ಬೆಂಗಳೂರು : ಖ್ಯಾತ ಏರೋಸ್ಪೇಸ್ ವಿಜ್ಞಾನಿ, ಪದ್ಮ ವಿಭೂಷಣ ಪುರಸ್ಕೃತ ರೊದ್ದಂ ನರಸಿಂಹ (87) ಇಂದು ವಿಧಿವಶರಾಗಿದ್ದಾರೆ. ಅವರು ಬ್ರೈನ್ ಹ್ಯಾಮರೇಜ್ ಗೆ ಒಳಗಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.
ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್ ನ ಮಾಜಿ ನಿರ್ದೇಶಕರಾಗಿದ್ದರು. ಫರ್ಟಡೊ ತಿಳಿಸಿದ್ದಾರೆ.
1933ರ ಜುಲೈ 20ರಂದು ಜನಿಸಿದ ಅವರು ರೊದ್ದಂ ಏರೋಸ್ಪೇಸ್ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದರು. ಐಐಎಸ್ಸಿಯಲ್ಲಿ 1962-1999ರವರೆಗೆ ಏರೋಸ್ಪೇಸ್ ಎಂಜಿನಿಯರಿಂಗ್ ಬೋಧಿಸಿದ್ದರು. 1984ರಿಂದ 1993ರವರೆಗೆ ಎನ್ಎಎಲ್ನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಬೆಂಗಳೂರಿನ ಜವಹರಲಾಲ್ ನೆಹರೂ ಆಧುನಿಕ ವೈಜ್ಞಾನಿಕ ಸಂಶೋಧನಾ ಸಂಸ್ಥೆಯಲ್ಲಿ (ಜೆಎನ್ಸಿಎಎಸ್ಆರ್) ಎಂಜಿನಿಯರಿಂಗ್ ಮೆಕ್ಯಾನಿಕ್ ಘಟಕದ ಮುಖ್ಯಸ್ಥರಾಗಿದ್ದರು. ಇವರ ಮಹತ್ವದ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರವು ಅವರಿಗೆ 2013ರಲ್ಲಿ ಪದ್ಮವಿಭೂಷಣ ಪುರಸ್ಕಾರ ನೀಡಿತ್ತು. ಮಾಜಿ ರಾಷ್ಟ್ರಪತಿ ದಿ ಎಪಿಜೆ ಅಬ್ದುಲ್ ಕಲಾಂ ರ ಆಪ್ತರಾಗಿದ್ದರು. ಇಬ್ಬರೂ ಜತೆಗೂಡಿ ‘ಡೆವಲಪ್ಮೆಂಟ್ಸ್ ಇನ್ ಫ್ಲೂಯೆಡ್ ಮೆಕಾನಿಕ್ಸ್ ಆಂಡ್ ಸ್ಪೇಸ್ ಟೆಕ್ನಾಲಜಿ’ ಎಂಬ ಪುಸ್ತಕ ಬರೆದಿದ್ದರು.
ಭಾರತೀಯ ರಾಕೆಟ್ ವಿಜ್ಞಾನಿ ಪ್ರೊ. ಸತೀಶ್ ಧವನ್ ಅವರ ಮೊದಲ ವಿದ್ಯಾರ್ಥಿ ಹಾಗೂ ಭಾರತ ರತ್ನ ಡಾ. ಸಿಎನ್ಆರ್ ರಾವ್ ರವರ ಗೆಳೆಯರೂ ಆಗಿದ್ದರು.
ರೊದ್ದ ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ. ರೊದ್ದ ಅಗಲಿಕೆಗೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.