ರಾಜ್ಯ

ಚಿತ್ರದುರ್ಗದಲ್ಲಿ ಐವರ ಅಸ್ಥಿಪಂಜರ ಪತ್ತೆ ಪ್ರಕರಣ: ಎಫ್ಎಸ್ಎಲ್ ವರದಿಯಲ್ಲಿ ಸಾವಿನ ಕಾರಣ ಬಹಿರಂಗ

0

ಚಿತ್ರದುರ್ಗ: ನಗರದ ಬೆಂಗಳೂರು ರಸ್ತೆಯ ಪಾಳು ಬಿದ್ದ ಮನೆಯೊಂದರಲ್ಲಿ ಒಂದೇ ಕುಟುಂಬದ ಐವರ ಅಸ್ಥಿಪಂಜರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಎಸ್‌ಎಲ್ ವರದಿ ಬಂದಿದ್ದು, ವರದಿಯಲ್ಲಿ ನಿದ್ದೆ ಮಾತ್ರೆ ಅಂಶ ಪತ್ತೆಯಾಗಿದೆ.

2023ರ ಡಿಸೆಂಬರ್ 28ರಂದು ಐವರ ಅಸ್ಥಿಪಂಜರಗಳು ಪತ್ತೆಯಾಗಿದ್ದವು. ಮೃತರನ್ನು ನಿವೃತ್ತ ಇಂಜಿನಿಯರ್ ಜಗನ್ನಾಥರೆಡ್ಡಿ, ಪತ್ನಿ ಪ್ರೇಮಕ್ಕ, ಪುತ್ರಿ ತ್ರಿವೇಣಿ, ಪುತ್ರ ಕೃಷ್ಣರೆಡ್ಡಿ, ನರೇಂದ್ರ ರೆಡ್ಡಿ ಎಂದು ಗುರುತಿಸಲಾಗಿತ್ತು. ಇವರು 2019ರಲ್ಲೇ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿತ್ತು. ಈ ಪ್ರಕರಣವು ಜಿಲ್ಲೆ ಮಾತ್ರವಲ್ಲದೇ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಅಲ್ಲದೇ, ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು. ಇದೀಗ ಅಸ್ಥಿಪಂಜರಗಳು ಪತ್ತೆಯಾದ ಐದು ತಿಂಗಳ ಬಳಿಕ ಎಫ್ಎಸ್ಎಲ್ ವರದಿಯು ಪೊಲೀಸರ ಕೈ ಸೇರಿದೆ.

ಈ ಬಗ್ಗೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಜೀವನದಲ್ಲಿ ಬೇಸತ್ತು ನಿದ್ರೆ ಮಾತ್ರೆ ಸೇವಿಸಿ ಜಗನ್ನಾಥರೆಡ್ಡಿ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ. ಮನೆಯಲ್ಲಿ ಅಸ್ಥಿಪಂಜರಗಳು ಪತ್ತೆಯಾದ ತಕ್ಷಣ ಎಫ್​ಎಸ್​ಎಲ್ ತಂಡವನ್ನು ಕರೆಸಿ ಸೂಕ್ತ ತನಿಖೆಗೆ ಆದೇಶ ನೀಡಲಾಗಿತ್ತು. ತನಿಖಾ ತಂಡ ಹಾಗೂ ಎಫ್​ಎಸ್​ಎಲ್ ತಂಡ ಸೇರಿ ಮನೆಯಿಂದ 71 ಸಾಕ್ಷ್ಯಗಳನ್ನು ಕಲೆ ಹಾಕಲಾಗಿತ್ತು ಎಂದು ತಿಳಿಸಿದರು.

Advertisement. Scroll to continue reading.

ಎಲ್ಲ ಮಾದರಿಗಳನ್ನು ದಾವಣಗೆರೆ, ಬೆಂಗಳೂರು ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಇದು ತುಂಬಾ ಸೂಕ್ಷ್ಮವಾದ ಪ್ರಕರಣವಾಗಿದ್ದರಿಂದ ವರದಿ ತಡವಾಗಿ ಬಂದಿದೆ. ಎಫ್ಎಸ್ಎಲ್ ವರದಿಯಲ್ಲಿ ದೇಹಗಳ ಯಾವುದೇ ಭಾಗದಲ್ಲಿ ಗುರುತುಗಳು ಕಂಡು ಬಂದಿಲ್ಲ. ಅಸ್ಥಿಪಂಜರದ ಮಾದರಿಗಳಲ್ಲಿ ನಿದ್ದೆ ಮಾತ್ರೆಗಳು ಸೇವನೆ ಮಾಡಿರುವ ಮಾಹಿತಿ ಸಿಕ್ಕಿದೆ. ಐವರು ಕೂಡ ನಿದ್ದೆ ಮಾತ್ರೆ ಸೇವನೆಯಿಂದ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ ಎಂದು ಎಸ್ಪಿ ತಿಳಿಸಿದರು.

ಮಾನಸಿಕ ಖಿನ್ನತೆ, ಆರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಇದೇ ವೇಳೆ, ಅಡುಗೆ ಮನೆಯಲ್ಲಿರುವ ಎರಡು ಪಾತ್ರೆಗಳಲ್ಲಿ ಸೈನೈಡ್ ಇರುವ ಮಾಹಿತಿ ಲಭ್ಯವಾಗಿದೆ. ಆದರೆ, ಸೈನೈಡ್ ಸೇವನೆ ಮಾಡಿರುವುದು ಕಂಡು ಬಂದಿಲ್ಲ. ಮನೆಯಲ್ಲಿ‌ ಔಷಧಿಗಳು, ಮಾತ್ರೆಗಳು ಸಿಕ್ಕಿವೆ. ನಮ್ಮ‌‌‌ ತನಿಖೆ ಪ್ರಕಾರ, 2019ರ ಫೆಬ್ರವರಿ, ಮಾರ್ಚ್ನಲ್ಲಿ ಇವರು ಸಾವನ್ನಪ್ಪಿದ್ದಾರೆ. ಆದರೆ, ಸಾವು ಯಾವಾಗ ಆಗಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ಖಚಿತವಾಗಿ ಹೇಳಲಾಗಿಲ್ಲ ಎಂದು ವಿವರಿಸಿದರು. ಜೊತೆಗೆ ಇದುವರೆಗೆ ತನಿಖಾ ತಂಡವು ಎಲ್ಲ ರೀತಿಯ ಆಯಾಮದ ತನಿಖೆ ನಡೆದಿದೆ. ಮುಂದುವರೆದ ತನಿಖೆಯನ್ನು ಸಿಪಿಐ ನೇತೃತ್ವದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಧರ್ಮೇಂದರ್ ಕುಮಾರ್ ತಿಳಿಸಿದರು.

ಅಸ್ಥಿಪಂಜರಗಳು ಪತ್ತೆಯಾದ ಬಳಿಕ ಮೃತರ ಸಂಬಂಧಿಕ ಪವನ್ ಕುಮಾರ್ ಎಂಬುವರು ದೂರು ನೀಡಿದ್ದರು. ಇದು ಜಗನ್ನಾಥ ರೆಡ್ಡಿ ಅವರ ಕುಟುಂಬದವರೇ ಎಂದು ತಿಳಿಸಿದ್ದರು. ಈ ಕುಟುಂಬದವರು ಯಾವುದೇ ಸಂಬಂಧಿಕರೊಂದಿಗೂ ಒಡನಾಟ ಇಟ್ಟುಕೊಂಡಿರಲಿಲ್ಲ. ಸಾವಿಗೆ ಮುನ್ನದ ಐದಾರು ವರ್ಷಗಳಿಂದ ಒಡನಾಟ ಕಳೆದೊಕೊಂಡಿದ್ದರು. ಮಾನಸಿಕ ಖಿನ್ನತೆಯಿಂದಾಗಿ ಅಕ್ಕ-ಪಕ್ಕದ ಜನರೊಂದಿಗೆ ಸಂಪರ್ಕಕ್ಕೂ ಬಂದಿರಲಿಲ್ಲ ಎಂದು ತಿಳಿದು ಬಂದಿತ್ತು.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com