ದುಬೈ: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ಇತರರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಪತನವಾಗಿದ್ದು ಅದರಲ್ಲಿದ್ದವರು ಯಾರೂ ಬದುಕುಳಿದಿಲ್ಲ ಎಂದು ಸರ್ಕಾರಿ ಮಾಧ್ಯಮ ದೃಢಪಡಿಸಿದೆ.
ಹೆಲಿಕಾಪ್ಟರ್ ಪತನಕ್ಕೀಡಾದ ಪ್ರದೇಶ ಕಡಿದಾದ ಕಣಿವೆಯಲ್ಲಿದೆ. ರಕ್ಷಕರು ಅಲ್ಲಿಗೆ ತಲುಪಲು ಇನ್ನೂ ಸಾಧ್ಯವಾಗಿಲ್ಲ. ಇಂದು ಸೂರ್ಯ ಉದಯಿಸುತ್ತಿದ್ದಂತೆ, ರಕ್ಷಕರು ಹೆಲಿಕಾಪ್ಟರ್ ನ್ನು ಸುಮಾರು 2 ಕಿಲೋಮೀಟರ್ (1.25 ಮೈಲುಗಳು) ದೂರದಿಂದ ನೋಡಿದ್ದಾರೆ ಎಂದು ಇರಾನಿನ ರೆಡ್ ಕ್ರೆಸೆಂಟ್ ಸೊಸೈಟಿಯ ಮುಖ್ಯಸ್ಥ ಪಿರ್ ಹೊಸೈನ್ ಕೊಲಿವಾಂಡ್ ಸುದ್ದಿಸಂಸ್ಥೆಗಳಿಗೆ ತಿಳಿಸಿದೆ.
ಹೆಲಿಕಾಪ್ಟರ್ ನಿನ್ನೆ ಪತನಗೊಂಡಿತ್ತು. ಅದರಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ವಿದೇಶಾಂಗ ಸಚಿವ ಹುಸೇನ್ ಅಮೀರ್ ಅಬ್ದುಲ್ಲಾಹಿಯಾನ್, ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದ ಗವರ್ನರ್ ಮಾಲೆಕ್ ರಹಮತಿ, ತಬ್ರಿಜ್‌ನ ಇಮಾಮ್ ಮೊಹಮ್ಮದ್ ಅಲಿ ಅಲೆಹಶೆಮ್, ಪೈಲಟ್, ಕೋ ಪೈಲಟ್, ಸಿಬ್ಬಂದಿ ಮುಖ್ಯಸ್ಥ, ಭದ್ರತಾ ಮುಖ್ಯಸ್ಥ ಹಾಗೂ ಗನ್‌ಮ್ಯಾನ್‌ಗಳು ಪ್ರಯಾಣಿಸುತ್ತಿದ್ದರು, ಎಲ್ಲರೂ ಸಜೀವ ದಹನವಾಗಿದ್ದಾರೆ ಎಂದು ತಿಳಿದುಬಂದಿದೆ.
Advertisement. Scroll to continue reading.
ಇಬ್ರಾಹಿಂ ರೈಸಿ ನೆರೆಯ ರಾಷ್ಟ್ರವಾದ ಅಝರ್ಬೈಜಾನ್ನಲ್ಲಿ ಆ ದೇಶದ ಅಧ್ಯಕ್ಷ ಇಲ್ಹಾಮ್ ಅಲಿಯಎವ್ ಜತೆ ಅಣೆಕಟ್ಟು ಉದ್ಘಾಟನೆ ಕಾರ್ಯಕ್ರಮಕ್ಕೆ ತೆರಳಿದ್ದರು. ರೈಸಿ ಅವರಿದ್ದ ಹೆಲಿಕಾಪ್ಟರ್ನೊಂದಿಗೆ ಪ್ರಯಾಣಿಸುತ್ತಿದ್ದ ಇತರೆ ಎರಡು ಬೆಂಗಾವಲು ಹೆಲಿಕಾಪ್ಟರ್ಗಳು ಸುರಕ್ಷಿತವಾಗಿ ಹಿಂದಿರುಗಿವೆ. ಬೆಂಗಾವಲು ಹೆಲಿಕಾಪ್ಟರ್ಗಳಲ್ಲಿ ಇಂಧನ ಸಚಿವ ಅಲಿ ಅಕ್ಬರ್ ಮೆಹ್ರಾಬಿಯಾನ್ ಹಾಗೂ ವಸತಿ ಸಚಿವ ಮೆಹ್ರದಾದ್ ಇದ್ದು ಅವರು ಸುರಕ್ಷಿತವಾಗಿ ಮರಳಿದ್ದಾರೆ.
ಇಬ್ರಾಹಿಂ ರೈಸಿ ಮತ್ತು ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ನೇತೃತ್ವದಲ್ಲಿ ಇರಾನ್ ಕಳೆದ ತಿಂಗಳು ಇಸ್ರೇಲ್ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿಯನ್ನು ಪ್ರಾರಂಭಿಸಿತ್ತು. ಯುರೇನಿಯಂನ್ನು ಶಸ್ತ್ರಾಸ್ತ್ರ-ದರ್ಜೆಯ ಮಟ್ಟಕ್ಕೆ ಎಂದಿಗಿಂತಲೂ ಹತ್ತಿರದಲ್ಲಿ ಉತ್ಕ್ರೃಷ್ಠಗೊಳಿಸಿತ್ತು.
Advertisement. Scroll to continue reading.