ಬ್ರಹ್ಮಾವರ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಲ್ಪನೆಯಂತೆ 2025ರ ಹೊತ್ತಿಗೆ ಇಡೀ ದೇಶವನ್ನು ಕ್ಷಯ ಮುಕ್ತಗೊಳಿಸಲು ಸಂಕಲ್ಪಿಸಲಾಗಿದೆ ಆ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯ ಕ್ಷಯ ರೋಗ ನಿರ್ಮೂಲನಾ ಅಧಿಕಾರಿಗಳ ಉತ್ಕಟ ಮಾರ್ಗದರ್ಶನದಲ್ಲಿ ಬ್ರಹ್ಮಾವರ ಕ್ಷಯ ಘಟಕದ ಮೇಲ್ವಿಚಾರಕ ಆಲಾಂದೂರು ಮಂಜುನಾಥ್ ಅವರ ಸಂಯೋಜನೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸೈಬ್ರಕಟ್ಟೆ, ಗ್ರಾಮ ಪಂಚಾಯಿತಿ ಯಡ್ತಾಡಿ ಕ್ಷಯ ಘಟಕ ಬ್ರಹ್ಮಾವರ ಅವರ ಸಾರಥ್ಯದಲ್ಲಿ ಕ್ಷಯ ಮುಕ್ತ ಗ್ರಾಮ ಕ್ಕಾಗಿ ಸಮುದಾಯದ ಸಹಭಾಗಿತ್ವ ಎಂಬ ವಿಶಿಷ್ಟ ಕಾರ್ಯಕ್ರಮ ಇಂದು ನಡೆಯಿತು. ಯಡ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಮತಿ ಲತಾ ಅವರು ತುಳಸಿ ಗಿಡಕ್ಕೆ ನೀರುಣಿಸುವ ಮೂಲಕ ವಿಶಿಷ್ಟ ರೂಪದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪಂಚಾಯತನ ಉಪಾಧ್ಯಕ್ಷ ಅಲ್ತಾರು ಗೌತಮ್ ಹೆಗಡೆ ಮಾತನಾಡಿ, ಪಂಚಾಯತ್ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆ ಕೋವಿಡ್ ಸಂದಿಗ್ಧ ಕಾಲದಲ್ಲಿಯೂ ಕ್ಷಯ ಮುಕ್ತ ಮಾಡಲು ಹೊರಟಿರುವುದು ಶ್ಲಾಘನೀಯ ಕಾರ್ಯ ಎಂದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿನೋದ ಕಾಮತ್ ಕಾರ್ಯಕ್ರಮಕ್ಕೆ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಸೈಬ್ರಕಟ್ಟೆ ಆಸ್ಪತ್ರೆಯ ಶ್ರೀಕಾಂತ್ ಭಟ್, ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತರು, ಪಂಚಾಯತ್ ನ ಮಾಜಿ ಅಧ್ಯಕ್ಷರು, ಪಂಚಾಯತ್ನ ಸರ್ವ ಸದಸ್ಯರು, ಹಾಗೂ ಜಿಲ್ಲಾ ಕ್ಷಯ ನಿರ್ಮೂಲನ ಕೇಂದ್ರದ ಶುಭಾಷ್, ಸುರೇಶ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬ್ರಹ್ಮಾವರ ತಾಲೂಕು ಕ್ಷಯ ಘಟಕದ ಮೇಲ್ವಿಚಾರಕ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕಾರ್ಯಕ್ರಮದ ಬಳಿಕ ಆಶಾ ಹಾಗೂ ಕಿರಿಯ ಆರೋಗ್ಯ ಸಹಾಯಕಿಯರ 5 ತಂಡಗಳು ಪಂಚಾಯಿತಿ ವ್ಯಾಪ್ತಿಯ ಅಲ್ತಾರು ಮತ್ತು ಯಡ್ತಾಡಿ ಗ್ರಾಮದ ಮನೆ ಮನೆಗೆ ತೆರಳಿ ಸರ್ವೆ ಕಾರ್ಯ ಆರಂಭಿಸಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಈ ತಂಡವು 839 ಮನೆಗಳ ಹಾಗೂ 4452 ಜನರಿಗೆ ಕ್ಷಯ ರೋಗದ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಲಕ್ಷಣ ಇರುವ ವ್ಯಕ್ತಿಗಳ ಕಫ ಪರೀಕ್ಷೆಗೆ ಕಳಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.

