ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ಮೆಸ್ಕಾಂ, ಎಸ್ಕಾಂ ಸೇರಿದಂತೆ ರಾಜ್ಯದ ಬೇರೆ ಬೇರೆ ವಿದ್ಯುತ್ ನಿಗಮಗಳಲ್ಲಿ ಇರುವ ಸಮಸ್ಯೆಗಳ ಅಧ್ಯಯನ ನಡೆಸಿ ಪರಿಹಾರೋಪಾಯದ ಕುರಿತು ಚಿಂತನೆ ನಡೆಸಲಾಗುವುದು. ಇಂಧನ ಇಲಾಖೆಯಲ್ಲಿನ ತಳ ಮಟ್ಟದ ಸಮಸ್ಯೆಗಳ ಅರಿವಾಗಬೇಕಾದರೆ ಲೈನ್ಮೆನ್ ಅವರಿಂದ ಅಭಿಪ್ರಾಯವನ್ನು ಪಡೆದುಕೊಳ್ಳಬೇಕು ಎನ್ನುವ ಉದ್ದೇಶದಿಂದ ಕಾರ್ಕಳದಲ್ಲಿ ಮೊದಲ ಬಾರಿಗೆ ಇಲಾಖೆಯಡಿಯಲ್ಲಿ ಕೆಲಸ ಮಾಡುವ ಲೈನ್ಮೆನ್‍ಗಳೊಂದಿಗೆ ಸೌಹಾರ್ಧವಾಗಿ ಬೆರೆತು ಅವರ ಅಭಿಪ್ರಾಯ ಹಾಗೂ ಅನುಭವಗಳನ್ನು ಮುಕ್ತವಾಗಿ ಆಲಿಸುವ ಪ್ರಯತ್ನ ಮಾಡಲಾಗಿದೆ ಎಂದು ರಾಜ್ಯ ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಹೇಳಿದರು.
ಕುಂದಾಪುರದ ಉಪ ವಿಭಾಗದ ಸರ್ಕಾರಿ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಕೊಲ್ಲೂರು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಮರ್ಪಕ ವಿದ್ಯುತ್ ಸರಬರಾಜು ವ್ಯವಸ್ಥೆಗೆ ಸಂಬಂಧಿಸಿದಂತೆ ಇರುವ ತೊಡಕುಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗುವುದು. ವಿದ್ಯುತ್ ಮಾರ್ಗಗಳ ತೊಡಕನ್ನು ನಿವಾರಣೆ ಮಾಡುವ ಕುರಿತಾಗಿ ಅರಣ್ಯ ಸಚಿವರೊಂದಿಗೂ ಮಾತುಕತೆ ನಡೆಸುವುದಾಗಿ ತಿಳಿಸಿದರು.
ರಾಜ್ಯದಲ್ಲಿನ ಬಿಜೆಪಿ ಆಡಳಿತ ಅವಧಿಯಲ್ಲಿ ಆರೋಗ್ಯ ಕ್ಷೇತ್ರಕ್ಕಾಗಿ ಗರಿಷ್ಠ ಸೌಲಭ್ಯಗಳನ್ನು ಒದಗಿಸಲಾಗಿದೆ. ಕೋವಿಡ್-19 ರ ಕಾರಣದಿಂದಾಗಿ ಪೂರ್ಣ ಪ್ರಮಾಣದ ಪ್ರಗತಿಗೆ ತೊಡಕಾಗಿದ್ದರೂ, ಉತ್ತಮ ಸೇವೆಯನ್ನು ನೀಡಲಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಅಂದಾಜು 50 ವೈದ್ಯಾಧಿಕಾರಿಗಳ ಹುದ್ದೆಗೆ ಮಂಜೂರಾತಿ ನೀಡಲಾಗಿತ್ತು ಎಂದರು.
ಉಡುಪಿ ಜಿಲ್ಲೆಯಲ್ಲಿ ಪಿಪಿಪಿ ಮಾದರಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡಲು ಕೊಳಲಗಿರಿಯಲ್ಲಿ ಜಾಗವನ್ನು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ಶುಕ್ರವಾರ ಕನ್ನಡ ಸಂಸ್ಕೃತಿ ಇಲಾಖೆಯ ಅಧಿಕಾರಿಗಳೊಂದಿಗೆ ನಡೆಸುವ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ದಸರಾ ಮಹೋತ್ಸವ ಹಾಗೂ ರಾಜ್ಯೋತ್ಸವಗಳ ಕುರಿತು ವಿಸ್ತ್ರತ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ ಅವರು, ಬೈಂದೂರು ತಾಲ್ಲೂಕಿನ ಮೊಗೇರಿಯಲ್ಲಿ ನವ್ಯ ಸಾಹಿತ್ಯದ ಹರಿಕಾರ ಸಾಹಿತಿ ಮೊಗೇರಿ ಗೋಪಾಲಕೃಷ್ಣ ಅಡಿಗರ ಸ್ಮಾರಕ ನಿರ್ಮಾಣದ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡು ಕಾರ್ಯೋನ್ಮುಖವಾಗುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಇನ್ನೂ ಮುಂದೆ ಎಸ್ಡಿಪಿಐ ಕಾರ್ಯಕರ್ತರ ಪುಂಡಾಟ ನಡೆಯುವುದಿಲ್ಲ
ರಾಜ್ಯದಲ್ಲಿ ಇನ್ನೂ ಮುಂದೆ ಎಸ್ಡಿಪಿಐ ಕಾರ್ಯಕರ್ತರ ಪುಂಡಾಟ ನಡೆಯುವುದಿಲ್ಲ. ಅವರ ವರ್ತನೆಗಳನ್ನು ಕಾನೂನು ವ್ಯಾಪ್ತಿಯಲ್ಲಿ ಹದ್ದುಬಸ್ತಿನಲ್ಲಿ ಇಡಲಾಗುವುದು. ರಾಜ್ಯದಲ್ಲಿ ಇನ್ನೂ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಇದೆ ಎನ್ನುವ ಭ್ರಮೆಯಿಂದ ಅವರು ಹೊರ ಬರಲಿ ಎಂದು ಸಚಿವ ಸುನೀಲ್ ಕುಮಾರ್ ಹೇಳಿದರು.