ವರದಿ : ದಿನೇಶ್ ರಾಯಪ್ಪನಮಠ
ಕೋಟ: ಮನಸ್ಸುಗಳನ್ನು ಉದ್ಧೀಪನಗೊಳಿಸುವ, ಮೌಢ್ಯವನ್ನು ಕಳೆಯುವ, ಉತ್ಸಾಹವನ್ನು ತುಂಬಿಸುವ, ಮನುಜರನ್ನು ಅರಳಿಸುವ ಕೆಲಸ ಭಕ್ತಿ ಸಂಗೀತಕ್ಕಿದೆ. ಕನ್ನಡ ಸಾಹಿತ್ಯದಲ್ಲಿ ದಾಸ ಪರಂಪರೆಯಲ್ಲಿ ಒಂದು ವಿಶೇಷ ಪ್ರಕಾರವಿದೆ. ಈ ಪರಂಪರೆಯಲ್ಲಿ ಭಕ್ತಿ ಸಂಗೀತವನ್ನು ಎತ್ತರಕ್ಕೇರಿಸಿದ ಅನೇಕ ಸಾಹಿತಿಗಳು ಹಲವಾರು ದೇವರುಗಳನ್ನು ಬಗೆ ಬಗೆಯಲ್ಲಿ ಕೊಂಡಾಡಿರುವಂತಹದ್ದನ್ನು ನಾವು ಮನಗಂಡವರು. ವಿಶೇಷವಾಗಿ ಕರ್ನಾಟಕ ಸಂಗೀತದ ಮೂಲಕ ಭಕ್ತಿ ಪರಂಪರೆ ವಿಶ್ವವ್ಯಾಪಿ ಪಸರಿಸಿದೆ. ಆ ಹಾಡುಗಳನ್ನೆಲ್ಲಾ ಹಿಂದೆ ನಾವು ಮನೆ ಮನೆಗಳಲ್ಲಿ ಪ್ರತೀ ದಿನ ಹಾಡುತ್ತಿರುವ ಕಾಲವಿತ್ತು. ಇಂದು ಬೇರೆ ಬೇರೆ ಕಾರಣಗಳಿಂದ ಅವು ನಶಿಸಿ ಹೋಗಿದೆ. ಬದುಕನ್ನು ಭಕ್ತಿ ಸಾಹಿತ್ಯದ ಮೂಲಕ ಕಲಿಸಿಕೊಡುವ ಈ ಪರಂಪರೆ ಮತ್ತೆ ಮುಂದುವರಿಯಲಿ ಎಂದು ಆಶಿಸೋಣ ಎಂದು ಉಪನ್ಯಾಸಕ ಸುಜಯೀಂದ್ರ ಹಂದೆ ಮಾತನಾಡಿದರು.
ತೆಕ್ಕಟ್ಟೆ ಮಹಾಲಿಂಗೇಶ್ವರ ದೇವಳದಲ್ಲಿ ಸೋಣೆ ಆರತಿ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಸಾಂಸ್ಕøತಿಕ ಕಾರ್ಯಕ್ರಮವಾಗಿ ಯಶಸ್ವಿ ಕಲಾವೃಂದ ಕೊಮೆ, ತೆಕ್ಕಟ್ಟೆ ಹಾಗೂ ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಭಕ್ತಿ ಸಂಗೀತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀದೇವಿ ಸೌಂಡ್ಸ್, ಬಾಳೆಬೆಟ್ಟು ಮಣೂರು ಹಾಗೂ ಯಕ್ಷದೀಪ ಕಲಾ ಟ್ರಸ್ಟ್ ಮಲ್ಯಾಡಿ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮವನ್ನು ದೇವಳದ ಪ್ರಧಾನ ಅರ್ಚಕ ಜನಾರ್ಧನ ಐತಾಳ್ ದೂಪವನ್ನು ಹೊತ್ತಿಸುವುದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಕೆ.ಪಿ. ಹೆಗಡೆ, ಗುರುಗಳಾದ ದೇವದಾಸ್ ರಾವ್ ಕೂಡ್ಲಿ ಹಾಗೂ ಲಂಬೋದರ ಹೆಗಡೆ ಉಪಸ್ಥಿತರಿದ್ದರು. ಉಪನ್ಯಾಸಕ ಕೊರ್ಗಿ ಶಂಕರನಾರಾಯಣ ಉಪಾಧ್ಯ ಕಾರ್ಯಕ್ರಮ ನಿರ್ವಹಿಸಿದರು. ಭರತ್‍ಚಂದನ್ ಸ್ವಾಗತಿಸಿ, ಯೋಗೀಶ್ ಭಟ್ ವಂದಿಸಿದರು. ಬಳಿಕ ಯಶಸ್ವಿ ಕಲಾವೃಂದದ ಕಲಾವಿದರಿಂದ ಭಕ್ತಿ ಸಂಗೀತ ಕಾರ್ಯಕ್ರಮವು ಮಲ್ಯಾಡಿ ಲೈವ್ ಡಾಟ್ ಕಾಮ್‍ನಲ್ಲಿ ಬಿತ್ತರಗೊಂಡಿತು.
