ ಕೂಡಲೆ ಅವನನ್ನು ಅಲ್ಲಿನ ಪೊಲೀಸರು ಬಂಧಿಸುತ್ತಾರೆ. ಬಳಿಕ ಆರೋಪಿ ಬೇಕಾಗಿರುವ ಠಾಣೆಗೆ ಮಾಹಿತಿ ನೀಡುತ್ತಾರೆ. ನಾನು ಕರ್ನಾಟಕದ ಸೇವೆ ಸಲ್ಲಿಸುತ್ತಿರುವಾಗ ಭೂಗತ ಪಾತಕಿ ಬನ್ನಂಜೆ ರಾಜನನ್ನು ಮೊರಾಕೊದಿಂದ ಪ್ರಧಾನಿಗೆ ಯಾವುದೇ ಪತ್ರ ಬರೆಯದೆ ಬಂಧಿಸಿ ಕರೆತಂದೆವು ಎಂದು ತಿಳಿಸಿದರು.
ದೇಶದ ಪೊಲೀಸ್ ಇತಿಹಾಸದಲ್ಲೇ ಇಂಟರ್ಪೋಲ್ ಮೂಲಕ ಆರೋಪಿಯನ್ನು ಬಂದಿಸಿ ಕರೆತಂದಿದ್ದು ಕರ್ನಾಟಕ ಪೊಲೀಸ್. 2015ರಲ್ಲಿ ಡಿಜಿಪಿ ಪ್ರತಾಪ್ ರೆಡ್ಡಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು. ಇದು ಬಿಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯುತ್ತಾರೆ. ಇದು ಬರೀ ರಾಜಕೀಯ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ಈ ವಿಚಾರದಲ್ಲಿ ಏನು ಹೇಳಬೇಕು ಎಂಬುದನ್ನು ನಮ್ಮ ನಾಯಕರು ಈಗಾಗಲೇ ಹೇಳಿದ್ದಾರೆ. ನಾವು ತನಿಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ ಅಥವಾ ಯಾವುದೇ ಅಡೆತಡೆಗಳನ್ನು ಹಾಕುತ್ತಿಲ್ಲ. ಈ ಪ್ರಕರಣದಲ್ಲಿ ಯಾವುದೇ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಸ್ವತಂತ್ರವಾಗಿದೆ ಎಂದು ಹೇಳಿದರು.
Advertisement. Scroll to continue reading.