ಟೋಕಿಯೋ: ಕಾಲ ಆಧುನಿಕವಾಗುತ್ತಿದ್ದಂತೆ ಯುವಜನತೆಯ ಯೋಚನೆಯಲ್ಲೂ ಬಹು ಬದಾಲಾವಣೆ ಉಂಟಾಗುತ್ತಿದೆ. ಜತೆಗೆ ಕೌಟುಂಬಿಕ ಜೀವನ ಪದ್ಧತಿಯೂ ಬದಲಾಗುತ್ತಿದೆ. ಹಿಂದೆಲ್ಲ ಕುಟುಂಬ, ಮದುವೆ ಜೀವನದ ಅವಿಭಾಜ್ಯ ಅಂಗವಾಗಿತ್ತು. ಬಳಿಕ ಮದುವೆಯ ಸಾಂಪ್ರದಾಯಿಕ ವ್ಯವಸ್ಥೆಯನ್ನು ಒಪ್ಪದವರು ಲಿವ್ ಇನ್ ರಿಲೇಶನ್‌ಶಿಪ್ ಕಡೆಗೆ ವಾಲಿದರು. ಇದೀಗ ಇದಕ್ಕೂ ಒಗ್ಗದವರು ಫ್ರೆಂಡ್‌ಶಿಪ್ ಮ್ಯಾರೇಜ್ ಎಂಬ ಹೊಸ ಸಂಬಂಧದ ಕಡೆಗೆ ಹೋಗುತ್ತಿದ್ದಾರೆ.
ಹೌದು, ಜಪಾನ್‌ನಲ್ಲಿ ಈ ಹೊಸ ಬಗೆಯ ಸಂಬಂಧವೊಂದು ಟ್ರೆಂಡ್ ಆಗುತ್ತಿದೆ. ಅದು ‘ಫ್ರೆಂಡ್‌ಶಿಪ್ ಮ್ಯಾರೇಜ್’ ಅಥವಾ ‘ಸ್ನೇಹ ವಿವಾಹ’. ಇದು ಜಪಾನ್‌ನ ಯುವ ಜನರ ನಡುವೆ ಬಹಳ ಜನಪ್ರಿಯಗೊಳ್ಳುತ್ತಿದೆ.
ಈ ವಿನೂತನ ಮಾದರಿಯ ವೈವಾಹಿಕ ಸಂಬಂಧದಲ್ಲಿ ಜನರು ನಿಷ್ಕಾಮ ಸಂಗಾತಿಗಳಾಗುತ್ತಾರೆ. ಅಂದರೆ ಅವರು ಪರಸ್ಪರ ಪ್ರೀತಿಯಲ್ಲಿ ಬೀಳುವುದಿಲ್ಲ. ಅಷ್ಟೇ ಅಲ್ಲ, ಅವರ ನಡುವೆ ಲೈಂಗಿಕ ಸಂಬಂಧವೂ ಇರುವುದಿಲ್ಲ. ಜಪಾನ್‌ನ ಜನಸಂಖ್ಯೆಯಲ್ಲಿ ಸುಮಾರು ಶೇ 1ರಂದು ಅಥವಾ ಸಾವಿರಾರು ಜನರು ಈ ರೀತಿಯ ಸಂಬಂಧವನ್ನು ಅಪ್ಪಿಕೊಳ್ಳುತ್ತಿದ್ದಾರೆ. ಇದು ಸಂಪೂರ್ಣವಾಗಿ ಮೌಲ್ಯಗಳು ಹಾಗೂ ಆಸಕ್ತಿಯನ್ನು ಹಂಚಿಕೊಳ್ಳುವ ಸಂಬಂಧ. ಇದರಲ್ಲಿ ಸಾಂಪ್ರದಾಯಿಕ ವೈವಾಹಿಕ ಪದ್ಧತಿಗಳಿಂದ ವಿಮುಖರಾಗಿರುವ ಲೈಂಗಿಕ ಸಂಬಂಧದ ಬಗ್ಗೆ ಆಸಕ್ತಿ ಇಲ್ಲದವರು, ಸಲಿಂಗಕಾಮಿಗಳು ಕೂಡ ಇದ್ದಾರೆ.
ಸ್ನೇಹ ವಿವಾಹಗಳನ್ನು ಆಯೋಜಿಸುವುದರಲ್ಲಿ ಪರಿಣತರಾಗಿರುವ ಕಲೊರಸ್ ಎಂಬ ಸಂಸ್ಥೆ, ಈ ಹೊಸ ಬೆಳವಣಿಗೆ ಕುರಿತಾದ ದತ್ತಾಂಶ ಹಂಚಿಕೊಂಡಿದೆ. ಇದರ ಪ್ರಕಾರ, 2015ರ ಮಾರ್ಚ್ ತಿಂಗಳಿನಿಂದ ಜಪಾನ್‌ನಲ್ಲಿ ಸುಮಾರು 500 ಮಂದಿ ಈ ರೀತಿ ಮದುವೆಯಾಗಿದ್ದಾರೆ. ಅವರು ಮನೆ ಮಾಡಿಕೊಂಡು ಜತೆಗೆ ವಾಸಿಸಿದ್ದಾರೆ. ಮಕ್ಕಳನ್ನು ಕೂಡ ಬೆಳೆಸಿದ್ದಾರೆ.
ಏನಿದು ಗೆಳೆತನ-ಮದುವೆ?
ಈ ಮದುವೆಯಲ್ಲಿ ಸಂಗಾತಿಗಳು ಕಾನೂನಾತ್ಮಕವಾಗಿ ಜತೆಗೂಡುತ್ತಾರೆ. ಆದರೆ ಅವರ ನಡುವೆ ರೊಮ್ಯಾಂಟಿಕ್ ಪ್ರೇಮ ಅಥವಾ ಲೈಂಗಿಕ ಸಂಬಂಧ ಇರುವುದಿಲ್ಲ. ಅವರು ಜತೆಯಾಗಿ ವಾಸಿಸಬಹುದು ಅಥವಾ ಪ್ರತ್ಯೇಕವಾಗಿಯೂ ಇರಬಹುದು. ಈ ದಂಪತಿ ಬೇಕಾದರೆ ಕೃತಕ ಗರ್ಭಧಾರಣೆ ಮೂಲಕ ಮಕ್ಕಳನ್ನು ಪಡೆಯಲು ನಿರ್ಧಾರ ತೆಗೆದುಕೊಳ್ಳಬಹುದು. ಈ ಸಂಬಂಧದಲ್ಲಿ ‘ಗಂಡ- ಹೆಂಡತಿ’ ಇಬ್ಬರೂ ತಮ್ಮ ನಡುವಿನ ಪರಸ್ಪರ ಒಪ್ಪಂದ ಜಾರಿಯಲ್ಲಿ ಇರುವವರೆಗೂ ತಮ್ಮ ಮದುವೆಯಾಚೆ ಅನ್ಯ ವ್ಯಕ್ತಿಗಳ ಜತೆ ದೈಹಿಕ ಸಂಪರ್ಕ ಹೊಂದಲು ಕೂಡ ಮುಕ್ತರಾಗಿರುತ್ತಾರೆ.
ಮಿತ್ರ ವಿವಾಹ ಎನ್ನುವುದು ಒಂದು ರೀತಿ ಸಮಾನ ಅಭಿರುಚಿಯುಳ್ಳ ರೂಮ್ ಮೇಟ್ ಹೊಂದುವಂತೆ. ನಾನು ಯಾರದ್ದೋ ಗರ್ಲ್‌ಫ್ರೆಂಡ್ ಆಗಲು ಸೂಕ್ತಳಲ್ಲದೆ ಇರಬಹುದು. ಆದರೆ ನಾನು ಒಳ್ಳೆಯ ಗೆಳೆತಿ ಆಗಬಲ್ಲೆ. ನನ್ನಂತೆಯೇ ಸಮಾನ ಆಸಕ್ತಿ ಅಭಿರುಚಿ ಉಳ್ಳ ವ್ಯಕ್ತಿ ಜತೆ ಕಾಲ ಕಳೆಯಲು, ಹರಟಲು, ಜತೆಯಾಗಿ ನಗಲು ಮಾತ್ರ ನಾನು ಬಯಸುತ್ತೇನೆ ಎಂದು ಮೂರು ವರ್ಷದಿಂದ ‘ಸ್ನೇಹ ವಿವಾಹ’ದಲ್ಲಿ ಇರುವ ಯುವತಿಯೊಬ್ಬಳು ತಿಳಿಸಿರುವುದಾಗಿ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಈ ಮದುವೆಯ ತಯಾರಿಯು ಸಾಂಪ್ರದಾಯಿಕ ಪ್ರೀತಿ ಪ್ರೇಮ ಅಥವಾ ಆಪ್ತ ಗೆಳೆಯ/ ಗೆಳತಿಯನ್ನು ಮದುವೆಯಾಗುವುದಲ್ಲ. ಬದಲಾಗಿ, ಈ ವ್ಯವಸ್ಥೆಯಲ್ಲಿ ಮದುವೆಗೂ ಮುನ್ನ ಜೋಡಿ ಭೇಟಿಯಾಗುತ್ತದೆ. ಕೆಲವು ಗಂಟೆ ಅಥವಾ ದಿನಗಳನ್ನು ಕಳೆಯುತ್ತದೆ. ತಮ್ಮ ಜೀವನದ ವಿವರಗಳನ್ನು ಹಂಚಿಕೊಂಡು ಅವುಗಳ ಆಧಾರದಲ್ಲಿ ಒಪ್ಪಂದ ಮಾಡಿಕೊಳ್ಳುತ್ತವೆ. ಇದರಲ್ಲಿ ಒಟ್ಟಿಗೆ ಊಟ ಮಾಡಬೇಕೇ, ಖರ್ಚು ವೆಚ್ಚಗಳನ್ನು ಹೇಗೆ ವಿಭಜಿಸಿಕೊಳ್ಳುವುದು, ಯಾರು ಬಟ್ಟೆ ಒಗೆಯುವುದು, ಯಾರು ಅಡುಗೆ ಮಾಡುವುದು, ಫ್ರಿಜ್‌ನಲ್ಲಿ ಇಬ್ಬರ ವಸ್ತುಗಳಿಗೂ ಹೇಗೆ ಜಾಗ ಕಲ್ಪಿಸುವುದು ಎಂಬಂತಹ ಸೂಕ್ಷ್ಮ ವಿಚಾರಗಳೂ ಇರುತ್ತವೆ.
ರೊಮ್ಯಾಂಟಿಕ್ ಸಂಸಾರ ಅಲ್ಲದಿದ್ದರೂ, ಅವರ ನಡುವಿನ ಚರ್ಚೆಗಳು ಸುದೀರ್ಘ ಕಾಲ ತಮ್ಮ ಸಂಬಂಧವನ್ನು ಆನಂದಿಂದ ಮುಂದುವರಿಸಲು ನೆರವಾಗುತ್ತದೆ. ಇವರಲ್ಲಿ ಶೇ 80ರಷ್ಟು ಜೋಡಿಗಳು ಸುದೀರ್ಘ ಸಮಯದಿಂದ ಜತೆಯಾಗಿ ಮುಂದುವರಿದಿವೆ. ಕೆಲವು ಪ್ರಕರಣಗಳಲ್ಲಿ ಈ ದಂಪತಿ ಜತೆಯಾಗಿ ಮಕ್ಕಳನ್ನು ಕೂಡ ಪಡೆದಿದ್ದಾರೆ ಎಂದು ಕಲೊರಸ್ ತಿಳಿಸಿದೆ.
ಸರಾಸರಿ 32.5 ವರ್ಷದ ಹಾಗೂ ರಾಷ್ಟ್ರೀಯ ಆದಾಯಕ್ಕಿಂತ ಮೀರಿದ ಸಂಪಾದನೆ ಹೊಂದಿರುವ ವ್ಯಕ್ತಿಗಳು ಈ ರೀತಿಯ ಸಂಬಂಧಕ್ಕೆ ಹಾತೊರೆಯುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಅಲ್ಲದೆ, ಸಾಂಪ್ರದಾಯಿಕ ವಿವಾಹ ವ್ಯವಸ್ಥೆಯಿಂದ ದೂರ ಇರಲು ಬಯಸುವ, ಲೈಂಗಿಕ ಸಂಬಂಧದಲ್ಲಿ ನಿರಾಸಕ್ತಿವುಳ್ಳವರು ಮತ್ತು ಸಲಿಂಗಕಾಮಿಗಳ ನಡುವೆ ಈ ಟ್ರೆಂಡ್ ಹೆಚ್ಚಾಗಿದೆ.