ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಹೇಳಲಾಗುತ್ತಿರುವ ಅಶ್ಲೀಲ ವಿಡಿಯೋ ಲೀಕ್ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್ ಕೈವಾಡ ಮತ್ತು ಪಿತೂರಿ ನೇರವಾಗಿ ಇದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ಇಂದು ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ತುರ್ತು ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಸಿಡಿ ಪ್ರಕರಣದಲ್ಲಿ ಡಿ ಕೆ ಶಿವಕುಮಾರ್ ಪಿತೂರಿ ಎದ್ದು ಕಾಣುತ್ತಿದೆ, ಪ್ರಕರಣವನ್ನು ಪಾರದರ್ಶಕವಾಗಿ ತನಿಖೆ ಮಾಡಲು ಸಿಬಿಐ ತನಿಖೆಗೆ ಸರ್ಕಾರ ವಹಿಸಲಿ, ನಮಗೆ ಎಸ್ ಐಟಿ ತನಿಖೆ ಮೇಲೆ ನಂಬಿಕೆಯಿಲ್ಲ. ಪ್ರತಿದಿನ ಎಸ್ ಐಟಿ ಅಧಿಕಾರಿಗಳು ಡಿ ಕೆ ಶಿವಕುಮಾರ್ ಮತ್ತು ಇತರ ಕಾಂಗ್ರೆಸ್ ನಾಯಕರ ಕೈಗೊಂಬೆಗಳಂತೆ ಕೆಲಸ ಮಾಡುತ್ತಿದ್ದಾರೆ ಎಂದರು.
ಡಿಕೆಶಿಯನ್ನು ಸಂಪುಟದಿಂದ ಕೈಬಿಡಿ: ಈ ಪ್ರಕರಣದಲ್ಲಿ ಡಿ ಕೆ ಶಿವಕುಮಾರ್ ಅವರ ಪಿತೂರಿ ಎದ್ದು ಕಾಣುತ್ತಿದೆ. ವಿಡಿಯೊವನ್ನು ಆಧುನಿಕ ತಂತ್ರಜ್ಞಾನ ಬಳಸಿ ತಿರುಚಿ ಸೃಷ್ಟಿಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಮಾಡಿದಂತೆ ಕಾಣುತ್ತಿದೆ, ಪ್ರಕರಣವನ್ನು ಪಾದರ್ಶಕವಾಗಿ ತನಿಖೆ ನಡೆಸಿ ಡಿಕೆ ಶಿವಕುಮಾರ್ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.
Advertisement. Scroll to continue reading.
ಎಸ್ ಐಟಿ ಎಂದರೆ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಟೀಮ್: ಎಸ್ ಐಟಿ ಟೀಂ ಪಾರದರ್ಶಕವಾಗಿ ಕೂಲಂಕಷವಾಗಿ ತನಿಖೆ ಮಾಡುತ್ತಿಲ್ಲ, ತಮಗೆ ಬೇಕಾದಂತೆ ತನಿಖೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಇನ್ವೆಸ್ಟಿಗೇಷನ್ ಟೀಮ್, ಪೊಲೀಸ್ ಅಧಿಕಾರಿಗಳನ್ನು ಬಳಸಿಕೊಂಡೇ ಪೆನ್ ಡ್ರೈವ್ ನ್ನು ಲೀಕ್ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಮಧ್ಯೆ, ವಿಡಿಯೋ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಕೈವಾಡವಿದೆ ಎಂದು ಬಿಜೆಪಿಯ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಶಾಸಕ ರಮೇಶ್ ಜಾರಕಿಹೊಳಿ ಕೂಡ ಆರೋಪಿಸಿದ್ದಾರೆ. ನನ್ನನ್ನು ಕೂಡ ಇಂತಹ ವಿಡಿಯೊ ಮಾಡಿ ಮಹಾನ್ ನಾಯಕ ಪಿತೂರಿ ಮಾಡಿದ್ದನ್ನು ನಾನು ಹೇಳಿದ್ದೆ, ಆಗ ನನ್ನ ಮಾತುಗಳನ್ನು ಯಾರೂ ನಂಬಲಿಲ್ಲ, ನನ್ನನ್ನೇ ತಮಾಷೆ ಮಾಡಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಬೇರೆ ನಾಯಕರ ವಿಡಿಯೊಗಳು ಹೊರಬರಬಹುದು. ಜೂನ್ 4ರ ಫಲಿತಾಂಶ ನಂತರ ಎಲ್ಲ ಮಾತನಾಡುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ಮತ್ತೊಂದೆಡೆ, ಪ್ರಜ್ವಲ್ ವಿಡಿಯೋ ಕೇಸ್ನಲ್ಲಿ ಡಿಸಿಎಂ ಡಿಕೆ ಶಿಕುಮಾರ್ ಕೈವಾಡವಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬೆಂಗಳೂರಿನ ಜೆಡಿಎಸ್ ಕಚೇರಿ ಆವರಣದಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಡಿಸಿಎಂ ಡಿಕೆ ಶಿವಕುಮಾರ್ರನ್ನು ಬಂಧಿಸುವಂತೆ ಆಗ್ರಹಿಸಿದರು
Advertisement. Scroll to continue reading.