ಬೆಂಗಳೂರು: ಕನ್ನಡ ಸಾಹಿತ್ಯ ಲೋಕಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡಿದಿ ಎನ್ನೆಸ್ಸೆಲ್, ಎಂದೇ ಮನೆಮಾತಾಗಿದ್ದ ಖ್ಯಾತ ಕವಿ, ಸಾಹಿತಿ ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು(85) ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ. ಬೆಳಗ್ಗೆ 4:45ರ ಸುಮಾರಿಗೆ ಬನಶಂಕರಿಯ ತಮ್ಮ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ. ಅವರು ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು 1936 ಅಕ್ಟೋಬರ್ 29 ರಂದು ಶಿವಮೊಗ್ಗೆಯಲ್ಲಿ ಜನಿಸಿದರು. ಇವರ ತಂದೆ ಶಿವರಾಮ ಭಟ್ಟ, ತಾಯಿ ಮೂಕಾಂಬಿಕೆ. ಶಿವಮೊಗ್ಗದಲ್ಲಿ ಇಂಟರ್ ಮೀಡಿಯೆಟ್ ಮುಗಿಸಿ, ಕನ್ನಡ ಎಂ.ಎ. ಆನರ್ಸ್ ಪದವಿಯನ್ನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪಡೆದಿದ್ದರು. ತೀನಂಶ್ರೀ ಮಾರ್ಗದರ್ಶನದಲ್ಲಿ ಸಂಶೋಧನ ವೃತ್ತಿ ಆರಂಭಿಸಿದರು. 1965 ರಲ್ಲಿ ಬೆಂಗಳೂರು ವಿಶ್ವವಿಧ್ಯಾಲಯವನ್ನು ಸೇರಿ, ಅಧ್ಯಾಪಕ, ರೀಡರ್, ಪ್ರಾಧ್ಯಾಪಕ, ನಿರ್ದೇಶಕ 1990 ರಲ್ಲಿ ಆರ್ಟ್ ಫ್ಯಾಕಲ್ಟಿ ಡೀನ್ ಆಗಿ ಸೇವೆ ಸಲ್ಲಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಆಧುನಿಕ ಕನ್ನಡ ಕಾವ್ಯ ಕುರಿತು ಪಿಎಚ್ಡಿ ಪದವಿ ಪಡೆದಿದ್ದು, ಅವರು ಕನ್ನಡ ಮಾತ್ರವಲ್ಲದೇ ಇಂಗ್ಲೀಷ್, ಸಂಸ್ಕೃತ ಭಾಷೆಯಲ್ಲೂ ಪಾಂಡಿತ್ಯ ಹೊಂದಿದ್ದರು.