ಇಸ್ಲಾಮಾಬಾದ್: ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶವನ್ನು ಭಾರತಕ್ಕೆ ಹಿಂಪಡೆದೇ ಪಡೆಯುತ್ತೇವೆ ಎಂಬ ಕೇಂದ್ರದ ನಾಯಕರ ಹೇಳಿಕೆ ಬೆನ್ನಲ್ಲೇ ಪಾಕ್‌ನಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಭಾರತಕ್ಕೆ ಶುಭ ಸುದ್ದಿ ಸಿಕ್ಕಂತಾಗಿದೆ.
ಆಜಾದ್ ಕಾಶ್ಮೀರ ಅಥವಾ ಪಾಕ್ ಆಕ್ರಮಿತ ಕಾಶ್ಮೀರ ದೇಶದ ಅವಿಭಾಜ್ಯ ಅಂಗವಲ್ಲ ಎಂದು ಪಾಕಿಸ್ತಾನ ಒಪ್ಪಿಕೊಂಡಿದೆ. ಸರ್ಕಾರಿ ವಕೀಲರೊಬ್ಬರು ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಅಚ್ಚರಿಯ ಹೇಳಿಕೆ ನೀಡಿದ್ದು, ಇಡೀ ಪಾಕ್ ದೇಶವನ್ನೇ ತಲ್ಲಣಗೊಳಿಸಿದೆ. ಪಾಕ್ ಆಕ್ರಮಿತ ಕಾಶ್ಮೀರ ವಿದೇಶಿ ಪ್ರದೇಶವಾಗಿದೆ ಎಂದು ವಕೀಲರು ಪ್ರತಿಪಾದಿಸಿದ್ದಾರೆ.
ಅಪಹರಣಕ್ಕೊಳಗಾದ ಕವಿ ಹಾಗೂ ಪತ್ರಕರ್ತ ಅಹ್ಮದ್ ಫರ್ಹಾದ್ ಅವರನ್ನ ಜೂನ್ 2ರ ವರೆಗೆ ಕಾಶ್ಮೀರದಲ್ಲಿ ಬಂಧನದಲ್ಲಿ ಇರಿಸಲಾಗಿದೆ. ಆಜಾದ್ ಕಾಶ್ಮೀರವು ವಿದೇಶಿ ಪ್ರದೇಶ ಆಗಿರುವುದರಿಂದ ಅವರನ್ನ ಇಸ್ಲಾಮಾಬಾದ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದಿಲ್ಲ ಎಂದು ಫೆಡರಲ್ ಪ್ರಾಸಿಕ್ಯೂಟರ್ ಜನರಲ್ ಕೋರ್ಟ್‌ಗೆ ತಿಳಿಸಿದ್ದಾರೆ.
ವಕೀಲರ ವಾದಕ್ಕೆ ಇಸ್ಲಾಮಾಬಾದ್ ಹೈಕೋರ್ಟ್ ಅಚ್ಚರಿ ವ್ಯಕ್ತಪಡಿಸಿದೆ. ಆಜಾದ್ ಕಾಶ್ಮೀರವು ವಿದೇಶಿ ನೆಲವಾಗಿದ್ದರೆ, ಪಾಕಿಸ್ತಾನದ ಅವಿಭಾಜ್ಯ ಅಂಗವಲ್ಲ ಎನ್ನುವುದಾದರೆ ಪಾಕಿಸ್ತಾನದ ಮಿಲಿಟರಿ ಮತ್ತು ಪಾಕಿಸ್ತಾನಿ ರೇಂಜರ್‌ಗಳು ಪಾಕ್‌ನಿಂದ ಹೇಗೆ ಅಲ್ಲಿಗೆ ಪ್ರವೇಶಿಸಿದರು ಎಂದು ಪ್ರಶ್ನಿಸಿದೆ.
ಆಜಾದ್ ಕಾಶ್ಮೀರದ ಸ್ಥಾನಮಾನದ ಬಗ್ಗೆ ಕೋರ್ಟ್ನಲ್ಲಿ ವಾದ ಮಂಡಿಸಿದ ವಕೀಲರ ವಿರುದ್ಧ ಪಾಕ್ ಜನರು ಆಕ್ರೋಶ ಹೊರಹಾಕಿದ್ದಾರೆ. ಪ್ರಮುಖ ನಾಯಕರು ಸೋಷಿಯಲ್ ಮೀಡಿಯಾಗಳಲ್ಲಿ ವಕೀಲರ ವಾದವನ್ನು ಖಂಡಿಸಿದ್ದಾರೆ. ಈ ನಡುವೆ ಕೆಲವರು ಭಾರತದ ಪರ ಬೆಂಬಲ ಸೂಚಿಸಿರುವುದೂ ಕಂಡುಬಂದಿದೆ.
ಕಾಶ್ಮೀರದ ಕವಿ ಫರ್ಹಾದ್ ಕಳೆದ ಎರಡು ವಾರಗಳಿಂದ ನಾಪತ್ತೆಯಾಗಿದ್ದು, ಇತ್ತೀಚೆಗೆ ಆತನ ವಿರುದ್ಧ ಪಿಒಕೆಯಲ್ಲಿ ಎರಡು ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ ಎಂದು ತಿಳಿದುಬಂದಿತ್ತು. ಈ ನಡುವೆ ಫರ್ಹಾದ್ ಪರ ವಕೀಲ ಇಮಾನ್ ಮಜಾರಿ, ಪ್ರಸ್ತುತ ಅವರು ವಿದೇಶಿ ನೆಲದಲ್ಲಿ ಇದ್ದಾರೆ. ಆದ್ದರಿಂದ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದಿಲ್ಲ ಎಂದು ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಪ್ರತಿಪಾದಿಸಿದ್ದರು.