ಇದು ಕೈಯಲ್ಲೇ ಜಗತ್ತನ್ನು ನೋಡುವ ಕಾಲ. ಪ್ರತಿಯೊಂದು ವಿಷಯ, ವಿವರ ಮೊಬೈಲ್‌ನಲ್ಲಿ ಬೆರಳ ತುದಿಯಲ್ಲೇ ಸಿಗುತ್ತವೆ. ನಮ್ಮ ಬೇಸರ ವ್ಯಕ್ತಪಡಿಸಲು ಬೇಕಾಗುವ ಸ್ಟೇಟಸ್‌ನಿಂದ ಹಿಡಿದು, ಅಡುಗೆ ಮಾಡುವವರೆಗೆ ಗೂಗಲ್ ನೋಡಿಯೇ ಮಾಡುವವರಾಗಿದ್ದೇವೆ. ಇತ್ತೀಚೆಗೆ ನಮ್ಮ ಯಾವುದೇ ಅನಾರೋಗ್ಯವನ್ನು ಕೂಡ ಗೂಗಲ್ ಮಾಡಿ ನೋಡಿ ನಮಗೆ ನಾವೇ ಡಾಕ್ಟರ್ ಕೂಡ ಆಗಿದ್ದೇವೆ.
ಅದೆಷ್ಟೋ ಮಂದಿ ಅನಾರೋಗ್ಯಕ್ಕೆ ಗೂಗಲ್ ಸಲಹೆ ಪಡೆದು ಮುಂದುವರಿಯುತ್ತಿದ್ದಾರೆ. ಅವರಿಗಾಗಿಯೇ ಈ ವರದಿ.
ಮಹಿಳೆಯೊಬ್ಬಳು ತನ್ನ ಕ್ಯಾನ್ಸರ್ ರೋಗಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದಾಳೆ. ಸೋಶಿಯಲ್ ಮೀಡಿಯಾದ ಪ್ರಭಾವಿಯೊಬ್ಬರು ತಿಳಿಸಿರುವ ಔಷಧಿಯೊಂದನ್ನು ಕ್ಯಾನ್ಸರ್ ರೋಗ ಗುಣಪಡಿಸಲು ಪ್ರಯತ್ನಿಸಿದ್ದು, ಈ ಔಷಧಿ ಆಕೆಯ ಜೀವಕ್ಕೆ ಕಂಟಕವಾಗಿದೆ.
ವರದಿಗಳ ಪ್ರಕಾರ, ಯುನೈಟೆಡ್ ಕಿಂಗ್‌ಡಮ್‌ನ ಐರಿನಾ ಸ್ಟೊಯ್ನೋವಾ ಎಂಬ ಮಹಿಳೆ ದೀರ್ಘಕಾಲದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. 39 ವರ್ಷದ ಮಹಿಳೆಗೆ 2021 ರಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಇತ್ತೀಚಿಗಷ್ಟೇ ವೈರಲ್ ಆಗಿರುವ ವೀಡಿಯೊ ಒಂದರಲ್ಲಿ, ಕ್ಯಾರೆಟ್ ಜ್ಯೂಸ್ ಕ್ಯಾನ್ಸರ್ ಅನ್ನು ಗುಣಪಡಿಸುತ್ತದೆ ಎಂದು ಹೇಳಲಾಗಿರುವುದನ್ನು ಈ ಮಹಿಳೆ ಗಮನಿಸಿದ್ದರು. ವಿಡಿಯೋ ನೋಡಿದ ದಿನದಿಂದ ಪ್ರತೀ ದಿನ ಕ್ಯಾರೆಟ್ ಜ್ಯೂಸ್ ಕುಡಿಯಲು ಪ್ರಾರಂಭಿಸಿದ್ದರು.
ಪ್ರತಿದಿನ ಸುಮಾರು 13 ಕಪ್‌ಗಳಷ್ಟು ಕ್ಯಾರೆಟ್ ಜ್ಯೂಸ್ ಕುಡಿಯುತ್ತಿದ್ದರು. ಆದರೆ ದಿನಕಳೆದಂತೆ ಗುಣವಾಗುವ ಬದಲು ಆಕೆಯ ಆರೋಗ್ಯ ಹದಗೆಡುತ್ತಾ ಹೋಗಿದೆ. ವೈದ್ಯರ ಸಲಹೆ ಇಲ್ಲದೆ ಈ ನಿರ್ಧಾರ ತೆಗೆದುಕೊಂಡಿದ್ದರ ಪರಿಣಾಮ ಸಂಪೂರ್ಣ ಬಲಹೀನಳಾಗಿ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಅಷ್ಟೊತ್ತಿಗಾಗಲೇ ಆಕೆಯ ಹೊಟ್ಟೆಯ ಕೆಳಭಾಗ, ಕಾಲುಗಳು ಮತ್ತು ಶ್ವಾಸಕೋಶಗಳು ದ್ರವದಿಂದ ತುಂಬಿದ್ದವು ಮತ್ತು ಆಕೆಯ ದೇಹದಾದ್ಯಂತ ಗಡ್ಡೆಗಳಿದ್ದವು. ತನ್ನ ಅನುಭವದ ಬಗ್ಗೆ ಮಾತನಾಡುತ್ತಾ ಐರೆನಾ, “ನನ್ನ ಶ್ವಾಸಕೋಶದಲ್ಲಿ ದ್ರವವಿದ್ದ ಕಾರಣ ನಾನು ಉಸಿರಾಡಲು ಸಾಧ್ಯವಾಗಲಿಲ್ಲ. ಈಗ ಚೇತರಿಸಿಕೊಳ್ಳುತ್ತಿದ್ದೇನೆ” ಎಂದು ಹೇಳಿಕೊಂಡಿದ್ದಾರೆ.