ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರದ ವತಿಯಿಂದ ಹಿರಿಯ ನಾಗರಿಕರಿಗೆ ಉಚಿತ ವೈದ್ಯಕೀಯ ಶಿಬಿರ ಮತ್ತು ಉಚಿತ ಔಷಧಿ ವಿತರಣಾ ಕಾರ್ಯಕ್ರಮ ಇದೇ 10 ರಂದು ಬ್ರಹ್ಮಾವರದ ಸಮುದಾಯ ಆರೋಗ್ಯ ಕೇಂದ್ರದ ವಠಾರದಲ್ಲಿ ನಡೆಯಲಿದೆ ಎಂದು ಬ್ರಹ್ಮಾವರ ಜನೌಷಧಿ ಕೇಂದ್ರ ಕೇಂದ್ರದ ಸುಂದರ ಪೂಜಾರಿ ಮೂಡುಕುಕ್ಕುಡೆ ತಿಳಿಸಿದರು.
ಬ್ರಹ್ಮಾವರದಲ್ಲಿ ಗುರುವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶದೆಲ್ಲೆಡೆ ಸ್ವಾತಂತ್ರ್ಯದ 75 ವರ್ಷಗಳ ಅಮೃತ ಮಹೋತ್ಸವವನ್ನು ಅನುಭವಿಸುತ್ತಿರುವ ನಾವು, ಈ ದೇಶದ ಸಂಸ್ಕಾರ, ಸಂಪ್ರದಾಯ, ಹಿರಿಮೆಯನ್ನು ನಮಗಾಗಿ ಉಳಿಸಿ ಬೆಳೆಸಿರುವ ನಮ್ಮ ಹಿರಿಯರಿಗಾಗಿ ಈ ದಿನವನ್ನು ಮೀಸಲಿರಿಸಲಾಗುತ್ತಿದೆ. ಈ ಕಾರ್ಯಕ್ರಮ ದೇಶದ ಆಯ್ದ 75 ಜಿಲ್ಲೆಗಳಲ್ಲಿ 750 ಜನೌಷಧಿ ಕೇಂದ್ರಗಳಲ್ಲಿ 75 ವರ್ಷ ತುಂಬಿದ 75 ಹಿರಿಯ ನಾಗರಿಕರಿಗೆ ಸನ್ಮಾನ, ಉಚಿತ ಆರೋಗ್ಯ ತಪಾಸಣೆ, ಆಪ್ತ ಸಮಾಲೋಚನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬ್ರಹ್ಮಾವರದಲ್ಲೂ ಹಿರಿಯ ನಾಗರಿಕರಿಗೆ ಆರೋಗ್ಯ ಶಿಬಿರ ಮತ್ತು 75 ಹಿರಿಯ ನಾಗರಿಕರಿಗೆ ಸನ್ಮಾನ ಮತ್ತು ಕಿಟ್ ಗಳನ್ನು ನೀಡಲಾಗುತ್ತಿದೆ ಎಂದರು.
ಇದೇ 10 ರಂದು ಬೆಳಿಗ್ಗೆ 9 ಗಂಟೆಗೆ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡುವರು. ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕೆ.ರಘುಪತಿ ಭಟ್, ಡಾ.ಪಿ.ವಿ ಭಂಡಾರಿ, ಡಾ.ಅಜಿತ್ ಕುಮಾರ್ ಶೆಟ್ಟಿ ಉಪಸ್ಥಿತರಿರುವರು. ನಂತರ ಹಲವಾರು ಸಂಘ ಸಂಸ್ಥೆಗಳ ನೆರವಿನಿಂದ ನುರಿತ ವೈದ್ಯರಿಂದ ಆರೋಗ್ಯ ಶಿಬಿರ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಜಯಂಟ್ಸ್ ನ ಮಧುಸೂಧನ ಹೇರೂರು, ಮಿಲ್ಟನ್ ಒಲಿವೆರಾ, ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದ ಡಾ.ಮಹೇಶ ಐತಾಳ್ ಇದ್ದರು.