ಚಿಕ್ಕಂದಿನಿಂದಲೂ ಶ್ರೀಕೃಷ್ಣನನ್ನು ಆರಾಧಿಸುತ್ತಾ ಬೆಳೆದ ಯುವತಿಯೊಬ್ಬಳು ಶ್ರೀ ಕೃಷ್ಣನ ಮೂರ್ತಿಯನ್ನೇ ವಿವಾಹವಾಗಿರುವ ಅಪರೂಪದ ಘಟನೆ
ಮಧ್ಯಪ್ರದೇಶ : ಚಿಕ್ಕಂದಿನಿಂದಲೂ ಶ್ರೀಕೃಷ್ಣನನ್ನು ಆರಾಧಿಸುತ್ತಾ ಬೆಳೆದ ಯುವತಿಯೊಬ್ಬಳು ಶ್ರೀ ಕೃಷ್ಣನ ಮೂರ್ತಿಯನ್ನೇ ವಿವಾಹವಾಗಿರುವ ಅಪರೂಪದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ. ಈ ಮದುವೆಗೆ ಪ್ರಾರಂಭದಲ್ಲಿ ಪೋಷಕರು ಮತ್ತು ಸಂಬಂಧಿಕರು ಒಪ್ಪಿಕೊಳ್ಳಲಿಲ್ಲ. ಕೊನೆಗೆ ಎಲ್ಲರನ್ನೂ ಒಪ್ಪಿಸಿ ಬಂಧುಗಳ ಸಮ್ಮುಖದಲ್ಲಿ ವೈಭವದಿಂದ ಶ್ರೀಕೃಷ್ಣನ ಮೂರ್ತಿಯನ್ನು ಯುವತಿ ವಿವಾಹವಾಗಿದ್ದಾಳೆ.
ಹಠಕ್ಕೆ ಮಣಿದ ಪೋಷಕರು :
ಗ್ವಾಲಿಯರ್ ನಗರದ ನ್ಯೂ ಬ್ರಜ್ ವಿಹಾರ್ ಕಾಲೋನಿಯ ಶಿವಾನಿ ಪರಿಹಾರ್ (23) ಕೃಷ್ಣನ ಮೂರ್ತಿಯನ್ನು ಮದುವೆಯಾದ ಯುವತಿ. ಈಗಾಗಲೇ ಯುವತಿ ಬಿಕಾಂ ಮುಗಿಸಿದ್ದಾರೆ. ಆಕೆಯ ತಂದೆ ರಾಮ್ ಪ್ರತಾಪ್ ಪರಿಹಾರ್ ಮತ್ತು ತಾಯಿ ಮೀರಾ ಪರಿಹಾರ್ ಅವರು ಮದುವೆಯನ್ನು ಪ್ರಾರಂಭದಲ್ಲಿ ವಿರೋಧಿಸಿದ್ದರು. ಆದರೆ, ಮಗಳು ಹಠ ಮಾಡಿದ್ದರಿಂದ ಅವರೂ ಕೊನೆಗೆ ಒಪ್ಪಬೇಕಾಯಿತು.
ಶಾಸ್ತ್ರೋಕ್ತವಾಗಿ ನಡೆಯಿತು ಮದುವೆ :
ಎಪ್ರಿಲ್ 18 ರಂದು ಶಿವಾನಿಯ ವಿವಾಹವು ಕೃಷ್ಣನೊಂದಿಗೆ ಸಾಂಪ್ರದಾಯಿಕ ರೀತಿಯಲ್ಲಿ ನೆರವೇರಿತು.
ಏಪ್ರಿಲ್ 15ರಂದು ಶಿವಾನಿ ಮದುವೆ ಸಂಭ್ರಮ ಆರಂಭವಾಗಿತ್ತು. ಮೊದಲ ದಿನ 16 ರಂದು ಮಂಟಪಕ್ಕೆ ಹಳದಿ ಹೂ ಹಾಕುವ ಕಾರ್ಯಕ್ರಮ, ಏಪ್ರಿಲ್ 17 ರಂದು ಮದುವೆ ಮೆರವಣಿಗೆ ಮತ್ತು ಏಪ್ರಿಲ್ 18 ರಂದು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಮದುವೆ ನಡೆಯಿತು.
ಈ ಅಪರೂಪದ ಮದುವೆ ನೋಡಲು ನೂರಾರು ಮಂದಿ ಆಗಮಿಸಿದ್ದರು.