ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ದೇವಾಲಯಗಳ ಪ್ರವೇಶಕ್ಕೆ ಒಂದು ವೇಳೆ ಒಂದೇ ಸಲ ಅವಕಾಶಗಳನ್ನು ಕೊಟ್ಟರೆ ಜನಜಂಗುಳಿ ಆಗುವ ಸಾಧ್ಯತೆಗಳಿದೆ. ಹಾಗಾಗಿ ಸ್ವಲ್ಪ ದಿನಗಳ ಬಳಿಕ ತೆರೆಯುವ ಬಗ್ಗೆ ಸರ್ಕಾರ ಆಲೋಚಿಸುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ನಮ್ಮಅಹವಾಲುಗಳನ್ನು ಕೇಳಿ ಆದಷ್ಟು ಬೇಗ ಸಾಮಾಜಿಕ ಅಂತರಗಳನ್ನು ಕಾಯ್ದುಕೊಂಡು ದೇವಸ್ಥಾನಗಳನ್ನು ತೆರೆಯುವ ಬಗ್ಗೆ ಚರ್ಚೆ ನಡೆಸಿ ಮುಂದಿನ ತೀರ್ಮಾನಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಗುರುವಾರ ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನದ ವತಿಯಿಂದ ಕೊಲ್ಲೂರು ಗ್ರಾ.ಪಂ ವ್ಯಾಪ್ತಿಯ ಬಿಪಿಎಲ್ ಕಾರ್ಡ್ ಹೊಂದಿರುವ ಸುಮಾರು 550 ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದರು.
Advertisement. Scroll to continue reading.
14 ರ ಬಳಿಕ ರಾಜ್ಯದಲ್ಲಿ ಲಾಕ್ ಡೌನ್ ಸ್ವಲ್ಪ ಮಟ್ಟಿಗೆ ತೆರೆಯಬಹುದು. ಸರ್ಕಾರದ ನಿರ್ದಿಷ್ಟ ಯೋಜನೆಯ ಪ್ರಕಾರ ಒಟ್ಟು ಟೆಸ್ಟ್ ನಡೆಸಿ ಪಾಸಿಟಿವ್ ರೇಟ್ ಶೇಕಡಾ ಐದರಷ್ಟು ಇದ್ದರೆ ದೇವಸ್ಥಾನಗಳ ತೆರವಿಗೆ ಆದಷ್ಟು ಅವಕಾಶಗಳನ್ನು ಕೊಡುತ್ತೇವೆ ಎಂದು ಅವರು ಹೇಳಿದರು
ಸಿ ದರ್ಜೆಯ ದೇವಸ್ಥಾನಗಳ ಅರ್ಚಕರಿಗೆ ಕಿಟ್
ಕರ್ನಾಟಕ ರಾಜ್ಯದಲ್ಲಿರುವ ಎ ದರ್ಜೆಯ ದೇವಸ್ಥಾನಗಳ ಮೂಲಕ ಸಿ ದರ್ಜೆಯಲ್ಲಿರುವ ದೇವಸ್ಥಾನಗಳ ಅರ್ಚಕರಿಗೆ ಹಾಗೂ ಸಿಬ್ಬಂದಿಗಳಿಗೆ ಆಹಾರ ಕಿಟ್ ವಿತರಿಸುವ ಬಗ್ಗೆ ತೀರ್ಮಾನ ಕೈಗೊಂಡಿದ್ದೇವೆ. ಈ ಮಧ್ಯೆ ಗೌರವಾನ್ವಿತ ಮುಖ್ಯಮಂತ್ರಿಗಳು ದೇವಸ್ಥಾನಗಳಲ್ಲಿರುವ ಅರ್ಚಕರಿಗೆ ಮೂರು ಸಾವಿರ ರೂ. ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಕೊಲ್ಲೂರು ದೇವಳದ ಮೂಲಕ ಬಡವರಿಗೆ ಆಹಾರ ಕಿಟ್ ವಿತರಣೆ ಮಾಡುವ ಈ ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಿದೆ ಎಂದರು.
ಈ ವೇಳೆಯಲ್ಲಿ ಬೈಂದೂರು ತಹಸೀಲ್ದಾರ್ ಶೋಭಾ ಲಕ್ಷ್ಮೀ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ್ ಶೆಟ್ಟಿ, ಸದಸ್ಯರಾದ ಜಯಾನಂದ ಹೋಬಳಿದಾರ್, ವೆಂಕಟೇಶ್ ಕಿಣಿ ಬೆಳ್ವೆ, ಕೆಪಿ ಶೇಖರ್, ಸಂದ್ಯಾ ರಮೇಶ್, ರತ್ನ ರಮೇಶ್, ಸಿಬ್ಬಂದಿಗಳು ಉಪಸ್ಥಿತರಿದ್ದರು.
Advertisement. Scroll to continue reading.