ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ೧.೨೨ ಲಕ್ಷ ಜನ ಪರಿಶಿಷ್ಟ ಜಾತಿಯವರು ಬರುತ್ತಾರೆ. ಅವರಲ್ಲಿ ೪ ರಿಂದ ೫ ಲಕ್ಷ ಮನೆಯ ಅವಶ್ಯಕತೆ ಇರುವವರು ಇದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖಾ ಸಚಿವ ಕೋಟ ಶ್ರೀನಿವಾಸ್ ಪೂಜಾರಿಯವರು ಹೇಳಿದರು.
ಮಂಗಳವಾರ ನಗರದ ಬಿಜೆಪಿ ಕಚೇರಿಗೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ೫ ಲಕ್ಷ ರೂಪಾಯಿಯಲ್ಲಿ ಮನೆ ಕಟ್ಟಲು ಸಾಧ್ಯವಿಲ್ಲ. ಆದರೆ ಇರುವುದರಲ್ಲಿ ಉತ್ತಮವಾಗಿ ಮನೆ ಕಟ್ಟಲು ಸಾಧ್ಯ. ಮನೆಗೆ ಅಗತ್ಯವಿರುವ ವಿದ್ಯುತ್, ನೀರು, ಶೌಚಾಲಯದ ಜೊತೆಗೆ ಕುಳಿತಿರುವ ಭೂಮಿಯ ಹಕ್ಕುಪತ್ರ ನೀಡಲು ಯೋಜನೆಗೆ ರೂಪಿಸಲಾಗಿದೆ. ಮುಂದುವರಿದ ಭಾಗವಾಗಿ ಸೋಮವಾರ ಸಭೆ ನಡೆಸುತ್ತಿದ್ದೇವೆ ಎಂದರು.
ಪೌರ ಕಾರ್ಮಿಕ ದುಡಿಯುತ್ತಿರುವ ಅನೇಕ ಕಾರ್ಮಿಕರಿಗೆ ಮನೆ ಇಲ್ಲ. ಹಾಗಾಗಿ ಪ್ರತಿ ಪುರಸಭೆ, ಪಟ್ಟಣ ಪಂಚಾಯತ್, ನಗರಸಭೆಯಲ್ಲಿ ದುಡಿಯುತ್ತಿರುವ ಪೌರಕಾರ್ಮಿಕ ಮಾಹಿತಿ ಕೇಳಿದ್ದೇವೆ. ಅದನ್ನು ಅಧ್ಯಯನ ನಡೆಸಿ ಅವರಿಗೂ ಸೌಲಭ್ಯ ದೊರಕುವಂತೆ ಮಾಡುತ್ತೇವೆ ಎಂದರು.
ಹೊಸ ತಾಲೂಕು ರಚನೆಯಾದಲ್ಲಿ ೨೫ ಇಲಾಖೆಗಳು ಅದರ ಅಡಿಯಲ್ಲಿ ಬರಬೇಕು. ಕೆಲವು ಕಡೆ ಸಾಫ್ಟ್‌ವೇರ್ ನಲ್ಲಿ ಹೊಸ ತಾಲೂಕು ವಿಂಗಡನೆ ಆಗಿಲ್ಲ. ವಿಳಂಬವಾಗಬಾರದು. ಆದರೆ ಅದನ್ನು ಸರಿಪಡಿಸಿಕೊಂಡು ಹೊಸ ಬದಲಾವಣೆಯೊಂದಿಗೆ ಶೀಘ್ರದಲ್ಲಿ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಬಿಜೆಪಿ ಪ್ರಭಾರಿ ರಾಜೇಶ್ ಕಾವೇರಿ, ಉಡುಪಿ ಜಿಲ್ಲಾ ಪ್ರ.ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಕ್ಷೇತ್ರಾಧ್ಯಕ್ಷ ಶಂಕರ್ ಅಂಕದಕಟ್ಟೆ, ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್, ಜಿಲ್ಲಾ ಉಪಾಧ್ಯಕ್ಷ ಕಿಶೋರ್ ಕುಮಾರ್, ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಐರೋಡಿ ವಿಠ್ಠಲ ಪೂಜಾರಿ, ಮಹಿಳಾಮೋರ್ಚಾ ಅಧ್ಯಕ್ಷೆ ರೂಪಾ ಪೈ ಉಪಸ್ಥಿತರಿದ್ದರು.
ಕಾರ್ಯಕರ್ತರಿಂದ ಸ್ವಾಗತ:
ಮೂರನೇ ಬಾರಿಗೆ ಸಚಿವರಾಗಿ ಕಚೇರಿಗೆ ಆಗಮಿಸಿದ ಸಮಾಜ ಕಲ್ಯಾಣ ಇಲಾಖೆಯ ಸಚಿವರಿಗೆ ಕಾರ್ಯಕರ್ತರು, ಮುಖಂಡರು ಹೂಗುಚ್ಚ ಬರಮಾಡಿಕೊಂಡರು.