ಉಡುಪಿ: ಉಡುಪಿಯ ಅಜ್ಜರಕಾಡು ಮಹಾತ್ಮಗಾಂಧೀ ಕ್ರೀಡಾಂಗಣದಲ್ಲಿ ನಡೆದ,75 ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ, ರಾಜ್ಯದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಧ್ವಜಾರೋಹಣ ನೆರವೇರಿಸಿ, ಸ್ವಾಂತಂತ್ರ್ಯೋತ್ಸವದ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಪೊಲೀಸ್,ಕರಾವಳಿ ಕಾವಲು ಪಡೆ, ಅರಣ್ಯ ಇಲಾಖೆ, ಅಗ್ನಿಶಾಮಕ ಇಲಾಖೆ, ಅಬಕಾರಿ ಇಲಾಖೆ, ಗೃಹರಕ್ಷಕ ದಳದಿಂದ ಆಕರ್ಷಕ ಪಥ ಸಂಚಲನ ನಡೆಯಿತು.
ನಂತರ ಮಾತನಾಡಿದ ಸಚಿವ ಸುನೀಲ್ ಕುಮಾರ್, ರಾಜ್ಯದಲ್ಲಿ ಪರಿಸರ ಸ್ನೇಹಿ ಇಂಧನ ಉತ್ಪಾದನೆ ಮಾಡುವ ಕುರಿತಂತೆ ಯೋಜನೆ ರೂಪಿಸಲಾಗುತ್ತಿದ್ದು, ಇಂಧನ ಇಲಾಖೆಯನ್ನು ಗ್ರಾಹಕರು,ರೈತರು ಮತ್ತು ಉದ್ಯಮಿಗಳಿಗೆ ಜನಸ್ನೇಹಿಯಾಗಿ ಮಾಡಲಾಗುವುದು ,ರಾಜ್ಯದ ಪ್ರತೀ ಮನೆಗೂ ವಿದ್ಯುತ್ ನೀಡಲು ಕ್ರಿಯಾಯೋಜನೆ ರೂಪಿಸಲಾಗುತ್ತಿದೆ ಎಂದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ ಪ್ರತ್ಯೇಕ ನೀತಿ ರೂಪಿಸಲು ಹಿರಿಯ ಸಾಹಿತಿಗಳ ನೇತೃತ್ವದ ಸಮಿತಿ ರಚಿಸಿ ,ಶೀಘ್ರದಲ್ಲಿ ಹೊಸ ನೀತಿ ರೂಪಿಸಲಾಗುವುದು, ಯಕ್ಷಗಾನ ಕಲೆಗೆ ವಿಶೇಷ ಪ್ರೋತ್ಸಾಹ ನೀಡಲಾಗುವುದು ಹಾಗೂ ತುಳು ಭಾಷೆಯನ್ನು 8 ನೇ ಪರಿಚ್ಛೇಧಕ್ಕೆ ಸೇರಿಸಲು ಪ್ರಯತ್ನ ಮಾಡಲಾಗುವುದು. ಸ್ವಾತಂತ್ರ್ಯ ಚಳುವಳಿಯಲ್ಲಿ ಹಲವು ಮಂದಿಯ ಬಲಿದಾನ ನೀಡಿದ ಸುಳ್ಯದ ಉಬ್ಬರಡ್ಕ ಮಿತ್ತೂರು ಗ್ರಾಮವನ್ನು ಪಾರಂಪರಿಕ ಗ್ರಾಮವನ್ನಾಗಿ ಮಾಡಿ , ಹುತಾತ್ಮರ ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದರು.
ಉಡುಪಿಯಲ್ಲಿ 250 ಹಾಸಿಗೆ ಸಾಮಥ್ರ್ಯದ ಆಸ್ಪತ್ರೆ ಕಾಮಗಾರಿ ಶೀಘ್ರ ಮುಕ್ತಾಯ, ಉಡುಪಿಯ ಕೊಳಲಗಿರಿಯಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಶೀಘ್ರದಲ್ಲಿ ಮಂಜೂರಾತಿ ಆದೇಶ, ಉಡುಪಿ ಮತ್ತು ಕಾರ್ಕಳಕ್ಕೆ ವ್ಯವಸ್ಥಿತ ಯುಜಿಡಿ ಸಂಪರ್ಕ,ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ಜಲ ಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು ಸಂಪರ್ಕ ಒದಗಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕೋವಿಡ್ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ 22 ಮಂದಿ ಕೊರೋನಾ ವಾರಿಯರ್ಸ್ ಗಳನ್ನು ಹಾಗೂ ಸಾಣೂರು, ಸಿದ್ದಾಪುರ,ಫಲಿಮಾರು ಗ್ರಾಮ ಪಂಚಾಯತ್ ಟಾಸ್ಕ್ ಪೋರ್ಸ್ ಗಳ ಅಧ್ಯಕ್ಷರು ಮತ್ತು ಪಿಡಿಓ ಗಳನ್ನು ಸನ್ಮಾನಿಸಲಾಯಿತು. ಅಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಉತ್ತಮ ಸೇವೆ ನೀಡಿದ ಉಡುಪಿಯ ಜಿಲ್ಲಾಸ್ಪತ್ರೆ ಹಾಗೂ ಕೆ.ಎಂ.ಸಿ ಮಣಿಪಾಲ ಆಸ್ಪತ್ರೆಯ ಮುಖ್ಯಸ್ಥರನ್ನು ಸನ್ಮಾನಿಸಲಾಯಿತು. ಜಿಲ್ಲೆಯ 8 ಗ್ರಾಮ ಪಂಚಾಯತ್ ಗಳಿಗೆ ಘನತ್ಯಾಜ್ಯ ವಿಲೇವಾರಿ ವಾಹನಗಳನ್ನು ಹಸ್ತಾಂತರಿಸಲಾಯಿತು.
ಉಡುಪಿ ಶಾಸಕ ರಘುಪತಿ ಭಟ್,ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ,ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್,ಎಸ್ಪಿ ವಿಷ್ಣುವರ್ಧನ್, ಕರಾವಳಿ ಕಾವಲು ಪಡೆ ಎಸ್ಪಿ ನಿಖಿಲ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು.