ವರದಿ : ಬಿ.ಎಸ್. ಆಚಾರ್ಯ
ಬ್ರಹ್ಮಾವರ : ತಾಲೂಕು ಆಡಳಿತದ ವತಿಯಿಂದ 75 ನೇ ಸ್ವಾತಂತ್ರೋತ್ಸವ ದಿನಾಚರಣೆ ಬ್ರಹ್ಮಾವರ ಗಾಂಧೀ ಮೈದಾನದಲ್ಲಿ ಜರುಗಿತು. ಈ ಸಂದರ್ಭ ತಾಲೂಕು ತಹಶೀಲ್ದಾರ ರಾಜಶೇಖರ ಮೂರ್ತಿ ಸಂದೇಶ ನೀಡಿ ಮಾತನಾಡಿ, ದೇಶದಲ್ಲಿ ಈಗ ಕೊರೊನಾ ಸಂಕಷ್ಟದ ನಡುವೆ ಬಡವರು ಮತ್ತು ಶ್ರೀಮಂತರು ಸೇರಿದಂತೆ ಎಲ್ಲರೂ ತೀರಾ ಸಂಕಷ್ಟದಲ್ಲಿದ್ದೇವೆ. ಉಡುಪಿ ಜಿಲ್ಲೆ ಸೇರಿದಂತೆ ಕೋರೊನ ಸಂಕಷ್ಟದ ನಡುವೆ ನಾವು ಬಹಳ ಜಾಗ್ರತೆಯಾಗಿ ಮತ್ತು ಎಚ್ಚರದಿಂದ ಇರಬೇಕು ಎಂದರು.
ಬ್ರಹ್ಮಾವರ ತಾಲೂಕು ಸೇರಿದಂತೆ ಕರಾವಳಿ ಜಿಲ್ಲೆಯಲ್ಲಿ ಕಂದಾಯ ಇಲಾಖೆಗೆ ದಾರಿ ಸಮಸ್ಯೆಗಳು ಹೆಚ್ಚಿದೆ. ಹಿಂದೆ ಮದ್ರಾಸ್ ಸರಕಾರದ ಆಡಳಿತದಲ್ಲಿ ರಸ್ತೆಗೆ ಮಹತ್ವ ನೀಡದ ಕಾರಣ ಇದು ಸಮಸ್ಯೆ ತಂದಿದೆ. ಕಾನೂನಿನಿಂದ ಆಸಾಧ್ಯವಾದುದನ್ನು ಪ್ರೀತಿ ಮತ್ತು ಮೈತ್ರಿಯಿಂದ ಪರಿಹಾರ ಮಾಡಬಹುದು. ಈ ಸ್ವಾತಂತ್ರ್ಯ ದಿನದಿಂದ ಸಂಕಲ್ಪ ಮಾಡಿ ಅಖಂಡ ಭಾರತ ರಚಿಸೋಣ ಎಂದರು.
ಪೋಲೀಸ್ ಇಲಾಖೆ ಮತ್ತು ಗ್ರಹರಕ್ಷಕ ದಳದ ವತಿಯಿಂದ ಪಥ ಸಂಚಲನ ನಡೆಯಿತು.
ಇದೇ ಸಂದರ್ಭದಲ್ಲಿ ಕೋವಿಡ್ ವಾರಿಯರ್ಸ್ ಮತ್ತು ಸ್ವಚ್ಛತಾ ಕರ್ಮಿಗಳನ್ನು, ಪ್ರತಿಭಾವಂತರನ್ನು ತಾಲೂಕು ಆಡಳಿತದ ವತಿಯಿಂದ ಗೌರವಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಓ.ಆರ್.ಪ್ರಕಾಶ್, ಬ್ರಹ್ಮಾವರ ತಾಲೂಕು ಪಂಚಾಯತಿ ಕಾರ್ಯನಿರ್ವಣಾಧಿಕಾರಿ ಎಚ್ .ವಿ. ಇಬ್ರಾಹಿಂ ಪುರ, ಪೋಲೀಸ್ ವೃತ್ತ ನೀರೀಕ್ಷಕ ಅನಂತ ಪದ್ಮನಾಭ, ಠಾಣಾಧಿಕಾರಿ ಗುರುನಾಥ್ ಬಿ. ಹಾದಿಮನೆ, ಮಹಿಳಾ ಪೋಲೀಸ್ ಅಧಿಕಾರಿ ಸುನೀತಾ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಬಿ.ಭುಜಂಗ ಶೆಟ್ಟಿ, ಮೈರ್ಮಾಡಿ ಸುಧಾಕರ ಶೆಟ್ಟಿ, ಹಂದಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಉದಯ ಪೂಜಾರಿ, ಮಾಜಿ ತಾಲೂಕು ಪಂಚಾಯತಿ ಸದಸ್ಯ ಸುಧೀರ್ ಕುಮಾರ್ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.
ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಮವಸ್ತ್ರದಿಂದ ಉಪಸ್ಥಿತರಿದ್ದು ಗಮನ ಸೆಳೆದರು.