ನವದೆಹಲಿ: ಭಾರತ ಹಾಗೂ ಫಿಲಿಪೈನ್ಸ್ ನಡುವೆ ನಡೆದಿದ್ದ ಒಪ್ಪಂದದಂತೆ ಬ್ರಹ್ಮೋಸ್ ಸೂಪರ್‍ಸಾನಿಕ್ ಕ್ರೂಸ್ ಕ್ಷಿಪಣಿಗಳು ಫಿಲಿಪೈನ್ಸ್‌ಗೆ ರಫ್ತಾಗಿದೆ.
ಜ.2022 ರಲ್ಲಿ, ಎರಡು ದೇಶಗಳು 3,130 ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಿದ್ದವು. ಒಪ್ಪಂದದ ಅಡಿಯಲ್ಲಿ, ಭಾರತ ಮತ್ತು ರಷ್ಯಾದ ಜಂಟಿ ಉದ್ಯಮವಾದ ಬ್ರಹ್ಮೋಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್, ಹೈಸ್ಪೀಡ್ ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆಯ ಮೂರು ರಫ್ತು ಆವೃತ್ತಿಗಳೊಂದಿಗೆ ಕ್ಷಿಪಣಿಗಳನ್ನು ಪೂರೈಸುತ್ತಿದೆ. ಅಲ್ಲದೇ ಈ ಒಪ್ಪಂದದಲ್ಲಿ ಫಿಲಿಪೈನ್ಸ್‌ಗೆ ಬ್ರಹ್ಮೋಸ್ ನಿರ್ವಹಣೆಗೆ ಬೇಕಾದ ಅಗತ್ಯ ತರಬೇತಿಯನ್ನು ಸಹ ನಿರ್ವಾಹಕರಿಗೆ ನೀಡಲಿದೆ.
ಇದೀಗ ಯುದ್ಧ ಸಾಮಗ್ರಿಗಳ ಮೊದಲ ಬ್ಯಾಚ್ ಅಂತಿಮವಾಗಿ ಫಿಲಿಪೈನ್ಸ್‌ಗೆ ತಲುಪಿದೆ. ಪ್ರತಿ ಘಟಕದಲ್ಲೂ ಎರಡು ಕ್ಷಿಪಣಿ ಉಡಾವಣಾ ವ್ಯವಸ್ಥೆ, ರೆಡಾರ್ ಘಟಕ, ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‍ನ್ನು ಒಳಗೊಂಡಿದೆ. ಈ ವ್ಯವಸ್ಥೆಯು ಜಲಾಂತರ್ಗಾಮಿ ನೌಕೆಗಳು, ಹಡಗುಗಳು, ವಿಮಾನಗಳು ಅಥವಾ ಭೂಮಿಯಿಂದ 10 ಸೆಕೆಂಡುಗಳ ಅವಧಿಯಲ್ಲಿ ಎರಡು ಕ್ಷಿಪಣಿಗಳನ್ನು ಉಡಾಯಿಸಬಲ್ಲದು.
ಭಾರತೀಯ ವಾಯುಪಡೆಯ ಸಿ-17 ಗ್ಲೋಬ್ ಮಾಸ್ಟರ್ ಜೆಟ್ ಮೂಲಕ ಕ್ಷಿಪಣಿಗಳನ್ನು ಭಾರತದಿಂದ ಫಿಲಿಪೈನ್ಸ್‌ಗೆ ಸಾಗಿಸಿದ್ದು, ಇದು ಬ್ರಹ್ಮೋಸ್ ಕ್ಷಿಪಣಿಯನ್ನು ರಫ್ತು ಮಾಡಿದ ಮೊದಲ ನಿದರ್ಶನವಾಗಿದೆ. ಅಜೆರ್ಂಟೀನಾ ಸೇರಿದಂತೆ ಹಲವಾರು ರಾಷ್ಟ್ರಗಳು ಭಾರತದಿಂದ ಬ್ರಹ್ಮೋಸ್ ಕ್ಷಿಪಣಿಗಳನ್ನು ಕೊಂಡುಕೊಳ್ಳಲು ಆಸಕ್ತಿ ತೋರಿಸಿವೆ.
ಚೀನಾ ಸಮುದ್ರದಲ್ಲಿ ಹೆಚ್ಚುತ್ತಿರುವ ಮಿಲಿಟರಿ ಚಟುವಟಿಕೆಗಳ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳಾಗುತ್ತಿದೆ. ಈ ಹಿನ್ನೆಲೆಯ್ಲಲಿ ಫಿಲಿಪೈನ್ಸ್‌ನೊಂದಿಗೆ ರಕ್ಷಣಾ ಸಹಕಾರವನ್ನು ಬಲಪಡಿಸುವ ಗುರಿಯನ್ನು ಭಾರತ ಹೊಂದಿದೆ.
ಬ್ರಹ್ಮೋಸ್ ಕ್ಷಿಪಣಿಯು 2.8 ಮ್ಯಾಕ್ ವೇಗದಲ್ಲಿ ಚಲಿಸುತ್ತದೆ, ಇದು ಶಬ್ದದ ವೇಗಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ.