ಈ ಆಧುನಿಕ ಕಾಲಘಟ್ಟದಲ್ಲಿ ಡಿವೋರ್ಸ್ ಎಂಬುವುದು ಸಾಮಾನ್ಯ ಸಂಗತಿಯಾಗಿಬಿಟ್ಟಿದೆ. ಸಣ್ಣಪುಟ್ಟ ಕಾರಣಗಳಿಗಾಗಿ ದಂಪತಿಗಳು ಕೋರ್ಟ್ ಮೆಟ್ಟಿಲೇರುವುದು, ವಿಚ್ಛೇದನ ನೀಡುವುದು ಆಗಾಗ ನಡೆಯುತ್ತಿರುತ್ತದೆ. ಇದೀಗ ಆಗ್ರಾದಲ್ಲಿನ ವಿಚಿತ್ರ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಹೌದು ಮಹಿಳೆಯೊಬ್ಬಳು ತನ್ನ ಪತಿ ಕುರ್ಕುರೆ ಚಿಪ್ಸ್ ತರಲಿಲ್ಲ ಎಂಬ ಕಾರಣಕ್ಕೆ ಆತನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ, ಇದಲ್ಲದೇ ಡಿವೋರ್ಸ್ ಕೊಡಲು ಮುಂದಾಗಿದ್ದಾಳೆ.
ರಾಷ್ಟ್ರೀಯ ಸುದ್ದಿವಾಹಿನಿಯ ವರದಿಯ ಪ್ರಕಾರ, ಮಹಿಳೆ ಕಳೆದ ಒಂದೂವರೆ ತಿಂಗಳಿನಿಂದ ತನ್ನ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದು, ಇತ್ತೀಚೆಗಷ್ಟೇ ಆಕೆ ತನ್ನ ಗಂಡನ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದಳು. ಮಹಿಳೆಯ ದೂರನ್ನು ಫ್ಯಾಮಿಲಿ ಕೌನ್ಸೆಲಿಂಗ್ ಸೆಲ್‌ಗೆ ವರ್ಗಾಯಿಸಲಾಗಿದ್ದು, ಪತಿ-ಪತ್ನಿಯನ್ನು ಕೌನ್ಸೆಲಿಂಗ್‌ಗಾಗಿ ಸೆಲ್‌ಗೆ ಕರೆಸಲಾಗಿತ್ತು. ಈ ವೇಳೆ ಇವರಿಬ್ಬರ ನಡುವಿನ ಜಗಳಕ್ಕೆ 5 ರೂ. ಕುರ್ಕುರೆ ಕಾರಣ ಎಂದು ತಿಳಿದುಬಂದಿದೆ.
ಪತಿ-ಪತ್ನಿ ಇಬ್ಬರಿಗೂ ಕೌನ್ಸಿಲಿಂಗ್ ಮಾಡಿದ ಡಾ.ಸತೀಶ್ ಖೀರವಾರ ಅವರು ಹೇಳುವಂತೆ, ಕಳೆದ ವರ್ಷ (2023 ರಲ್ಲಿ) ವಿವಾಹವಾಗಿದ್ದ ಈ ಜೋಡಿ ಕೇವಲ ಒಂದು ವರ್ಷದಲ್ಲೇ ವಿಚ್ಛೇಧನ ನೀಡಲು ಮುಂದಾಗಿದ್ದಾರೆ. ಪತಿ ತನಗೆ ಹೊಡೆಯುತ್ತಾನೆ ಎಂದು ಹೆಂಡತಿ ಹೇಳಿದರೆ,5 ರೂಪಾಯಿ ಬೆಲೆಯ ಕುರ್ಕುರೆಗೆ ಹೆಂಡತಿ ಜಗಳವಾಡಿದ್ದಾಳೆ. ಕುರ್ಕುರೆ ಸಿಗದಿದ್ದಾಗ ಆಕೆಯ ತಾಯಿಯ ಮನೆಗೆ ಹೋಗಿದ್ದಾಳೆ ಎಂದು ಪತಿ ಹೇಳಿದ್ದಾನೆ. ಪ್ರಕರಣವನ್ನು ಮುಂದೂಡಲಾಗಿದ್ದು, , ಮುಂದಿನ ದಿನಾಂಕದಂದು ಇಬ್ಬರ ನಡುವೆ ರಾಜಿಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.