ಅಹಮದಾಬಾದ್: ಗುರುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2024ನೇ ಆವೃತ್ತಿಯ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋತ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಐಪಿಎಲ್ ಇತಿಹಾಸದಲ್ಲಿಯೇ ಕೆಟ್ಟ ದಾಖಲೆ ಬರೆದ ತಂಡವಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ಲೇಆಫ್‌ನಲ್ಲಿ ಅತಿ ಹೆಚ್ಚು ಸೋಲುಗಳನ್ನು ಆರ್‌ಸಿಬಿ ಕಂಡಿದೆ. 16 ಪ್ಲೇಆಫ್ ಪಂದ್ಯಗಳನ್ನು ಆಡಿರುವ ಬೆಂಗಳೂರು ಮೂಲದ ಫ್ರಾಂಚೈಸಿ 10 ಸೋಲುಗಳನ್ನು ಕಂಡಿದೆ. ಇದು ಇತರ ತಂಡಗಳಿಗಿಂತ ಹೆಚ್ಚಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ 26 ಪ್ಲೇಆಫ್ ಪಂದ್ಯಗಳಲ್ಲಿ ಆಡಿ ಒಂಬತ್ತು ಪಂದ್ಯಗಳಲ್ಲಿ ಸೋತಿದ್ದು, ಎರಡನೇ ಸ್ಥಾನದಲ್ಲಿದೆ.
ಮತ್ತೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಕ್ರಮವಾಗಿ ಮೂರು, ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ.
ಟೂರ್ನಿಯಿಂದ ಹೊರಬಿದ್ದ ಆರ್‌ಸಿಬಿ
ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಸಾಧಾರಣ ಬ್ಯಾಟಿಂಗ್ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 172 ರನ್ ಗಳಿಸಿತು.
ನಾಯಕ ಫಾಫ್ ಡುಪ್ಲೆಸಿಸ್ 14 ಎಸೆತಗಳಲ್ಲಿ 17 ರನ್, ವಿರಾಟ್ ಕೊಹ್ಲಿ 34 ರನ್, ಕ್ಯಾಮೆರಾನ್ ಗ್ರೀನ್ 27 ರನ್, ರಜತ್ ಪಟಿದಾರ್ 34 ರನ್, ದಿನೇಶ್ ಕಾರ್ತಿಕ್ 11 ರನ್, ಮಹಿಪಾಲ್ ಲೊಮ್ರೋರ್ 32 ರನ್ ಗಳಿಸಿದರು. ಗ್ಲೆನ್ ಮ್ಯಾಕ್ಸ್‌ವೆಲ್ ಶೂನ್ಯಕ್ಕೆ ಔಟಾದರು.
ಈ ಸವಾಲಿನ ಮೊತ್ತವನ್ನು ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ 19 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಯಶಸ್ವಿ ಜೈಸ್ವಾಲ್ 30 ಎಸೆತಗಳಲ್ಲಿ 45 ರನ್ ಗಳಿಸಿದರೆ, ರಿಯಾನ್ ಪರಾಗ್ 36 ಮತ್ತು ಶಿಮ್ರಾನ್ ಹೆಟ್ಮೆಯರ್ 32 ರನ್ ಗಳಿಸುವ ಮೂಲಕ ರಾಜಸ್ಥಾನ ರಾಯಲ್ಸ್ ಗೆಲುವಿಗೆ ನೆರವಾದರು.
ರಾಜಸ್ಥಾನ್ ರಾಯಲ್ಸ್ ಮೇ 24 ರಂದು ಚೆನ್ನೈನಲ್ಲಿ ಕ್ವಾಲಿಫೈಯರ್ 2ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಮೇ 26 ರಂದು ಫೈನಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಯಾರು ಆಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.