ಮಡಿಕೇರಿ: ಕಾಫಿ ನಾಡು ಕೊಡಗಿನಲ್ಲಿ 10ನೇ ತರಗತಿ ಓದುತ್ತಿದ್ದ ಬಾಲಕಿಯನ್ನು 30 ವರ್ಷದ ಯುವಕನೊಬ್ಬ ಬರ್ಬರವಾಗಿ ಹತ್ಯೆಗೈದ ದಾರುಣ ಘಟನೆ ಕೊಡಗಿನ ಸೂರ್ಲಬ್ಬಿಯಲ್ಲಿ ಗುರುವಾರ ಸಂಜೆ ನಡೆದಿದೆ. ವ್ಯಕ್ತಿ ಬಾಲಕಿಯ ತಲೆಯನ್ನು ಕತ್ತರಿಸಿ ದೇಹವನ್ನು ಎಸೆದಿದ್ದಾನೆ.
ಸೂರಬ್ಬಿ ಪ್ರೌಢಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಯು.ಎಸ್.ಮೀನಾ ಹತ್ಯೆಗೀಡಾದ ವಿದ್ಯಾರ್ಥಿನಿ. ಗುರುವಾರ ಹತ್ತನೇ ತರಗತಿ ಫಲಿತಾಂಶ ಪ್ರಕಟವಾಗಿ ತೇರ್ಗಡೆ ಹೊಂದಿದ ಖುಷಿಯಲ್ಲಿದ್ದಳು. ಆಕೆಯ ಶಾಲೆಗೆ ಶೇಕಡಾ 100ರಷ್ಟು ಫಲಿತಾಂಶ ಬಂದಿತ್ತು. ಆದರೆ ಕೆಲವೇ ಕ್ಷಣಗಳಲ್ಲಿ ಘೋರ ದುರಂತ ನಡೆದುಹೋಯಿತು.
ಅದೇ ಗ್ರಾಮದ ನಿವಾಸಿ ಓಂಕಾರಪ್ಪ ಎಂಬಾತ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಬಾಲಕಿ ಸುಬ್ರಮಣಿ ಮತ್ತು ಮುತ್ತಕ್ಕಿ ದಂಪತಿಯ ಪುತ್ರಿ. ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
Advertisement. Scroll to continue reading.
ಪೊಲೀಸ್ ಮೂಲಗಳ ಪ್ರಕಾರ, ಅಪ್ರಾಪ್ತ ಬಾಲಕಿಯ ವಿವಾಹ ಮಾಡುವುದಕ್ಕೆ ಪೋಷಕರು ಸಿದ್ಧತೆ ನಡೆಸಿದ್ರು ಎನ್ನಲಾಗಿದೆ. ಈ ವಿಷಯ ಗ್ರಾಮಸ್ಥರ ಗಮನಕ್ಕೆ ಬಂದಿತ್ತು. ಹೀಗಾಗಿ ಸೋಮವಾರಪೇಟೆ ಪೊಲೀಸರಿಂದ ಅಪ್ರಾಪ್ತ ಬಾಲಕಿಯ ಎಂಗೆಜ್ಮೆಂಟ್ ತಡೆಯಲಾಗಿತ್ತು ಎನ್ನಲಾಗಿದೆ. ಶಾಲೆಗೆ ಹೋಗಿ ಬರುವ ವೇಳೆಯಲ್ಲಿ ಅಪ್ರಾಪ್ತ ಬಾಲಕಿಯನ್ನು ಮದುವೆ ಆಗಬೇಕಾಗಿದ್ದ ಯುವಕನೇ ಹತ್ಯೆ ಮಾಡಿದ್ದಾನೆ. ಈ ಘಟನೆ ಬಗ್ಗೆ ತನಿಖೆ ಮುಂದುವರಿದಿದೆ.