ಹೊಸದಿಲ್ಲಿ : ಕರ್ನಾಟಕದಲ್ಲಿ ಉತ್ತಮ ಮುಂಗಾರು ಪೂರ್ವ ಮಳೆಯ ನಡುವೆಯೇ ಹವಾಮಾನ ಇಲಾಖೆ ಮತ್ತೊಂದು ಶುಭಸುದ್ದಿ ನೀಡಿದ್ದು, ಪ್ರಸಕ್ತ ಸಾಲಿನ ಮುಂಗಾರು ಮಾರುತ ಜೂನ್ 1ರಂದೇ ಕೇರಳ ಪ್ರವೇಶಿಸಲಿದೆ ಎಂದು ಹೇಳಿದೆ.
ಮೇ 19ರಂದು ನೈರುತ್ಯ ಮುಂಗಾರು ಮಾರುತವು ದಕ್ಷಿಣ ಅಂಡಮಾನ್, ಬಂಗಾಳ ಕೊಲ್ಲಿಯ ಆಗ್ನೇಯ ಭಾಗ ಹಾಗೂ ನಿಕೋಬಾರ್ ದ್ವೀಪಗಳನ್ನು ಪ್ರವೇಶಿಸಲಿದೆ. ಜೂನ್ 1ರ ವೇಳೆಗೆ ಕೇರಳ ಪ್ರವೇಶಿಸಲಿದೆ. ಜೂನ್ 15ರ ವೇಳೆಗೆ ದೇಶಾದ್ಯಂತ ವ್ಯಾಪಿಸಲಿದೆ ಎಂದು ಇಲಾಖೆ ತಿಳಿಸಿದೆ. ಕೇರಳ ಪ್ರವೇಶಿಸಿದ ಬಳಿಕ ಒಂದೆರಡು ದಿನಗಳಲ್ಲಿ ಕರ್ನಾಟಕದ ಕರಾವಳಿಗೂ ಮುಂಗಾರು ಪ್ರವೇಶಿಸುವ ನಿರೀಕ್ಷೆಯಿದೆ.
ಈ ಬಗ್ಗೆ ಐಎಂಡಿ ನಿರ್ದೇಶಕ ಮೃತ್ಯುಂಜಯ ಮೋಹಾಪಾತ್ರ ಅವರು ಪ್ರತಿಕ್ರಿಯಿಸಿದ್ದು, ಸಾಮಾನ್ಯ ಮುಂಗಾರು ಪ್ರವೇಶದ ದಿನಗಳಲ್ಲೇ ಈ ವರ್ಷವೂ ಭಾರತವನ್ನು ಮುಂಗಾರು ಪ್ರವೇಶಿಸಲಿದೆ. ಸಾಮಾನ್ಯವಾಗಿ ಪೋರ್ಟ್ ಬ್ಲೇರ್‌ನಲ್ಲಿ ಮೇ 20ರಂದು ಮುಂಗಾರು ಪ್ರವೇಶ ಆಗುತ್ತಿತ್ತು. ಆದರೆ, ಈ ಬಾರಿ ಒಂದು ದಿನ ಮುಂಚಿತವಾಗಿಯೇ ಈ ಪ್ರದೇಶಕ್ಕೆ ಮುಂಗಾರು ಮಾರುತಗಳ ಆಗಮನವಾಗಲಿದೆ ಎಂದು ಹೇಳಿದ್ದಾರೆ.
Advertisement. Scroll to continue reading.
ಅಂಡಮಾನ್‌ನಲ್ಲಿ ಬೇಗ ಮುಂಗಾರು ಪ್ರವೇಶಿಸಿದರು ಕೂಡ ಕೇರಳಕ್ಕೆ ಜೂನ್ 1ರಂದು ಮುಂಗಾರು ಮಾರುತ ಪ್ರವೇಶಿಸಲಿದೆ ಎಂದು ಐಎಂಡಿಯ ಹವಾಮಾನ ವರದಿ ವಿಭಾಗ ಪುಣೆಯ ಮುಖ್ಯಸ್ಥ ಡಾ ಮೇಧಾ ಕೋಳೆ ಹೇಳಿದ್ದಾರೆ. ಸುರಿದಿರುವ ಮಳೆ, ಗಾಳಿಯ ವೇಗ, ದಿಕ್ಕು ಸೇರಿ ವಿವಿಧ ಅಂಶಗಳ ಆಧಾರದ ಮೇಲೆ ಕೇರಳಕ್ಕೆ ಮುಂಗಾರು ಆಗಮನವಾಗಿದೆ ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದಿದ್ದಾರೆ.
ಭಾರತಕ್ಕೆ ಅಧಿಕೃತವಾಗಿ ಮುಂಗಾರು ಪ್ರವೇಶಿಸಿದೆ ಎನ್ನಲು ಕೇರಳ ಮತ್ತು ಲಕ್ಷದ್ವೀಪದಲ್ಲಿ ಗುರುತಿಸಲಾಗಿರುವ 14 ಮಳೆ ಮಾಪನ ಕೇಂದ್ರಗಳಲ್ಲಿ ಕನಿಷ್ಠ ಶೇ.60ರಷ್ಟು ಮಳೆ ಮಾಪನ ಕೇಂದ್ರಗಳಲ್ಲಿ ಮೇ 10ರ ಬಳಿಕ ಸತತ ಎರಡು ದಿನ ಕನಿಷ್ಠ 2.5 ಮಿಮೀ ಮಳೆಯಾಗಬೇಕು. ಆಗ ಮಾತ್ರ ಭಾರತಕ್ಕೆ ಮುಂಗಾರು ಮಾರುತಗಳು ಪ್ರವೇಶಿಸಿವೆ ಎಂದು ಅಧಿಕೃತವಾಗಿ ಘೋಷಿಸಲಾಗುವುದು.
ಅದಲ್ಲದೇ ಈ ಬಾರಿ ವಾಡಿಕೆಗಿಂತ ಅಧಿಕ ಮುಂಗಾರು ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಈ ಬಾರಿ ಶೇ.106ರಷ್ಟು ಮುಂಗಾರು ಮಳೆ ಬರಲಿದೆ ಎನ್ನಲಾಗಿದೆ. ಈಗಾಗಲೇ ರಾಜ್ಯದಲ್ಲಿ ಪೂರ್ವ ಮುಂಗಾರು ಅಬ್ಬರಿಸುತ್ತಿದ್ದು, ಬಿಸಿಲ ಬೇಗೆಯಲ್ಲಿದ್ದ ಜನರಿಗೆ ತಂಪಿನ ವಾತಾವರಣವನ್ನು ನೀಡಿದ್ದಲ್ಲದೇ, ಮುಂದೆ ಉತ್ತಮ ಮುಂಗಾರು ಮಳೆಯ ಮುನ್ಸೂಚನೆಯನ್ನು ಕೂಡ ನೀಡಿದೆ.
ಕರ್ನಾಟಕಕ್ಕೆ ಯಾವಾಗ ಪ್ರವೇಶ?
ಕರ್ನಾಟಕದಲ್ಲಿ ಈಗಾಗಲೇ ಪೂರ್ವ ಮುಂಗಾರು ವೇಗ ಪಡೆದುಕೊಂಡಿದೆ. ಸಾಮಾನ್ಯವಾಗಿ ಕೇರಳಕ್ಕೆ ಜೂನ್ 1 ರಂದು ಮುಂಗಾರು ಪ್ರವೇಶಿದರೆ ಕರ್ನಾಟಕಕ್ಕೆ ಎರಡು ದಿನದ ಬಳಿಕ ಮುಂಗಾರು ಪ್ರವೇಶವಾಗಲಿದೆ. ಅಂದ್ರೆ ಜೂನ್ 3 ಅಥವಾ 4ರಂದು ಕರ್ನಾಟಕದ ಕರಾವಳಿಗೆ ಮುಂಗಾರು ಪ್ರವೇಶಿಸಲಿದ್ದು, ಬಳಿಕ ರಾಜ್ಯಾದ್ಯಂತ ವಿಸ್ತರಣೆಯಾಗಲಿದೆ ಎಂದು ಅಂದಾಜಿಸಲಾಗಿದೆ.
Advertisement. Scroll to continue reading.