ಉಡುಪಿ : ಟ್ಯಾಬ್ಲೆಟ್ ಪಿಸಿ ಗಳಿಂದ ಆನ್‍ಲೈನ್ ವಿದ್ಯಾಭ್ಯಾಸಕ್ಕೆ ಅನುಕೂಲ : ರಘುಪತಿ ಭಟ್
Published
0
ಉಡುಪಿ : ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ಉದ್ದೇಶದಿಂದ, ಸರಕಾರವು ಎಲ್ಲಾ ಸರಕಾರಿ ಕಾಲೇಜುಗಳ ಪದವಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್ ಪಿಸಿ ವಿತರಿಸುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗಳಿಗೆ ಹಾಜರಾಗಲು ಅನುಕೂಲವಾಗಲಿದೆ. ಈ ಕಾರ್ಯಕ್ರಮಕ್ಕೆ ಇಂದು ಮುಖ್ಯಮಂತ್ರಿಗಳು, ಉನ್ನತ ಶಿಕ್ಷಣ ಸಚಿವರ ಸಮ್ಮುಖದಲ್ಲಿ ಚಾಲನೆ ನೀಡಿರುವುದು ಅಭಿನಂದನೀಯ ಎಂದು ಶಾಸಕ ರಘುಪತಿ ಭಟ್ ಹೇಳಿದರು. ಅವರು ಇಂದು ಅಜ್ಜರಕಾಡು ಡಾ.ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ, ಕಾಲೇಜು ಶಿಕ್ಷಣ ಇಲಾಖೆ ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ಮತ್ತು ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸ್ಮಾರ್ಟ್‍ಕ್ಲಾಸ್ ರೂಂಗಳ ಉದ್ಘಾಟನೆ ಹಾಗೂ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್ ಪಿ.ಸಿ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಆಸಕ್ತಿಯಿಂದ ತಮ್ಮನ್ನು ತೊಡಗಿಸಿಕೊಂಡಾಗ ಮಾತ್ರ ಭವಿಷ್ಯದಲ್ಲಿ ಯಶಸ್ಸು ಕಾಣಲು ಸಾಧ್ಯ. ಆದರೆ ಇತ್ತೀಚಿನ ಯುವ ಜನರು ಸ್ಮಾರ್ಟ್ ಫೋನ್‍ಗಳನ್ನು ಸದುದ್ದೇಶಕ್ಕೆ ಬಳಸಿಕೊಳ್ಳದೇ ದುರುಪಯೋಗ ಪಡಿಸಿಕೊಂಡು ತಮ್ಮ ಭವಿಷ್ಯವನ್ನೇ ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಸರ್ಕಾರದಿಂದ ಉಚಿತವಾಗಿ ದೊರೆತ ಈ ಟ್ಯಾಬ್ಲೆಟ್‍ಗಳನ್ನು ಬಳಸಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿ ಇತರರಿಗೆ ಮಾದರಿಯಾಗಬೇಕು ಎಂದರು. ಕೊರೋನಾದ ನಿಮಿತ್ತವಾಗಿ ಎಲ್ಲಾ ಶಾಲಾ – ಕಾಲೇಜುಗಳು ಮುಚ್ಚಲ್ಪಟ್ಟಿರುವುದರಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದಂತೆ ತಡೆಯಲು ಮುಂದಿನ ದಿನಗಳಲ್ಲಿ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು ಲಸಿಕೆ ಪಡೆಯಲು ಅನುಕೂಲವಾಗುವಂತೆ, ಕೋವಿಡ್ ಲಸಿಕಾ ಅಭಿಯಾನವನ್ನು ಆರಂಭಿಸಿ, ಪ್ರತಿಯೊಬ್ಬ ವಿದ್ಯಾರ್ಥಿಗಳು ಲಸಿಕೆ ಪಡೆದು ಶಾಲಾ- ಕಾಲೇಜುಗಳನ್ನು ಪುನರಾರಂಭಿಸಲು ರಾಜ್ಯ ಸರ್ಕಾರವು ನಿರ್ಧರಿಸಿದೆ ಎಂದರು.
ತೆಂಕನಿಡಿಯೂರು ಕಾಲೇಜಿನ ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಹೆಗ್ಡೆ ಸ್ವಾಗತಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣ ಸೌಲಭ್ಯಗಳು ದೊರಕುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದ್ದು, ಈ ಟ್ಯಾಬ್ಲೆಟ್‍ಗಳಿಗೆ ಸಿಮ್ ಅಳವಡಿಸುವುದರ ಮೂಲಕ ಇಂಟರ್‍ನೆಟ್ ಸಂಪರ್ಕ ಕಲ್ಪಿಸಿ, ಆನ್‍ಲೈನ್ ತರಗತಿಯಲ್ಲಿ ಪಾಲ್ಗೊಳ್ಳಬಹುದು ಎಂದರು. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ – ಉಡುಪಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶಪಾಲ್ ಸುವರ್ಣ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ವಂದಿಸಿದರು.