ತಿರುವನಂತಪುರಂ: ಆರು ಬೆರಳುಗಳಿರುವ ಮಗುವನ್ನು ಶಸ್ತ್ರಚಿಕಿತ್ಸೆಗೆಂದು ಕರೆದೊಯ್ದು ನಾಲಿಗೆಗೆ ಸರ್ಜರಿ ಮಾಡಿ ವೈದ್ಯರು ಎಡವಟ್ಟು ಮಾಡಿರುವ ಪ್ರಕರಣವೊಂದು ಕೇರಳದ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ.
ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಆರೈಕೆ ಕೇಂದ್ರದಲ್ಲಿ ನಾಲ್ಕು ವರ್ಷದ ಬಾಲಕಿಯ ಕೈಯಲ್ಲಿರುವ ಆರನೇ ಬೆರಳನ್ನು ತೆಗೆಯುವ ಶಸ್ತ್ರ ಚಿಕಿತ್ಸೆ ನಡೆಯಬೇಕಿತ್ತು. ಈ ಬಾಲಕಿಯ ನಾಲಿಗೆಗೆ ಯಾವುದೇ ತೊಂದರೆ ಇರಲಿಲ್ಲ. ಆದರೆ ವೈದ್ಯರು ಆಕೆಯ ನಾಲಿಗೆಗೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಭಾರೀ ಎಡವಟ್ಟು ಮಾಡಿದ್ದಾರೆ.
ತನಿಖೆಗೆ ಆದೇಶ: ಶಸ್ತ್ರಚಿಕಿತ್ಸೆಯ ನಂತರ ಆಕೆಯ ಬಾಯಿಯಲ್ಲಿದ್ದ ಹತ್ತಿಯನ್ನು ನೋಡಿದಾಗ ವೈದ್ಯರ ಎಡವಟ್ಟು ಬಯಲಾಗಿದೆ. ಆಕೆಯ ಕೈ ಬೆರಳಿನ ಬದಲು ನಾಲಿಗೆಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂದು ಬಾಲಕಿಯ ಕುಟುಂಬದವರು ಆರೋಪಿಸಿದ್ದಾರೆ. ಘಟನೆ ಕುರಿತು ತಕ್ಷಣ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ವೈದ್ಯಕೀಯ ಶಿಕ್ಷಣ ನಿರ್ದೇಶಕರಿಗೆ ಆರೋಗ್ಯ ಸಚಿವೆ ವೀಣಾ ಸೂಚಿಸಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ: ಈ ಘಟನೆಯ ನಂತರ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಘೋರ ತಪ್ಪಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.