ಟೋಕಿಯೋ: ಸಾಮಾಜಿಕ ಜಾಲತಾಣ ಬಳಕೆ ಮಾಡುವವರು ಈ ಶ್ವಾನವನ್ನು ನೋಡದೆ ಇರಲು ಸಾಧ್ಯವಿಲ್ಲ. ಬಹುಶಃ ಈ ನಾಯಿಯ ಚಿತ್ರವನ್ನು ಬಳಸದ ಮೀಮ್ ಪೇಜ್‌ಗಳೇ ಇಲ್ಲ. ಜಗತ್ತಿನಾದ್ಯಂತ ವೈರಲ್ ಆಗಿದ್ದ, ಕೋಟ್ಯಂತರ ಜನರಲ್ಲಿ ನಗು ಮೂಡಿಸಿದ್ದ ಜಪಾನ್‌ನ ಬಹು ಜನಪ್ರಿಯ ಶ್ವಾನ ಕಬೊಸು ಶುಕ್ರವಾರ ಮೃತಪಟ್ಟಿದೆ.
19 ವರ್ಷದ ಕಬೊಸು ಮೇ 24ರಂದು ಮೃತಪಟ್ಟಿದ್ದು, ಅದರ ವಿದಾಯದ ಕೂಟವು ಮೇ 26ರಂದು ನಡೆಯಲಿದೆ ಎಂದು ಶ್ವಾನದ ಮಾಲಕಿ ಅತ್ಸುಕೊ ಸಾಟೊ ಅವರು ಬ್ಲಾಗ್ ಪೋಸ್ಟ್‌ನಲ್ಲಿ ಸಾವಿನ ಸುದ್ದಿ ಪ್ರಕಟಿಸಿದ್ದಾರೆ.
ಶಿಬಾ ಇನು ತಳಿಗೆ ಸೇರಿದ ಕಬೊಸು ಹೆಸರಿನ ಹೆಣ್ಣು ನಾಯಿಯನ್ನು ಅತ್ಸುಕೊ ಅವರು 2008ರಲ್ಲಿ ದತ್ತು ಪಡೆದುಕೊಂಡಿದ್ದರು. “ಕಬೊಸು, ಮೇ 24ರ ಬೆಳಿಗ್ಗೆ 7.50ಕ್ಕೆ ಗಾಢ ನಿದ್ರೆಗೆ ಜಾರಿದೆ. ಕಬೊಸು ಈಗ ವಿಶ್ರಾಂತಿಯಲ್ಲಿದೆ” ಎಂದು ಅತ್ಸುಕೊ ಸಾಟೊ ಬರೆದಿದ್ದಾರೆ.
Advertisement. Scroll to continue reading.
ಮೇ 26ರ ಭಾನುವಾರದಂದು ಕಬೊ- ಚಾನ್‌ಗಾಗಿ ನಾವು ವಿದಾಯದ ಕೂಟ ಆಯೋಜಿಸಲಿದ್ದೇವೆ. ಇದು ಮಧ್ಯಾಹ್ನ 1ರಿಂದ 4 ಗಂಟೆಯವರೆಗೆ ನಾರಿಟಾ ಸಿಟಿಯ ಕೊತ್ಸು ನೊ ಮೊರಿಯಲ್ಲಿನ ಫ್ಲವರ್ ಕಾವೊರಿಯಲ್ಲಿ ನಡೆಯಲಿದೆ ಎಂದು ಬ್ಲಾಗ್‌ನಲ್ಲಿ ಮಾಹಿತಿ ನೀಡಿದ್ದಾರೆ.
ಕಬೊಸು ಶ್ವಾನವು ಚೊಲಂಗಿಯೊ ಹೆಪಟೈಟಿಸ್ ಮತ್ತು ಲಿಂಫೋಮಾ ಲ್ಯುಕೇಮಿಯಾದ ದೀರ್ಘಕಾಲೀನ ಕಾಯಿಲೆಗೆ ತುತ್ತಾಗಿರುವುದು 2022ರಲ್ಲಿ ಪತ್ತೆಯಾಗಿತ್ತು ಎಂದು ಅತ್ಸುಕೊ ತಿಳಿಸಿದ್ದಾರೆ.
ಶಿಬಾ ಇನು ತಳಿತ ಕಬೊಸು ಶ್ವಾನದ ಚಿತ್ರಗಳು 2010ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಸುಮಾರು ಒಂದೂವರೆ ದಶಕ ಕಳೆದರೂ ‘ಡಾಗ್’ ಹೆಸರಿನಲ್ಲಿ ಇದು ಈಗಲೂ ಇಂಟರ್ನೆಟ್‌ನಲ್ಲಿ ಬಹು ಜನಪ್ರಿಯವಾಗಿಯೇ ಉಳಿದಿದೆ. ಈ ಶ್ವಾನದ ಚಿತ್ರವು ಅನೇಕ ತಮಾಷೆಯ ಮೀಮ್‌ಗಳಿಗೆ ಸ್ಫೂರ್ತಿ ನೀಡಿದೆ. ಅಷ್ಟೇ ಅಲ್ಲ, 2013ರಲ್ಲಿ ಕ್ರಿಪ್ಟೋಕರೆನ್ಸಿಯ ಸೃಷ್ಟಿಯಲ್ಲಿಯೂ ಇದು ಪ್ರೇರಣೆಯಾಗಿದೆ. ಕಬೊಸುದ ಚಿತ್ರವನ್ನು ಬಳಸಿಕೊಂಡು ಡಾಗ್‌ಕಾಯಿನ್ ಲೋಗೋ ತಯಾರಿಸಲಾಗಿತ್ತು.
ಆರಂಭದಲ್ಲಿ ಅದು ತಮಾಷೆಗಾಗಿ ಸೃಷ್ಟಿಸಿದ್ದ ಕಾಯಿನ್ ಆಗಿದ್ದರೂ, ಅದರ ಜನಪ್ರಿಯತೆಯು ಮುಂದೆ ನಾಯಿಗಳ ಹೆಸರಲ್ಲಿ ಇತರೆ ಕ್ರಿಪ್ಟೊಕರೆನ್ಸಿಗಳ ಅಭಿವೃದ್ಧಿಗೆ ಉತ್ತೇಜನ ನೀಡಿತ್ತು. ಶಿಬಾ ಇನು (ಶಿಬ್) ಮತ್ತು ಫ್ಲೋಕಿಯಂತಹ ಇತರೆ ಶ್ವಾನ ಥೀಮ್‌ನ ಟೋಕನ್‌ಗಳ ಸೃಷ್ಟಿಸಿದೆ ಡಾಗ್‌ಕಾಯಿನ್ ಯಶಸ್ಸು ಪ್ರೇರಣೆ ನೀಡಿತ್ತು. ಅಷ್ಟೇ ಅಲ್ಲ, ಟೆಸ್ಲಾ ಸಿಇಒ ಎಲಾನ್ ಮಸ್ಕ್, ತಾವು ‘ಎಕ್ಸ್’ ಸಂಸ್ಥೆಯನ್ನು (ಆಗಿನ ಟ್ವಿಟ್ಟರ್) ಖರೀದಿಸಿದ ಆರಂಭದಲ್ಲಿ ಕಬೊಸು ಚಿತ್ರವನ್ನು ಕೆಲವು ಸಮಯದವರೆಗೆ ಅದರ ಲೋಗೋವನ್ನಾಗಿ ಬಳಸಿದ್ದರು. ಇದರಿಂದಾಗಿ ಕ್ರಿಪ್ಟೊ ದರ ಗಗನಮುಖಿಯಾಗಿತ್ತು.
Advertisement. Scroll to continue reading.
ಕಬೊಸುದ ಸಾವಿನ ಸುದ್ದಿ ಹಂಚಿಕೊಂಡಿರುವ ಡಾಗ್‌ಕಾಯಿನ್, ಸಂತಾಪ ವ್ಯಕ್ತಪಡಿಸಿದೆ.