ಎಲ್.ಎಸ್. ಶಿವಮೂರ್ತಿ, ಬೆಂಗಳೂರು
ಭಾರತ ದೇಶದಲ್ಲಿ ಎಲ್ಲ ಹಬ್ಬಗಳಂತೆ ದಸರಾ ಬಹಳ ವಿಶಿಷ್ಟವಾದ ಹಬ್ಬ. ಇದನ್ನು ನವರಾತ್ರಿ ಹಬ್ಬ,ಗೊಂಬೆ ಹಬ್ಬ ದಸರಾಹಬ್ಬ ,ಬನ್ನಿ ಹಬ್ಬ,ಶರನ್ನವರಾತ್ರಿ ಹೀಗೆ ಮೊದಲಾದ ಹೆಸರುಗಳಿಂದ ಕರೆಯುವುದು ವಾಡಿಕೆ. ಭಾರತದಲ್ಲಿ ಈ ಹಬ್ಬ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರದೆ ಇಡೀ ಭಾರತದಲ್ಲಿ ಆಚರಿಸುವ ಹಬ್ಬವಾಗಿದೆ. ಹಾಗಾಗಿ ಇದು ಒಂದು “ರಾಷ್ಟ್ರೀಯ ಹಬ್ಬ” ಎಂದರೆ ಇಂದು ತಪ್ಪಾಗಲಾರದು. ಪಶ್ಚಿಮ ಬಂಗಾಳದಲ್ಲಿ ಈ ಹಬ್ಬವನ್ನು ‘ದುರ್ಗಾಪೂಜೆ’ ಎಂದು ಕರೆದರೆ, ಉತ್ತರಭಾರತದ ಹಿಂದಿ ಭಾಷೆ ಮಾತನಾಡುವ ರಾಜ್ಯಗಳಲ್ಲಿ “ರಾಮಲೀಲಾ ಉತ್ಸವ” ಎಂಬ ಹೆಸರಿನಿಂದ ಕರೆಯುವುದು ವಾಡಿಕೆಯಲ್ಲಿದೆ. ಈ ಹಬ್ಬದ ಮೂಲ ಆಶಯ ಶಕ್ತಿ ದೇವತೆಯ ಉಪಾಸನೆ ಹಾಗೂ ದುಷ್ಟಶಕ್ತಿಯ ದಮನ. ಇದು ಆಶ್ವಯುಜ ಮಾಸ ಶುದ್ಧ ಪಾಡ್ಯಮಿಯಿಂದ ಮೊದಲು ಗೊಂಡು ನವಮಿ ಅಥವಾ ದಶಮಿಯವರೆಗೆ ನಡೆಯುವ ಹಬ್ಬವಾಗಿದೆ. ಈ ವರ್ಷ ದಿನಾಂಕ:7ನೇ ಅಕ್ಟೋಬರ್ 2021 ಗುರುವಾರದಿಂದ 15ನೇ ಅಕ್ಟೋಬರ್ 2021ರ ಶುಕ್ರವಾರದವರೆಗೆ ಆಚರಣೆಗೆ ಬಂದಿದೆ. ಹಿಂದುಗಳಲ್ಲಿ ಇಷ್ಟು ದೀರ್ಘಕಾಲ ಆಚರಿಸುವ ಹಬ್ಬ ಬಹುಶಃ ಇನ್ನೊಂದಿಲ್ಲ.ಈ ಒಂಬತ್ತು ಅಥವಾ ಹತ್ತು ದಿನಗಳ ಕಾಲ ಶಕ್ತಿದೇವತೆಯ
ಪೂಜೆ, ಜಪತಪ, ಹೋಮ-ಹವನ ಹಾಗೂ ರಾಮಾಯಣದ ಪಾರಾಯಣಗಳು ಮನೆಮನೆಗಳಲ್ಲಿ ನಿರಂತರವಾಗಿ ಸಾಗುವುದು ಸರ್ವೇ ಸಾಮಾನ್ಯ. ‘ದಸರಾ’ ಪದದ ಮೂಲರೂಪ ‘ದಶಹರಾ’.ಇದು ಸಂಸ್ಕೃತ ಪದ.ದಶ ಎಂದರೆ ಹತ್ತು.ಹರಾ ಎಂದರೆ ಸೋತಿವೆ ಎನ್ನುವ ಅರ್ಥ.ದಸರಾದ ಮೊದಲ ಒಂಬತ್ತು ರಾತ್ರಿಗಳ ಹತ್ತು ದಿಕ್ಕುಗಳಲ್ಲಿ ದೈವಿಶಕ್ತಿ ಸಂಪನ್ನವಾಗಿ ಅವೆಲ್ಲವೂ ಆದಿಶಕ್ತಿಯ ನಿಯಂತ್ರಣದಲ್ಲಿರುತ್ತದೆ.ಹಾಗೂ ಹತ್ತು ದಿಕ್ಕುಗಳ ಮೇಲೆ ಸಾತ್ವಿಕತೆಯ ವಿಜಯವಾಗುತ್ತದೆ ಎಂದು ಅರ್ಥ. ಹಾಗೆಯೇ ‘ನವರಾತ್ರಿ’ ಒಂಬತ್ತು ರಾತ್ರಿಗಳ ಸಮೂಹ ಎಂದು ಅರ್ಥೈಸುತ್ತಾರೆ. ‘ಶರನ್ನವರಾತ್ರಿ’ ಎಂದರೆ ಜಗನ್ಮಾತೆಯಾದ ಆದಿಶಕ್ತಿಯನ್ನು ನವರಾತ್ರಿಯ ಒಂಬತ್ತೂ ದಿನವೂ ನವ ವಿಧದಲ್ಲಿ ಪೂಜಿಸುವ ದಿನಗಳೇ ಶರನ್ನವರಾತ್ರಿ ಎಂದು ಕರೆಯುವುದು ವಾಡಿಕೆ. ಪೌರಾಣಿಕವಾಗಿ ಈ ಹಬ್ಬದ ಹಿನ್ನೆಲೆಯನ್ನು ನೋಡಿದ್ದಾದರೆ ಈ ಹಬ್ಬದ ಆರಾಧ್ಯದೇವತೆ “ಜಗನ್ಮಾತೆಯಾದ ಆದಿಶಕ್ತಿ”. ಈ ಆದಿಶಕ್ತಿಯೇ ಮಹಿಷಾಸುರ ಮರ್ದಿನಿ. ಮಹಿಷ ಈತ ಒಬ್ಬ ರಾಕ್ಷಸ.ಈತನ ಉಪಟಳವನ್ನು ತಡೆಯಲಾರದ ಅನೇಕ ದೇವಾನು ದೇವತೆಗಳು ಈತನನ್ನು ಸಂಹಾರ ಮಾಡಲು ದೇವತೆಗಳೆಲ್ಲ ಒಂದಾಗಿ ಆದಿಶಕ್ತಿಯ ಮೊರೆ ಹೋಗುತ್ತಾರೆ. ಆದಿಶಕ್ತಿ ಬ್ರಹ್ಮ,ವಿಷ್ಣು ಹಾಗೂ ಮಹೇಶ್ವರನ ತೇಜಸ್ಸಿನಿಂದ ಜನಿಸಿದವಳು . ಈಕೆ ಭಯಂಕರ ಸ್ವರೂಪವನ್ನು ತಾಳಿ ಮಹಿಷ ಅಥವಾ ಈ ಮಹಿಷಾಸುರನ ಮೇಲೆ ಯುದ್ಧಕ್ಕೆ ಹೋಗುವ ಮೊದಲು ದೇವತೆಗಳಿಂದ ವಿವಿಧ ಆಯುಧಗಳನ್ನು ಪಡೆದು ಮಹಿಷಾಸುರನ ವಿರುದ್ಧ ಒಂಬತ್ತು ದಿನಗಳ ಕಾಲ ಹೋರಾಟವನ್ನು ಮಾಡಿ ಹತ್ತನೇ ದಿನದಂದು ಮಹಿಷಾಸುರನನ್ನು ಸಂಹಾರ ಮಾಡಿ ವಿಜಯವನ್ನು ಪಡೆಯುತ್ತಾಳೆ.ಹೀಗೆ ಮಹಿಷಾಸುರನನ್ನು ಕೊಂದ ಈ ದಿನದಂದು ದೇವಿಗೆ ವಿಜಯ ಲಭಿಸುತ್ತದೆ. ಈ ವಿಜಯ ಲಭಿಸಿದ ದಿನವೇ ಇಂದು ಆಚರಣೆಯಲ್ಲಿರುವ ‘ವಿಜಯ ದಶಮಿ’.ಇದೊಂದು ‘ದಂತಕತೆ’ ಇರಬಹುದು. ಇಲ್ಲಿ “ಅಸುರೀ ಶಕ್ತಿಯ ಮೇಲೆ ದೈವಿ ಶಕ್ತಿಯ ಅಥವಾ ತಾಮಸ ಶಕ್ತಿಯ ಮೇಲೆ ಸಾತ್ವಿಕ ಶಕ್ತಿಯ ಗೆಲುವು” ಎಂಬ ಅಂಶವನ್ನು ಈ ಕತೆಯಲ್ಲಿ ನಾವು ಗಮನಿಸಬಹುದಾಗಿದೆ.ಇದೊಂದು “ಪ್ರತಿಮೆ”ಯ ಚಿತ್ರ ಅಷ್ಟೇ. ಈ ಮಹಿಷಾಸುರನ ಸಂಹಾರದಿಂದ ಸಂತಸಗೊಂಡು ಅದರ ಆಚರಣೆಗೆ ಬಂದದ್ದೇ ಈ ನವರಾತ್ರಿ ಅಥವಾ ದಸರಾ ಹಬ್ಬ ಎಂಬುದು ಬಲ್ಲವರ ಮಾತಾಗಿದೆ. ನವರಾತ್ರಿಯ ಈ ಒಂಬತ್ತು ದಿನಗಳಲ್ಲಿ ಹೆಣ್ಣುಮಕ್ಕಳು,ಮುತ್ತೈದೆಯರು ಹಾಗೂ ಆದಿಶಕ್ತಿಯ ಭಕ್ತರು ಶ್ರದ್ಧಾ ಭಕ್ತಿಯಿಂದ ನವ ದುರ್ಗೆಯರನ್ನು ವಿವಿಧ ಹೆಸರುಗಳಿಂದ ಕರೆದು ಭಕ್ತಿಯಿಂದ ಪೂಜಿಸುತ್ತಾರೆ. ಆ ಹೆಸರುಗಳು ಹೀಗಿವೆ. ಶೈಲಪುತ್ರಿ ,ಬ್ರಹ್ಮಚಾರಿಣಿ ,ಚಂದ್ರಘಂಟ ದೇವಿ, ಕೂಷ್ಮಾಂಡ ದೇವಿ, ಸ್ಕಂದ ಮಾತೆ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ ಹಾಗೂ ಸಿದ್ಧಿಧಾತ್ರಿ. ಈ ಹಬ್ಬಕ್ಕೆ ಭಾರತದಲ್ಲಿ ಸುಮಾರು 2000 ವರ್ಷಗಳಷ್ಟು ಇತಿಹಾಸವಿದೆಯೆಂದು ‘ಅಲ್ಬೇರೂನಿ’ ಎಂಬ ವಿದೇಶಿ ಪ್ರವಾಸಿಗ ಅಭಿಪ್ರಾಯಪಡುತ್ತಾನೆ. ಈ ದಸರೆಯನ್ನು ಮೊದಲು ವೈಭವದಿಂದ ಆಚರಣೆಗೆ ತಂದವರು ದಕ್ಷಿಣ ಭಾರತದ ವಿಜಯನಗರದ ಅರಸರು. ಡೋಮಿಂಗೋ, ಪಾಯೆಸ್,ಫೆರ್ನಾಂವ್, ನ್ಯೂನಿಜ್, ನಿಕೊಲೊ-ದ-ಕೊಂಟಿ ಹಾಗೂ ಅಬ್ದುಲ್ ರಜಾಕ್ ಎಂಬ ಈ ವಿದೇಶಿ ಪ್ರವಾಸಿಗರು ಭಾರತದಲ್ಲಿ ಬೇರೆ ಬೇರೆ ದೊರೆಗಳ ಕಾಲದಲ್ಲಿಯ ದಸರೆಯ ಅದ್ದೂರಿತನವನ್ನು ಪರಿಪರಿಯಾಗಿ ವರ್ಣಿಸಿರುವ ದಾಖಲೆಗಳು ಸಾಕಷ್ಟಿದೆ.
ರತ್ನಾಕರವರ್ಣಿಯ ‘ಭರತೇಶ ವೈಭವ’ದಲ್ಲಿ ಚಿತ್ರಿತವಾಗಿರುವ ‘ನವರಾತ್ರಿ’ ವಿಜಯನಗರದಲ್ಲಿ ದಸರೆಯನ್ನು ಸ್ವತಃ ಕವಿ ರತ್ನಾಕರವರ್ಣಿ ಕಂಡಿದ್ದಿರಬಹುದೆಂಬುದು ಕೆಲವರ ಅಭಿಪ್ರಾಯ. ದಕ್ಷಿಣ ಭಾರತದಲ್ಲಿ ವಿಜಯನಗರ ಆಳ್ವಿಕೆ ಪತನಗೊಂಡ ನಂತರ ಇದನ್ನು ಆಚರಣೆಗೆ ತಂದವರು ಮರಾಠ ಸಾಮ್ರಾಜ್ಯದ ಪೇಶ್ವೆಗಳು.ಈ ಪೇಶ್ವೆಗಳು ವಿಜಯನಗರದ ಅರಸರಂತೆ ಅದ್ದೂರಿಯಾಗಿ ದಸರಾ ಆಚರಣೆಯನ್ನು ಮಾಡದೆ ಕೇವಲ ಸಣ್ಣ ಪ್ರಮಾಣದಲ್ಲಿ ಆನೆಯ ಮೆರವಣಿಗೆ ಮಾತ್ರ ಮಾಡುತ್ತಿದ್ದರು.ಆದರೆ ಈ ಉತ್ಸವ ಕನ್ನಡ ನಾಡಿನ ಮಟ್ಟಿಗೆ ನೋಡುವುದಾದರೆ ವಿಜಯನಗರದ ಸಾಮ್ರಾಜ್ಯದ ಶ್ರೀ ಕೃಷ್ಣ ದೇವರಾಯನ ಕಾಲದಲ್ಲಿ ದಸರಾ ಅತ್ಯುನ್ನತ ಉತ್ತುಂಗದ ಸ್ಥಿತಿಯಲ್ಲಿತ್ತೆಂದು ತಿಳಿದುಬರುತ್ತದೆ. ವಿಜಯನಗರ ಪತನಾನಂತರ ಶ್ರೀರಂಗಪಟ್ಟಣದಲ್ಲಿದ್ದ ರಾಜ ಪ್ರತಿನಿಧಿಗಳಿಂದ ಶ್ರೀರಂಗಪಟ್ಟಣದ ಸಿಂಹಾಸನವನ್ನು ಪಡೆದ ಮೈಸೂರು ಯದುವಂಶದ ದೊರೆಯಾದ ‘ರಾಜ ಒಡೆಯರ್’ ಅವರು ಮೈಸೂರನ್ನು ಬಿಟ್ಟು ಶ್ರೀರಂಗಪಟ್ಟಣವನ್ನೇ ತಮ್ಮ ರಾಜಧಾನಿಯನ್ನಾಗಿ ಮಾರ್ಪಡಿಸಿಕೊಂಡ ಅಂಶ ಇತಿಹಾಸದಿಂದ ತಿಳಿಯುತ್ತದೆ. ರಾಜ ಒಡೆಯರ್ ಅವರಿಗೆ ನವರಾತ್ರಿಯ ಸ್ಫೂರ್ತಿ ವಿಜಯನಗರದ ಅರಸರಿಂದ ಎಂಬುದು ಸ್ಪಷ್ಟ.ಈ ಅರಸರಿಂದ ಸ್ಫೂರ್ತಿ ಪಡೆದ ರಾಜ ಒಡೆಯರ್ ಅವರು ಶ್ರೀರಂಗಪಟ್ಟಣದ “ಗೌರಿಕಡುವೆ” ಎಂಬಲ್ಲಿ ಮೊಟ್ಟ ಮೊದಲ ಬಾರಿಗೆ ದಸರೆಯನ್ನು ಆಚರಣೆಗೆ ತರುತ್ತಾರೆ. ಹಾಗಾಗಿ ಮೈಸೂರು ಅರಸರಲ್ಲಿ ಮೊಟ್ಟ ಮೊದಲಿಗೆ ದಸರೆ ಆಚರಿಸಿದರೆಂಬ ಹೆಗ್ಗಳಿಕೆ ರಾಜ ಒಡೆಯರ್ ಅವರಿಗೆ ಸಲ್ಲುತ್ತದೆ. ನಂತರ ಇವರು ಈ ದಸರೆಯ ಆಚರಣೆಯು ಕ್ರಮಬದ್ಧವಾದ ರೀತಿಯಲ್ಲಿ ತಮ್ಮ ನಂತರದಲ್ಲಿ ಮುಂದೆ ಬರಬಹುದಾದ ಒಡೆಯರ್ ಗಳ ರಾಜ ವಂಶಗಳವರು ಈ ರೀತಿ, ಹೀಗೆಯೇ ನವರಾತ್ರಿಯ ದಸರೆಯನ್ನು ಆಚರಿಸಬೇಕೆಂಬ ಕಟ್ಟಪ್ಪಣೆಯನ್ನು ಮಾಡಿ ಕಾಯ್ದೆಯನ್ನು ಸಿದ್ಧಗೊಳಿಸುತ್ತಾರೆ. ಈ ಮಾಹಿತಿ “ಶ್ರೀಮನ್ಮಹಾಜರ ವಂಶಾವಳಿ”ಯಲ್ಲಿ(1926-ಪುಟ40) ಸುದೀರ್ಘವಾದ ವಿವರಣೆಯನ್ನು ಕಾಣಬಹುದಾಗಿದೆ. ಹೀಗೆ ಮೈಸೂರು ಅರಸರಿಂದ ಆರಂಭವಾದ ಮೈಸೂರು ದಸರಾ 1799 ರಲ್ಲಿ ಟಿಪ್ಪುವಿನ ಮರಣಾನಂತರ ಒಡೆಯರ್ ಅವರ ರಾಜಧಾನಿ ಶ್ರೀರಂಗಪಟ್ಟಣದಿಂದ ಪುನಃ ಮೈಸೂರಿಗೆ ವರ್ಗಾಯಿಸಲ್ಪಡುತ್ತದೆ. ಹೀಗೆ ವರ್ಗಾಸಿದ ವರ್ಷವೇ ಐದು ವರ್ಷದ ಕುವರ “ಮುಮ್ಮಡಿ ಕೃಷ್ಣರಾಜ ಒಡೆಯರ್” ಅವರ ಸಿಂಹಾಸನಾರೋಹಣ ವಾಗುತ್ತದೆ. ಅದೇ ವರ್ಷ ನವರಾತ್ರಿಯ ದಸರಾ ಮಹೋತ್ಸವ ಪ್ರಥಮ ಬಾರಿಗೆ ಮೈಸೂರಿನಲ್ಲಿ ಆಚರಿಸಲಾಗುತ್ತದೆ. ಅಂದಿನಿಂದ ದಸರಾ ಮಹೋತ್ಸವ ವಿಶ್ವವಿಖ್ಯಾತಿಯಾಗಿ ಪ್ರಸಿದ್ಧಿ ಪಡೆಯಲಾರಂಭಿಸುತ್ತದೆ. ಇಂದು ಪ್ರಜಾಪ್ರಭುತ್ವದ ಸರ್ಕಾರಗಳು ಬಂದ ಮೇಲೆ ಹಲವು ಮಾರ್ಪಾಡುಗಳೊಂದಿಗೆ ಇಂದಿಗೂ ಅದರ ಮಹತ್ವವನ್ನು ಉಳಿಸಿಕೊಂಡು ಬಂದಿರುವುದು ಕನ್ನಡಿಗರಾದ ನಮಗೆ ಹೆಮ್ಮೆಯ ಸಂಗತಿ. ಈಗಲೂ ಭಾರತದ ಹಲವೆಡೆ ದಸರಾ ಉತ್ಸವ ನಡೆಯುವುದಾದರೂ ಮೈಸೂರು ದಸರೆಯ ಖ್ಯಾತಿ ಎಲ್ಲೂ ಸಿಗಲಾರದು. ಮೈಸೂರು ದಸರೆಯ ಪ್ರಮುಖ ಆಕರ್ಷಣೆ ಜಂಬೂಸವಾರಿ. ಇದು ಶ್ರೀ ಚಾಮರಾಜೇಂದ್ರ ಒಡೆಯರ್ ಜೀವಿಸಿರುವವರೆಗೆ ಮಾತ್ರ ಜಂಬೂಸವಾರಿ ಅದ್ದೂರಿಯಾಗಿ ನಡೆಯುತ್ತಿತ್ತು.ಸಿಂಗರಿಸಿದ ಪಟ್ಟದಾನೆಯ ಮೇಲೆ ರೂಪಿಸಲಾಗುವ ಸುಮಾರು 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ಕುಳಿತು ಮಹಾರಾಜರು ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳೊಂದಿಗೆ ಬನ್ನಿಮಂಟಪಕ್ಕೆ ಸಾಗುತ್ತಿದ್ದುದು ಈಗ ಇತಿಹಾಸ. ಸ್ವಾತಂತ್ರ್ಯಾನಂತರ ರಾಜರ ಆಳ್ವಿಕೆ ಕೊನೆಗೊಂಡ ಸ್ವಲ್ಪ ದಿನಗಳಲ್ಲಿಯೇ ಅಂಬಾರಿಯಲ್ಲಿ ಮಹಾರಾಜರಿಗೆ ಬದಲು ದುರ್ಗಾ ಪ್ರತಿರೂಪವಾದ ‘ಚಾಮುಂಡೇಶ್ವರಿ ವಿಗ್ರಹ’ದ ಮೆರವಣಿಗೆ ಮಾತ್ರ ಸರ್ಕಾರಗಳಿಂದ ಇಂದು ಸಾಧ್ಯವಾಗಿದೆ.
ದಸರಾ ಹಬ್ಬದ ಮತ್ತೊಂದು ವಿಶೇಷ ಅರಮನೆಯಲ್ಲಿ ಗೊಂಬೆ ಕೂರಿಸುವ ಪದ್ಧತಿ. ಇದು ನವರಾತ್ರಿಯ ಮತ್ತೊಂದು ಆಕರ್ಷಣೆಯ ಕೇಂದ್ರ ಬಿಂದು. ನವರಾತ್ರಿಯ ಒಂಬತ್ತು ದಿನಗಳ ಕಾಲ ಮರದಿಂದ ಮಾಡಿರುವ ಬಗೆಬಗೆಯ ಪಟ್ಟ ಗೊಂಬೆಗಳನ್ನು ಅಲಂಕರಿಸಿ ಅದರೊಂದಿಗೆ ಕಲಶವನ್ನು ಇಟ್ಟು ಪೂಜಿಸುವುದು ಅರಮನೆಯ ಸಂಪ್ರದಾಯವಾಗಿತ್ತು. ಗೊಂಬೆ ಕೂರಿಸುವ ಈ ಪದ್ಧತಿ ಇಂದು ನಿನ್ನೆಯದಲ್ಲ. ಇದು ಸುಮಾರು18 ನೇ ಶತಮಾನದಿಂದಲೇ ಜಾರಿಯಲ್ಲಿತ್ತು ಎಂಬುದು ಇತಿಹಾಸ ತಿಳಿಸುತ್ತದೆ. ಮೈಸೂರು ದಸರಾ ಎಂದು ಪ್ರಸಿದ್ಧಿ ಪಡೆದಿರುವ ಆಚರಣೆ ಹಾಗೂ ಗೊಂಬೆ ಕೂರಿಸುವ ಪದ್ದತಿ ಅರಮನೆಯಲ್ಲಿ ಮಾತ್ರವಲ್ಲದೆ ಮೈಸೂರು ರಾಜ್ಯದ ಪ್ರಜೆಗಳ ಎಲ್ಲರ ಮನೆ ಮನೆಯಲ್ಲೂ ಹಬ್ಬದ ಸಂಭ್ರಮವಾಗಿ ಮರದಿಂದ ಮಾಡಿದ ಪಟ್ಟದ ಗೊಂಬೆಗಳನ್ನು ಇಟ್ಟು ಪೂಜಿಸುವ ಪದ್ಧತಿ ಜನರ ಬದುಕಿನಲ್ಲಿ ಹಾಸುಹೊಕ್ಕಾಗಿ ಬೆಳೆದುಕೊಂಡು ಬಂದಿದೆ. ಇಂದು ಇದು ಕರ್ನಾಟಕ ಅಷ್ಟೇ ಅಲ್ಲದೆ ಪಕ್ಕದ ಆಂಧ್ರಪ್ರದೇಶ,ತಮಿಳುನಾಡು, ತೆಲಂಗಾಣ ಈ ರಾಜ್ಯಗಳಲ್ಲೂ ಕಾಣಬಹುದಾಗಿದೆ. ಪಟ್ಟದ ಗೊಂಬೆಗಳ ಜೊತೆಗೆ ಅಷ್ಟ ಲಕ್ಷ್ಮಿಯರು, ದಶಾವತಾರದ ಗೊಂಬೆಗಳು, ಸೀತಾ ಕಲ್ಯಾಣದ ಜೋಡಿಗಳು, ವೈಕುಂಠ ಪ್ರದರ್ಶನದ ಗೊಂಬೆಗಳು, ಶಿವ-ಪಾರ್ವತಿಯರ ಕೈಲಾಸ, ಮೈಸೂರು ಅರಮನೆ, ಚಾಮುಂಡಿ ಬೆಟ್ಟ, ಮೈಸೂರು ರಾಜರ ದರ್ಬಾರ್, ದೇವ-ದೇವತೆಗಳ ಪ್ರತಿಮೆಗಳು, ಪಿಂಗಾಣಿ ಆಟಿಕೆಗಳು ವಿವಿಧ ಪ್ರಾಣಿ ಪಕ್ಷಿಗಳ ಮರದ ಹಾಗೂ ಮಣ್ಣಿನ ಆಟಿಕೆಗಳು,ಅರಮನೆಯ ವಾದ್ಯಗೋಷ್ಠಿ ತಂಡ, ವ್ಯಾಪಾರ ವಹಿವಾಟು ಹಾಗೂ ಇದರೊಟ್ಟಿಗೆ ಇತ್ತೀಚೆಗೆ ಪಾಶ್ಚಿಮಾತ್ಯ ಆಕರ್ಷಣೆಯ ಕಲಾತ್ಮಕ ಗೊಂಬೆಗಳು ಸೇರಿಕೊಂಡಿವೆ.ದಸರಾ ಸಂದರ್ಭದಲ್ಲಿ ಮನೆ ಮನೆಗಳಲ್ಲಿ ಗೊಂಬೆಗಳ ಜೋಡಣೆಯ ಪೂರ್ವ ಸಿದ್ಧತೆ ದಸರಾ ಹಬ್ಬಕ್ಕೆ ಮೊದಲೇ ಪ್ರಾರಂಭವಾಗುವುದು ವಾಡಿಕೆ. ಇದನ್ನು ಕೂರಿಸುವುದು ಒಂದು ಕಲೆಗಾರಿಕೆ. ನಾಜೂಕಾಗಿ, ಕ್ರಮಬದ್ಧವಾಗಿ ಹಾಗೂ ಕಲಾತ್ಮಕವಾಗಿ ಜೋಡಿಸುವುದು ಒಂದು ನೈಪುಣ್ಯವೇ ಸರಿ. ಕೆಲವು ಮನೆಗಳಲ್ಲಿ “ಗೊಂಬೆ ಕೂರಿಸುವ ಥೀಮ್” ಗಳನ್ನು ಅಳವಡಿಸಿಕೊಂಡಿರುತ್ತಾರೆ. ಒಂದು ವರ್ಷದ ಥೀಮ್ ಇನ್ನೊಂದು ವರ್ಷಕ್ಕೆ ಬದಲಾವಣೆ ಮಾಡಿಕೊಂಡಿರುತ್ತಾರೆ. ಗೊಂಬೆ ಕೂರಿಸುವ ಮನೆಗಳವರು ಪ್ರತಿವರ್ಷ ತಮ್ಮ ಬಳಿ ಇರುವ ಹಳೆಯ ಗೊಂಬೆಗಳ ಜೊತೆಗೆ ಹೊಸ ಗೊಂಬೆಗಳನ್ನು ಸೇರಿಸಿ ಕೂಡಿಸಬೇಕು ಎನ್ನುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಈ ಸಂಪ್ರದಾಯದ ಉದ್ದೇಶ ಬಹುಶಃ “ನಮ್ಮ ಸಂಪ್ರದಾಯ,ಅಚಾರವಿಚಾರ,ನಾಡಿನ ಸಂಸ್ಕೃತಿಯ ಆಚರಣೆಗಳನ್ನು ಈ ನಿರ್ಜೀವ ಗೊಂಬೆಗಳ ಮುಖೇನ ತೋರಿಸಿಕೊಟ್ಟು ಇಂದಿನ ಯುವಕರಲ್ಲಿ ಸಾಂಪ್ರದಾಯಕ ಪದ್ಧತಿಗಳನ್ನು ಜೀವಂತವಾಗಿ ಉಳಿಸಿಕೊಳ್ಳಲು ಮಾಡಿರುವ ಒಂದು ತಂತ್ರದಂತೆ ತೋರುತ್ತದೆ”.ಈ ಒಂಬತ್ತು ದಿನಗಳು ಗೊಂಬೆ ಹಾಗೂ ಅಲ್ಲಿ ಪ್ರತಿಷ್ಠಾಪಿಸಿರುವ ಕಲಶದ ಪೂಜೆ ದಸರಾ ಮುಗಿಯುವವರೆಗೂ ನಿರಂತರವಾಗಿ ಸಾಗುತ್ತದೆ. ಏಳನೇ ದಿನ ‘ಸರಸ್ವತಿ ಪೂಜೆ’ಯಾದರೆ, ಎಂಟನೇ ದಿನ ದುರ್ಗೆಗೆ ಹೋಮ ಹವನ ಹಾಗೂ ವಿಶೇಷ ಪೂಜೆ. ಒಂಬತ್ತನೇ ದಿನ ನಾವು ದಿನನಿತ್ಯದ ಬಳಸುವ ಆಯುಧಗಳು ಹಾಗೂ ವಾಹನಗಳ ಪೂಜೆ. ಈ ದಿನವನ್ನು ‘ಆಯುಧ ಪೂಜೆ’ಎಂಬ ಹೆಸರಿನಿಂದ ಕರೆಯುತ್ತಾರೆ. ಈ ದಿನದ ಆಚರಣೆ ಅರಮನೆ ಮೊದಲುಗೊಂಡು ನಾಡಿನ ಎಲ್ಲಾ ಹಿಂದೂ ಧರ್ಮೀಯರು ಸಡಗರ ಸಂಭ್ರಮದಿಂದ ಆಚರಿಸುವುದು ವಿಶೇಷ. ಹತ್ತನೆಯ ದಿನ ಅಂದರೆ ದಸರೆಯ ವಿಜಯದಶಮಿಯ ದಿನ. ಈ ಒಂಬತ್ತು ದಿನಗಳಲ್ಲಿ ಸಂಜೆಯ ವೇಳೆ ಪುಟ್ಟ ಪುಟ್ಟ ಮಕ್ಕಳನ್ನು ಮನೆಗಳಿಗೆ ಕರೆದು ಆ ಗೊಂಬೆಗಳ ಬಗ್ಗೆ ಮತ್ತು ಆ ಮನೆಗಳಲ್ಲಿ ಮಾಡಿರುವ ‘ಗೊಂಬೆಯ ಥೀಮ್’ ಗಳ ಬಗ್ಗೆ ಮಾಹಿತಿ ನೀಡಿ ಅವರೊಂದಿಗೆ ಸಂಭ್ರಮಿಸಿ ಮಕ್ಕಳಿಗೆ ಇಷ್ಟವಾದ ತಿಂಡಿ ತಿನಿಸುಗಳನ್ನು ಕೊಟ್ಟು ಸಂತೋಷ ಪಡಿಸುವ ಪದ್ಧತಿ ಇಂದಿಗೂ ಇದೆ. ಕೆಲವು ಮನೆಗಳಲ್ಲಿ ಆರತಿಯ ಆಚರಣೆಯೂ ಇರುತ್ತದೆ. ಇನ್ನು ಕೆಲವರು ಹಿರಿಯ ಮುತ್ತೈದೆಯರಿಗೆ ಬಾಗಿನಗಳನ್ನು ಹಾಗೂ ಹೆಣ್ಣುಮಕ್ಕಳಿಗೆ ಅರಿಶಿನ ಕುಂಕುಮ ಹಾಗೂ ತಾಂಬೂಲ ನೀಡಿ ಸಂಭ್ರಮಿಸುತ್ತಾರೆ.ಹತ್ತನೆಯ ವಿಜಯ ದಶಮಿಯ ರಾತ್ರಿ ಮರದ ಪಟ್ಟದ ಗೊಂಬೆಗಳನ್ನು ಮಲಗಿಸುವುದರ ಮೂಲಕ ನವರಾತ್ರಿ ಹಬ್ಬದ ಆಚರಣೆಗೆ ತೆರೆಯೆಳೆಯಲ್ಪಡುತ್ತದೆ. ಎಲ್ಲಾ ಆತ್ಮೀಯರಿಗೆ “ನವರಾತ್ರಿ”ಯ ಹಾರ್ದಿಕ ಶುಭಾಶಯಗಳು🙏