ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ನಡೆದ ಅಣಕು ಮತದಾನದ ವೇಳೆ ಬಿಜೆಪಿಗೆ ಚಲಾವಣೆಯಾಗದ ಮತಗಳು ಲಭಿಸಿದ ಕುರಿತು ದೂರಿನ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿದೆ. ಅಣಕು ಮತದಾನಕ್ಕೆ ಸಂಬಂಧಿಸಿದಂತೆ ಆರೋಪಗಳ ಕುರಿತು ಪರಿಶೀಲನೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು.
ಸುಪ್ರೀಂಕೋರ್ಟ್ ಗೆ ವಿವರಣೆ ಸಲ್ಲಿಸಿರುವ ಕೇರಳ ಮುಖ್ಯ ಚುನಾವಣಾಧಿಕಾರಿ, ಅಣಕು ಮತದಾನಕ್ಕಾಗಿ ಬಳಸಿದ್ದ ಮತಯಂತ್ರಗಳಲ್ಲಿ ಯಾವುದೇ ದೋಷವಿಲ್ಲ ಎಂದು ಹೇಳಿದ್ದಾರೆ.
ಏನಿದು ದೂರು?
ಕಾಸರಗೋಡು ಜಿಲ್ಲಾಧಿಕಾರಿ ಇಂಬಸೇಕರ್. ಕೆ. ಅವರು ಸಲ್ಲಿಸಿದ ವರದಿಯ ಆಧಾರದಲ್ಲಿ ಮುಖ್ಯ ಚುನಾವಣಾಧಿಕಾರಿ ಸಂಜಯ್ ಕೌಲ್ ಈ ವರದಿ ನೀಡಿದ್ದಾರೆ.
ಗುರುವಾರ ನಡೆದ ಅಣಕು ಮತದಾನದಲ್ಲಿ ಕನಿಷ್ಠ ನಾಲ್ಕು ಮತ ಯಂತ್ರಗಳಲ್ಲಿ ಚಲಾವಣೆಯಾಗದ ಮತಗಳು ಬಿಜೆಪಿ ಪರವಾಗಿ ದಾಖಲಾಗಿದೆ ಎಂಬ ಬಗ್ಗೆ ದೂರು ನೀಡಲಾಗಿತ್ತು. ವಿವಿಪ್ಯಾಟ್ ಸ್ಲಿಪ್‌ಗಳ ಸಂಪೂರ್ಣ ಎಣಿಕೆ ಕೋರಿ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿ ಸಲ್ಲಿಸಲಾಗಿದ್ದ ಮನವಿಯನ್ನು ಪರಿಗಣಿಸುವ ಸಂದರ್ಭದಲ್ಲಿ ಈ ವಿಷಯವನ್ನು ಅರ್ಜಿದಾರರಾದ ಪ್ರಶಾಂತ್ ಭೂಷಣ್ ಸುಪ್ರೀಂಕೋರ್ಟ್ ಗಮನಕ್ಕೆ ತಂದರು.
ಇದರೊಂದಿಗೆ ಸುಪ್ರೀಂಕೋರ್ಟ್ ಈ ಕುರಿತು ಪರಿಶೀಲಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿರುವುದು. ಅಣಕು ಮತದಾನದ ಬಳಿಕ ಎಲ್‌ಡಿಎಫ್ ಮತ್ತು ಯುಡಿಎಫ್ ಅಭ್ಯರ್ಥಿಗಳ ಏಜೆಂಟರು ಈ ಬಗ್ಗೆ ದೂರು ದಾಖಲಿಸಿದ್ದಾರೆ.
ಸ್ಪಷ್ಟನೆ ನೀಡಿದ ಸಂಜಯ್ ಕೌಲ್ :
ಕೇರಳ ರಾಜ್ಯದ ಚುನಾವಣಾ ಆಯೋಗದ ಮುಖ್ಯಸ್ಥರಾದ ಸಂಜಯ್ ಕೌಲ್ ಅವರು ಸ್ಪಷ್ಟನೆ ನೀಡಿದ್ದು, ಅಣಕು ಮತದಾನದ ಸಂದರ್ಭದಲ್ಲಿ ಬಳಸಲಾದ ನಾಲ್ಕು ಮತಯಂತ್ರಗಳಲ್ಲಿ ಪ್ರತಿ ಬಾರಿ ಮತ ಚಲಾಯಿಸಿದಾಗ ಬಂದ ವಿವಿಸ್ಲಿಪ್ ಗಳ ಮೇಲೆ ‘ನಾಟ್ ಟು ಬಿ ಕೌಂಟೆಡ್’ ಎಂದು ನಮೂದಾಗಿತ್ತು. ಜೊತೆಗೆ, ಆ ಸ್ಲಿಪ್ ಗಳ ಮೇಲೆ ‘ಸ್ಟಾಂಡರ್ಡೈಸೇಷನ್ ಡನ್’ ಎಂಬ ಮತ್ತೊಂದು ಸಂದೇಶವೂ ಇತ್ತು ಎಂದು ತಿಳಿಸಿದ್ದಾರೆ.
ಅಲ್ಲದೆ, ಈ ವಿವಿಪ್ಯಾಟ್ ಸ್ಲಿಪ್ ಗಳು ಸಾಮಾನ್ಯವಾಗಿ ಮತ ಚಲಾಯಿಸಿದಾಗ ಬರುವ ಸ್ಲಿಪ್ ಗಳಿಗಿಂತ ಉದ್ದವಾಗಿದ್ದವು. ಅಲ್ಲಿಗೆ, ಇದು ಅಣಕು ಮತಯಂತ್ರಗಳನ್ನು ಪರೀಕ್ಷೆಗೊಳಪಡಿಸುವಾಗ ಬರಬೇಕಿದ್ದ ವಿವಿಪ್ಯಾಟ್ ಸ್ಟಾಂಡರ್ಡೈಸ್ ಸ್ಲಿಪ್ ಗಳಾಗಿದ್ದು, ಆಗ ವಿವಿಪ್ಯಾಟ್ ಯಂತ್ರಗಳಿಂದ ಬರದೆ ಅಣಕು ಮತ ಚಲಾಯಿಸುವಾಗ ಬಂದಿವೆ.
ಹಾಗಾಗಿ, ಅಣಕು ಮತದಾನದ ವೇಳೆ ಬಳಸಲಾಗಿರುವ ಮತಯಂತ್ರಗಳಲ್ಲಿ ಯಾವುದೇ ದೋಷವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.