ಚೆನ್ನೈ: ಟ್ರೋಲ್‌ಗಳು ಮತ್ತು ಸಾಮಾಜಿಕ ನಿಂದನೆಗಳು ಸಾಮಾನ್ಯ ವ್ಯಕ್ತಿಗಳ ಬದುಕನ್ನು ಹೇಗೆ ಕಸಿದುಕೊಳ್ಳುತ್ತದೆ ಎಂಬುದಕ್ಕೆ ಚೆನ್ನೈಯಲ್ಲಿ ನಡೆದ ದುರಂತವೊಂದು ಉತ್ತಮ ಉದಾಹರಣೆ. ಇತ್ತೀಚೆಗೆ ಚೆನ್ನೈನ ನಾಲ್ಕು ಮಹಡಿಯ ಅಪಾರ್ಟ್‌ಮೆಂಟ್ ಒಂದರ ಬಾಲ್ಕನಿಯಲ್ಲಿ ಸಿಕ್ಕಿಕೊಂಡಿದ್ದ ಶಿಶುವೊಂದನ್ನು ಅಲ್ಲಿನ ಜನರು ಸಾಹಸಪಟ್ಟು ರಕ್ಷಿಸುವ ವಿಡಿಯೋ ಕಳೆದ ತಿಂಗಳು ವೈರಲ್ ಆಗಿತ್ತು. ಇದು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ಈ ಘಟನೆ ಕಾರಣದಿಂದ ತೀವ್ರ ಅವಮಾನ ಅನುಭವಿಸಿದ ಆ ಮಗುವಿನ ತಾಯಿ ಆತ್ಮಹತ್ಯೆ ಮಾಡಿಕೊಂಡ ಮನಕಲಕುವ ಘಟನೆ ನಡೆದಿದೆ.
ಮಗು ಜೀವಂತವಾಗಿ ಸಿಕ್ಕರೂ ಟ್ರೋಲ್‌ಗಳಿಂದ ವೇದನೆ ಅನುಭವಿಸಿದ ಅದರ 33 ವರ್ಷದ ಅಮ್ಮ, ಕೊಯಮತ್ತೂರಿನಲ್ಲಿನ ತನ್ನ ತಾಯಿ ಮನೆಯಲ್ಲಿ ಜೀವ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಘಟನೆ ಬಳಿಕ ಮಹಿಳೆ ರಮ್ಯಾ ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ಆಕೆಯ ಕುಟುಂಬಸ್ಥರು ತಿಳಿಸಿರುವುದಾಗಿ ಕೊಯಮತ್ತೂರಿನ ಕರಾಮಡೈ ಪೊಲೀಸ್ ಠಾಣೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಏಳು ತಿಂಗಳ ಹೆಣ್ಣು ಮಗು ಆಕಸ್ಮಿಕವಾಗಿ ಬಾಲ್ಕನಿಯಿಂದ ಜಾರಿದ್ದು, ಅಲ್ಲಿನ ನಿವಾಸಿಗಳು ತಮ್ಮ ಪ್ರಾಣ ಪಣಕ್ಕಿಟ್ಟು ಆ ಮಗುವನ್ನು ಕಾಪಾಡಿದ್ದರು. ಇದರ ವಿಡಿಯೋ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹಂಚಿಕೊಂಡಿದ್ದ ಜನರು, ನೆರೆಹೊರೆಯವರ ಸಾಹಸವನ್ನು ಕೊಂಡಾಡಿದ್ದರು. ಆದರೆ ಇದೇ ವೇಳೆ ಮಗುವಿನ ಹೆತ್ತ ತಾಯಿ ದೂಷಣೆಗೆ ಒಳಗಾಗಿದ್ದರು. ಆಕೆಯ ನಿರ್ಲಕ್ಷ್ಯದಿಂದ ಹೀಗಾಗಿದ್ದು ಎಂದು ಅನೇಕರು ಟೀಕಿಸಿದ್ದರು. ಟ್ರೋಲ್‌ಗಳು, ನಿಂದನೆಗಳನ್ನು ಗಮನಿಸಿದ್ದ ರಮ್ಯಾ, ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಅಪಾರ್ಟ್‌ಮೆಂಟ್ ವಾತಾವರಣದಿಂದ ನೆಮ್ಮದಿ ಪಡೆಯಲು ಕೊಯಮತ್ತೂರಿನ ತವರು ಮನೆಗೆ ತೆರಳಿದ್ದರು. ಆದರೆ ಅವರು ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ಕೂಡಲೇ ಸ್ಪಂದಿಸಿದ ಅಕ್ಕಪಕ್ಕದ ಮನೆಯವರು ಅವರ ಸಹಾಯಕ್ಕೆ ಧಾವಿಸಿದ್ದರು. ಒಬ್ಬರಿಗೊಬ್ಬರು ನೆರವು ನೀಡುತ್ತಾ, ಬಾಲ್ಕನಿಯ ಹೊರಗಿನಿಂದ ಮಗುವಿನ ಬಳಿ ತೆರಳಿ, ಅದನ್ನು ಕಾಪಾಡುವಲ್ಲಿ ಸಫಲರಾಗಿದ್ದರು. ಘಟನೆಯಲ್ಲಿ ಮಗುವಿನ ಕೈ ಹಾಗೂ ಕಾಲುಗಳಿಗೆ ಗಾಯಗಳಾಗಿತ್ತು.
ಪತಿ ವೆಂಕಟೇಶ್, ನಾಲ್ಕು ವರ್ಷದ ಮಗ ಹಾಗೂ ಏಳು ತಿಂಗಳ ಪುಟ್ಟ ಕಂದಮ್ಮನನ್ನು ಅವರು ಅಗಲಿದ್ದಾರೆ.
ಏಪ್ರಿಲ್ 28ರಂದು ತಿರುಮುಲ್ಲೈವೊಯಲ್‌ನಲ್ಲಿರುವ ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯ ಬಾಲ್ಕನಿಯಲ್ಲಿ ರಮ್ಯಾ ಅವರು ತಮ್ಮ ಮಗಳ ಜತೆ ಆಡುತ್ತಿದ್ದರು. ಆಗ ಅವರ ಕೈಯಿಂದ ಜಾರಿದ್ದ ಮಗು, ಬಿಸಿಲಿನಿಂದ ರಕ್ಷಣೆಗಾಗಿ ಹಾಕಿದ್ದ ತಾತ್ಕಾಲಿಕ ಶೀಟ್ ಮೇಲೆ ಬಿದ್ದಿತ್ತು. ಅದೃಷ್ಟವಶಾತ್ ಮಗು ಅಲ್ಲಿಯೇ ಹೇಗೋ ಸಿಲುಕಿಕೊಂಡಿತ್ತು.
ಘಾಸಿಗೊಂಡಿದ್ದ ರಮ್ಯಾ
ರಮ್ಯಾ ಅವರ ಅಜಾಗರೂಕತೆಯಿಂದ ಮಗುವಿನ ಜೀವ ಅಪಾಯಕ್ಕೆ ಸಿಲುಕಿತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಟೀಕಿಸಿದ್ದರು. ಅಪಾರ್ಟ್‌ಮೆಂಟ್‌ನಲ್ಲಿಯೂ ಕೆಲವರ ಕೊಂಕು ಮಾತಿನಿಂದ ಅವರು ತೀವ್ರ ನೊಂದಿದ್ದರು. ಹೀಗಾಗಿ ಘಟನೆ ಬಳಿಕ ವೆಂಕಟೇಶ್ ಮತ್ತು ರಮ್ಯಾ ಅವರು ಮಕ್ಕಳ ಸಹಿತ ಕೊಯಮತ್ತೂರಿನ ಮನೆಗೆ ತೆರಳಿದ್ದರು.
ಎರಡನೇ ಮಗುವಿನ ಹೆರಿಗೆ ನಂತರ ಖಿನ್ನತೆಗೆ ಒಳಗಾಗಿದ್ದ ರಮ್ಯಾ, ಈ ಘಟನೆ ಬಳಿಕ ಮತ್ತಷ್ಟು ಶೋಚನೀಯ ಸ್ಥಿತಿಗೆ ಜಾರಿದ್ದರು. ಮೇ 18ರಂದು ಆಕೆಯ ಪೋಷಕರು ಸಮಾರಂಭವೊಂದರಲ್ಲಿ ಭಾಗವಹಿಸಲು ತೆರಳಿದ್ದರು. ಆಗ ಮಗುವಿನ ಜತೆ ರಮ್ಯಾ ಒಂಟಿಯಾಗಿ ಮನೆಯಲ್ಲಿದ್ದರು. ಪೋಷಕರು ಮರಳಿ ಬಂದಾಗ ರಮ್ಯಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ರಮ್ಯಾ ಅವರು ಚೆನ್ನೈನ ಐಟಿ ಕಂಪೆನಿಯೊಂದರ ಉದ್ಯೋಗಿಯಾಗಿದ್ದರು. ಅವರ ಪತಿ ಕೂಡ ಐಟಿ ಉದ್ಯೋಗಿ.