ಚಂದನವನ : ತಮ್ಮ ನಟನೆಯ ಮೂಲಕ ಗಮನ ಸೆಳೆದಿರುವ ನಟಿ ಹರಿಪ್ರಿಯ ತಮ್ಮ ಪ್ರತಿಭೆಗೆ ಹಾಲಿವುಡ್ ಪ್ರಶಸ್ತಿಯೊಂದನ್ನು ಬಾಚಿಕೊಂಡಿದ್ದಾರೆ. ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಅಮೃತಮತಿ’ ಚಿತ್ರದಲ್ಲಿ ಟೈಟಲ್ ರೋಲ್ ನಲ್ಲಿ ಹರಿಪ್ರಿಯಾ ಮಿಂಚಿದ್ದಾರೆ. ಈ ಚಿತ್ರ ಹಾಲಿವುಡ್ ‘ಅಂತರಾಷ್ಟ್ರೀಯ ಗೋಲ್ಡನ್ ಏಜ್ ಚಿತ್ರೋತ್ಸವ’ದಲ್ಲಿ ಪ್ರದರ್ಶನ ಕಂಡಿತ್ತು. ಈ ಚಿತ್ರದ ನಟನೆಗೆ ಅವರು ಶ್ರೇಷ್ಠನಟಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಈ ಮೂಲಕ ಕನ್ನಡದ ಮತ್ತೊಂದು ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ.
‘ಅಮೃತಮತಿ’ ಸಿನೆಮಾವು ‘ಅಟ್ಲಾಂಟ ಅಂತರಾಷ್ಟ್ರೀಯ ಚಿತ್ರೋತ್ಸವ’ದಲ್ಲಿ ಕೂಡ ಶ್ರೇಷ್ಠ ವಿದೇಶಿ ಭಾಷೆಯ ಚಿತ್ರವೆಂಬ ಪ್ರಶಸ್ತಿ ಪಡೆದುಕೊಂಡಿತ್ತು. ಲಾಸ್ ಏಂಜಲೀಸ್ ಸನ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಶ್ರೇಷ್ಠ ಚಿತ್ರ ಮತ್ತು ನಿರ್ದೇಶಕ ಬರಗೂರರಿಗೆ ಶ್ರೇಷ್ಠ ಚಿತ್ರಕತೆ ಪ್ರಶಸ್ತಿ ತಂದುಕೊಟ್ಟಿತ್ತು. ಚಿತ್ರಕ್ಕೆ ಮತ್ತೊಂದು ಪ್ರಶಸ್ತಿ ದೊರಕಿದ್ದು ಈ ಚಿತ್ರದ ಗರಿಮೆ ಹೆಚ್ಚಿಸಿದೆ. ಇಲ್ಲಿಯವರೆಗೆ ಈ ಚಿತ್ರವು ಹತ್ತಕ್ಕೂ ಹೆಚ್ಚು ಅಂತರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿ ಪ್ರದರ್ಶನ ಕಂಡಿರುವುದು ವಿಶೇಷ.
ಅಮೃತಮತಿ ಚಿತ್ರವು 13ನೇ ಶತಮಾನದ ಕವಿ ಜನ್ನ ಬರೆದಿರುವ ‘ಯಶೋಧರ ಚರಿತೆ’ಯ ಪ್ರಸಂಗವನ್ನು ಆಧರಿಸಿ ಸಿದ್ಧವಾಗಿದೆ. ಚಿತ್ರದ ಚಿತ್ರಕತೆ, ಗೀತರಚನೆ, ಸಂಭಾಷಣೆ ಜೊತೆಗೆ ನಿರ್ದೇಶನವನ್ನೂ ಬರಗೂರು ರಾಮಚಂದ್ರಪ್ಪ ಮಾಡಿದ್ದಾರೆ. ಯಶೋಧರನಾಗಿ ನಟ ಕಿಶೋರ್ ನಟಿಸಿದ್ದಾರೆ. ಇಂಚರ ಪುಟ್ಟಣ್ಣ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಿಸಿದೆ. ಶಮಿತಾ ಮಲ್ನಾಡ್ ಸಂಗೀತ ಸಂಯೋಜಿಸಿದ್ದಾರೆ.
Advertisement. Scroll to continue reading.