ಈಕ್ವೆಡಾರ್: ಇತ್ತೀಚೆಗೆ ಹೆಚ್ಚಿನವರು ಸೋಷಿಯಲ್ ಮೀಡಿಯಾಗಳಲ್ಲಿ ಸ್ಟೇಟಸ್ ಹಾಕೋದು ತಮ್ಮ ದಿನದ ಬೆಳವಣಿಗೆಯನ್ನು ಫಾಲೋವರ್ಸ್ಗಳಿಗೆ ಹಂಚಿಕೊಳ್ಳಬೇಕೆಂಬುದು ಖಯಾಲಿ. ಇಂದು ಎಲ್ಲಿದ್ದೇವೆ? ಎಲ್ಲಿಗೆ ಹೋಗ್ತಿದ್ದೀವಿ? ಯಾರನ್ನ ಭೇಟಿ ಮಾಡ್ತೀವಿ? ಯಾವ ಹೋಟೆಲ್ನಲ್ಲಿ ಊಟ ಮಾಡಿದ್ರು? ಎಲ್ಲಿ ಶಾಪಿಂಗ್? ಹೀಗೆ ಪ್ರತಿ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ. ಆದ್ರೆ ಈ ರೀತಿಯ ಸ್ಟೇಟಸ್ಗಳು ಸಮಾಜ ಘಾತುಕರಿಗೆ, ಕ್ರಿಮಿನಲ್ಗಳಿಗೆ ನೆರವಾಗಬಹುದು! ಅಂಥದ್ದೇ ಒಂದು ಘಟನೆ ಈಕ್ವೆಡಾರ್ ದೇಶದಲ್ಲಿ ನಡೆದಿದೆ.
ಏಪ್ರಿಲ್ 28 ರಂದು ಈಕ್ವೆಡಾರ್ ದೇಶದ ಬ್ಯೂಟಿ ಕ್ವೀನ್, 2022ರ ಮಿಸ್ ಈಕ್ವೆಡಾರ್ ಕಿರೀಟ ಧರಿಸಿದ್ದ ಲ್ಯಾಂಡಿ ಪರಾಗ ಗೊಯ್ಬುರೊ ಅವರು ಹತ್ಯೆಗೀಡಾದರು. ಈಕ್ವೆಡಾರ್ ದೇಶದ ಕ್ವೆವೆಡೊ ನಗರದಲ್ಲಿ ಇರುವ ಜನಪ್ರಿಯ ರೆಸ್ಟೋರೆಂಟ್ ಒಂದರಲ್ಲಿ ಕುಳಿತಿದ್ದ ಅವರನ್ನು ಇಬ್ಬರು ಅಪರಿಚಿತ ಹಂತಕರು ಗುಂಡಿಟ್ಟು ಕೊಂದಿದ್ದರು. ಈ ಘಟನೆ ಈಕ್ವೆಡಾರ್ ದೇಶವನ್ನು ಬೆಚ್ಚಿ ಬೀಳಿಸಿತ್ತು. 23 ವರ್ಷ ವಯಸ್ಸಿನ ಲ್ಯಾಂಡಿ ಪರಾಗ ಗೊಯ್ಬುರೊ ಅವರಿಗೆ ಇನ್ಸ್ಟಾಗ್ರಾಂನಲ್ಲಿ ಅಪಾರ ಅಭಿಮಾನಿಗಳು ಇದ್ದರು. ಅವರೆಲ್ಲರೂ ಈ ಘಟನೆಗೆ ಆಘಾತ ವ್ಯಕ್ತಪಡಿಸಿದರು. ಈ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ ಲ್ಯಾಂಡಿ ಪರಾಗ ಗೊಯ್ಬುರೊ ಅವರ ಇನ್ಸ್ಟಾಗ್ರಾಂ ಖಾತೆಯೇ ಸುಳಿವು ನೀಡಿದೆ.
ಇನ್ಸ್ಟಾಗ್ರಾಂ ಫಾಲೋ ಮಾಡ್ತಿದ್ರಂತೆ ಹಂತಕರು!
ಹೌದು.. ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿರುವ ಲ್ಯಾಂಡಿ ಪರಾಗ ಗೊಯ್ಬುರೊ, ತಾವು ಎಲ್ಲೇ ಹೋಗಲಿ, ಏನೇ ಮಾಡಲಿ ಅದನ್ನು ತಪ್ಪದೇ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಪ್ಡೇಟ್ ಮಾಡುತ್ತಿದ್ದರು. ಏಪ್ರಿಲ್ 28 ರಂದೂ ಕೂಡಾ ಆಕೆ ರೆಸ್ಟೋರೆಂಟ್ ಒಂದಕ್ಕೆ ಹೋಗಿ ತಾವು ಈ ರೆಸ್ಟೋರೆಂಟ್ನಲ್ಲಿ ಇರೋದಾಗಿ ಫೋಟೋ ಸಮೇತ ಇನ್ಸ್ಟಾಗ್ರಾಂನಲ್ಲಿ ಅಪ್ಡೇಟ್ ಮಾಡಿದ್ದರು. ಇದನ್ನು ನೋಡಿದ್ದೇ ತಡ, ಆಕೆಯ ಹತ್ಯೆಗೆ ಸಂಚು ರೂಪಿಸಿದ್ದ ಹಂತಕರು, ರೆಸ್ಟೋರೆಂಟ್ಗೆ ದಾಂಗುಡಿ ಇಟ್ಟಿದ್ದರು.
ಈ ಕುರಿತಾಗಿ ದಿ ಟೆಲಿಗ್ರಾಫ್ ಸುದ್ದಿ ಸಂಸ್ಥೆ ಸಮಗ್ರ ತನಿಖಾ ವರದಿ ಪ್ರಕಟಿಸಿದೆ. ಮೂಲಗಳ ಪ್ರಕಾರ ಲ್ಯಾಂಡಿ ಪರಾಗ ಗೊಯ್ಬುರೊ ಅವರಿಗೆ ಲಿಯಾಂಡ್ರೊ ನೊರೆರೊ ಎಂಬಾತನ ಜೊತೆಗೆ ಗೆಳೆತನ ಇತ್ತು. ಆತ ಓರ್ವ ಮಾದಕ ದ್ರವ್ಯ ಸಾಗಾಟಗಾರನಾಗಿದ್ದ. ಕಳೆದ ವರ್ಷ ಜೈಲಿನಲ್ಲಿ ಇದ್ದ ವೇಳೆ ಜೈಲಿನಲ್ಲಿ ನಡೆದ ಬಡಿದಾಟದಲ್ಲಿ ಆತ ಕೊನೆಯುಸಿರೆಳೆದಿದ್ದ.
ಮೂಲಗಳ ಪ್ರಕಾರ ಲಿಯಾಂಡ್ರೊ ನೊರೆರೊನ ವಿಧವೆ ಪತ್ನಿಯೇ ಇದೀಗ ಬ್ಯೂಟಿ ಕ್ವೀನ್ ಲ್ಯಾಂಡಿ ಅವರ ಹತ್ಯೆಗೆ ಸುಪಾರಿ ಕೊಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ ಎಂದು ತಿಳಿದು ಬಂದಿದೆ. ಏಕೆಂದರೆ, ಬ್ಯೂಟಿ ಕ್ವೀನ್ ಲ್ಯಾಂಡಿ ಸಾಮಾನ್ಯ ಹೆಣ್ಣಲ್ಲ! ಆಕೆಯ ವಿರುದ್ಧ ಭ್ರಷ್ಟಾಚಾರ ಆರೋಪವಿತ್ತು. ನ್ಯಾಯಾಂಗ ಅಧಿಕಾರಿಗಳಿಗೆ ಆಕೆ ಲಂಚ ಕೊಟ್ಟಿದ್ದಳು ಎನ್ನಲಾಗಿದೆ.
ಇವೆಲ್ಲದರ ನಡುವೆ, ಆಕೆಯ ಹತ್ಯೆ ಸಂಭವಿಸಿದೆ. ಅದೂ ಕೂಡಾ ಇನ್ಸ್ಟಾಗ್ರಾಂ ಪೋಸ್ಟ್ ಹಾಕಿದ ಕೆಲವೇ ನಿಮಿಷಗಳಲ್ಲಿ! ಈ ಘಟನೆಯ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ವೇಳೆ ಇಬ್ಬರು ಬಂದೂಕುಧಾರಿ ಯುವಕರು ಹೋಟೆಲ್ಗೆ ನುಗ್ಗಿ ಆಕೆಯ ಮೇಲೆ ಗುಂಡಿನ ಮಳೆಗರೆಯುತ್ತಾರೆ. ಇದೇ ವೇಳೆ ಲ್ಯಾಂಡಿ ಜೊತೆಗೆ ಇದ್ದ ಮತ್ತೊಬ್ಬನಿಗೂ ಗುಂಡೇಟು ತಗುಲಿದೆ. ದಾಳಿ ಬಳಿಕ ಬಂದೂಕುಧಾರಿಗಳು ಪರಾರಿಯಾಗುತ್ತಾರೆ.
ಇನ್ನು ಈ ಘಟನೆಯ ತನಿಖೆ ವೇಳೆ ಆಕೆಗೆ ಯಾರ ಜೊತೆಗೆ ಗೆಳೆತನವಿತ್ತು, ಆಕೆಗೆ ಐಷರಾಮಿ ವಸ್ತುಗಳ ಉಡುಗೊರೆ ಕೊಟ್ಟಿದ್ದು ಯಾರು? ಆಕೆಯ ಬಾಯ್ಫ್ರೆಂಡ್ಗಳು ಯಾರು ಅನ್ನೋದ್ರ ತನಿಖೆಯೂ ನಡೆಯುತ್ತಿದೆ. ಇನ್ನು ಜೈಲಿನಲ್ಲಿ ನಡೆದ ಬಡಿದಾಟದಲ್ಲಿ ಹತ್ಯೆಗೀಡಾಗುವ ಮುನ್ನ ಕೋರ್ಟ್ನಲ್ಲಿ ವಿಚಾರಣೆ ಎದುರಿಸಿದ್ದ ಲ್ಯಾಂಡಿ ಗೆಳೆಯ ಲಿಯಾಂಡ್ರೊ ನೊರೆರೊ, ‘ಒಂದು ವೇಳೆ ನನಗೆ ಲ್ಯಾಂಡಿ ಜೊತೆ ಗೆಳೆತನ ಇತ್ತು ಅನ್ನೋದು ನನ್ನ ಹೆಂಡ್ತಿಗೆ ಗೊತ್ತಾದರೆ ನನ್ನ ಕಥೆ ಮುಗೀತು’ ಎಂದು ಹೇಳಿಕೆ ನೀಡಿದ್ದನಂತೆ! ಇದೀಗ ಆತ ಹೇಳಿದಂತೆಯೇ ಲ್ಯಾಂಡಿ ಕಥೆ ಮುಗಿದಿದೆ.