ಹಿಸಾರ್: ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ಅದನ್ನು ಗುಣಪಡಿಸಲು ನಮಗೆ ವೈದ್ಯರು ಇರುತ್ತಾರೆ. ಆದರೆ ಪ್ರಾಣಿಗಳಿಗೆ? ಸಾಕು ಪ್ರಾಣಿಗಳಿಗಾಗಿ ಪಶು ವೈದ್ಯಕೀಯ ಆಸ್ಪತ್ರೆಗಳಿವೆ. ತೊಂದರೆಗೆ ಸಿಲುಕಿದ ಕಾಡು ಪ್ರಾಣಿಗಳಿಗೂ ಪಶು ವೈದ್ಯರೇ ಚಿಕಿತ್ಸೆ ನೀಡಿ ಗುಣಪಡಿಸಿ ನಿದರ್ಶನಗಳಿವೆ. ಆದರೆ ಅಪರೂಪದ ಪ್ರಕರಣವೊಂದರಲ್ಲಿ ಸರ್ಕಾರಿ ಆರೋಗ್ಯ ವಿವಿಯ ವೈದ್ಯರು, ಕೋತಿಯೊಂದಕ್ಕೆ ಕಣ್ಣಿನ ದೃಷ್ಟಿ ಮರಳಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ವಿದ್ಯುತ್ ಆಘಾತದಿಂದ ಸುಟ್ಟ ಗಾಯಗಳಿಂದಾಗಿ ದೃಷ್ಟಿ ಸಾಮರ್ಥ್ಯ ಕಳೆದುಕೊಂಡಿದ್ದ ಮಂಗವೊಂದಕ್ಕೆ, ಹರ್ಯಾಣದ ವೈದ್ಯರ ತಂಡವು ಕಣ್ಣಿನ ಪೊರೆಯ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ.
ಹಿಸಾರ್ ಜಿಲ್ಲೆಯ ಲಾಲಾ ಲಜಪತ್ ರಾಯ್ ಪಶು ವೈದ್ಯಕೀಯ ಹಾಗೂ ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯವು (ಎಲ್‌ಯುವಿಎಎಸ್) ಹರ್ಯಾಣದಲ್ಲಿ ಇದೇ ಮೊದಲ ಬಾರಿಗೆ ವಾನರವೊಂದಕ್ಕೆ ಕ್ಯಾಟರಾಕ್ಟ್ ಸರ್ಜರಿ ನಡೆಸಿದೆ. ರಾಜ್ಯದಲ್ಲಿ ಕೋತಿಯೊಂದಕ್ಕೆ ಈ ರೀತಿ ಸರ್ಜರಿ ನಡೆದಿರುವುದು ಇದು ಮೊದಲ ಪ್ರಕರಣ ಎಂದು ವಿವಿ ತಿಳಿಸಿದೆ.
Advertisement. Scroll to continue reading.
ಹನ್ಸಿ ನಿವಾಸಿಯಾಗಿರುವ ಪ್ರಾಣಿ ಪ್ರಿಯ ಮುನಿಶ್ ಅವರು ಈ ಮಂಗವನ್ನು ಕ್ಯಾಂಪಸ್‌ಗೆ ಕರೆತಂದಿದ್ದರು. ವಿದ್ಯುತ್ ಶಾಕ್ ಹೊಡೆದಿದ್ದರಿಂದ ಕೋತಿಯು ಗಂಭೀರ ಸ್ವರೂಪದ ಸುಟ್ಟ ಗಾಯಗಳಿಂದ ನರಳುತ್ತಿತ್ತು ಎಂದು ವಿವಿಯ ಪ್ರಾಣಿ ಸರ್ಜರಿ ಮತ್ತು ರೇಡಿಯಾಲಜಿ ವಿಭಾಗದ ಮುಖ್ಯಸ್ಥ ಆರ್ ಎನ್ ಚೌಧರಿ ತಿಳಿಸಿದ್ದಾರೆ.
ಆರಂಭದಲ್ಲಿ ಕೋತಿಗೆ ನಡೆದಾಡುವುದು ಸಾಧ್ಯವಾಗುತ್ತಿರಲಿಲ್ಲ. ಆದರೆ ಅನೇಕ ದಿನಗಳವರೆಗೆ ಆರೈಕೆ ಹಾಗೂ ಚಿಕಿತ್ಸೆ ನೀಡಿದ ಬಳಿಕ ವಾನರ ನಡೆಯಲು ಆರಂಭಿಸಿತ್ತು. ಆದರೆ ಅದರ ಕಣ್ಣೇ ಕಾಣಿಸುತ್ತಿಲ್ಲ ಎನ್ನುವುದು ವೈದ್ಯರ ಗಮನಕ್ಕೆ ಬಂದಿತ್ತು ಎಂದು ಆರ್‌ಎನ್ ಚೌಧರಿ ಅವರು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೋತಿ ಅಂಧತ್ವದಿಂದ ಬಳಲುತ್ತಿರುವುದು ದೃಢಪಟ್ಟ ಬಳಿಕ ವಿವಿಯ ಸರ್ಜರಿ ವಿಭಾಗಕ್ಕೆ ಚಿಕಿತ್ಸೆಗಾಗಿ ಅದನ್ನು ಕರೆದುಕೊಂಡು ಬರಲಾಯಿತು. ವಿವಿಯ ನೇತ್ರ ವಿಭಾಗದಲ್ಲಿ ಅದರ ಪರೀಕ್ಷೆ ನಡೆಸಲಾಗಿತ್ತು. ಕೋತಿಯ ಎರಡೂ ಕಣ್ಣುಗಳಲ್ಲಿ ಪೊರೆ ಬೆಳೆದಿರುವುದನ್ನು ಡಾ ಪ್ರಿಯಾಂಕಾ ದುಗ್ಗಲ್ ಪತ್ತೆ ಮಾಡಿದ್ದರು. ಒಂದು ಕಣ್ಣಿನ ಗುಡ್ಡೆಯ ಭಾಗಕ್ಕೆ ಹಾನಿಯಾಗಿತ್ತು. ಹೀಗಾಗಿ ಇನ್ನೊಂದು ಕಣ್ಣಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಸರ್ಜರಿ ಬಳಿಕ ಕೋತಿ ದೃಷ್ಟಿ ಸಾಮರ್ಥ್ಯ ಮರಳಿ ಪಡೆದಿದೆ ಎಂದು ಅವರು ಹೇಳಿದ್ದಾರೆ.
Advertisement. Scroll to continue reading.