ರಾಜೇಶ್ ಭಟ್ ಪಣಿಯಾಡಿ
ಯಾ ದೇವೀ ಸರ್ವಭೂತೇಷು ವಿದ್ಯಾ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋನಮಃ
ಇಂದು ಶುಭಶರನ್ನರಾತ್ರಿಯ ಸಪ್ತಮಿ ತಿಥಿಯ ಸಂಭ್ರಮ. ಜೊತೆಗೆ ಇಂದು ಮೂಲಾನಕ್ಷತ್ರದ ಶುಭ ಘಳಿಗೆಯೂ ಇದೆ. ಹಾಗಾಗಿ ವಿದ್ಯಾದಾಯಿನಿ ಮಾತೆ ಸರಸ್ವತಿಯನ್ನು ಪೂಜಿಸುವ ಗುರು ಶ್ರೇಷ್ಟ ವೇದವ್ಯಾಸ ಮಹರ್ಷಿಗಳನ್ನು ನೆನಪಿಸಿಕೊಳ್ಳಬೇಕಾದ ದಿನವೂ ಹೌದು. ಅದೇರೀತಿ ಈ ದಿನ ರಾತ್ರಿ ಕಾಲ ರಾತ್ರಿ ದುರ್ಗೆಯನ್ನು ಬಹುಸಂಭ್ರಮದಿಂದ ಆಚರಿಸುವ ನವರಾತ್ರಿ ಪರ್ವದ ಮಹಾದಿನ.
ಸೌಂದರ್ಯ ರತ್ನಾಕರಿ ಬ್ರಹ್ಮನ ರಾಣಿ ಪನ್ನಗ ವೇಣಿ ತಾಯಿ ಶಾರದೆಯನ್ನು ಶ್ರದ್ಧಾ ಭಕ್ತಿಯಿಂದ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಬ್ಬ ಮನುಷ್ಯನೂ ಪೂಜಿಸಲೇ ಬೇಕಾದ ಶ್ರೇಷ್ಠ ದಿನ. ಆಕೆಯೇ ನಮ್ಮನ್ನೆಲ್ಲ ಕಾಯ್ವ ವಿದ್ಯೆ ಬುದ್ಧಿ ಸಿದ್ಧಿ ಸ್ಫುರಣ ಶಕ್ತಿ ಸುಜ್ಞಾನವನ್ನು ಕರುಣಿಸಿ ಮಾನವೀಯತೆಯ ಮೂರ್ತಿಯನ್ನಾಗಿಸುವ ಒಬ್ಬ ಸತ್ಪ್ರಜೆಯನ್ನಾಗಿಸುವ ಜಗನ್ಮೋಹನಾಂಗಿ.
“ವ್ಯಾಸಾಯ ಭವನಾಶಾಯ ಶ್ರೀಷಾಯ ಗುಣರಾಶಯೇ ಹೃದ್ಯಾಯ ಶುದ್ಧ ವಿದ್ಯಾಯ ಮಧ್ವಾಯಚ ನಮೋ ನಮಃ”
ಅದೇ ರೀತಿ ಭಗವಂತನೇ ವೇದ ವಿಶಾರದ ವೇದ ವ್ಯಾಸರಾಗಿ ಭುವಿಯ ಕಲ್ಯಾಣಕ್ಕಾಗಿ ಹುಟ್ಟಿ ಬಂದವರು. ಋಗ್ ಯಜು ಸಾಮ ಅಥರ್ವ ವೇದಗಳೆಂಬ ನಾಲ್ಕು ವೇದಗಳನ್ನು ರಚಿಸಿ ಉಪನಿಷತ್ತುಗಳನ್ನು ಭಕ್ತಕೋಟಿಗೆ ನೀಡಿದ ಜನಸಾಮಾನ್ಯರಿಗೆ ಭಕ್ತಿ ಮುಕ್ತಿ ಮಾರ್ಗಗಳನ್ನು, ಜೀವನ ಪಥವನ್ನು ಪರಿಚಯಿಸಿದ ಮಹಾಮಹಿಮರು ಇವರು. ಪುಟ್ಟ ಮಕ್ಕಳಿಗೆ ಪ್ರಥಮ ಅಕ್ಷರಾಭ್ಯಾಸವನ್ನು ಈ ಸಂದರ್ಭದಲ್ಲಿ ಉಪದೇಶಿಸಲಾಗುತ್ತದೆ. ಹಿತ್ತಾಳೆ ಅಥವಾ ತಾಮ್ರದ ಹರಿವಾಣದಲ್ಲಿ ಅಕ್ಕಿಯನ್ನು ತುಂಬಿ ಅರಶಿನ ಕೋಡಿನಿಂದ ಗುರು ಮುಖೇನ, ಮಾತಾಪಿತರ ಮುಖೇನ ಓಂಕಾರದ ಮೂಲಕ
ಶಬ್ಧ ಜ್ಞಾನವನ್ನು ಧಾರೆ ಎರೆಯಲಾಗುತ್ತದೆ. ಮನೆಮನೆಗಳಲ್ಲಿ ಈ ದಿನ ವೇದ, ಭಗವದ್ಗೀತೆ, ರಾಮಾಯಣ ಮಹಾಭಾರತದ ಗ್ರಂಥಗಳು, ಶಿಕ್ಷಣ ವಿಷಯದ ಹೊತ್ತಗೆಗಳು, ಸಂಗೀತ ವಾದ್ಯಾದಿ ಸಲಕರಣೆಗಳು ಅಥವ ಕಲಶವನ್ನು ಮರದ ಮಣೆಯೊಂದರಲ್ಲಿ ರಂಗೋಲಿ ಬರೆದು ಇಟ್ಟು ಶಾರಾದಾ ಮಾತೆಯನ್ನು ಆಹ್ವಾನಿಸಿ ಫಲ ಪುಷ್ಪ ಗಂಧಾಕ್ಷತೆ, ತುಪ್ಪದ ದೀಪ, ಅಷ್ಟ ದ್ರವ್ಯ, ನೈವೇದ್ಯ ಮಂಗಳಾರತಿಯ ಮೂಲಕ ವಿಜಯದಶಮಿಯ ವರೆಗೆ ಶ್ರದ್ಧಾಭಕ್ತಿಯಿಂದ ಆಚರಿಸಬೇಕು.
“ಸುಶಾಂತಾಂ ಸುದೇಹಾಂ ದೃಗಂತೆ ಕಚಾಂತಾಂ ಲಸತ್ಸಲ್ಲ ತಾಂಗೀಮನಂತಾಮ ಚಿಂತ್ಯಾಂ ಸ್ಮರೇತಾಪಸೈಹಿಸಂಗ ಪೂರ್ವಸ್ತಿತಾಂತಾಂ ಭಜೇ ಶಾರದಾಂಬಾಂಮಜಸ್ರಂ ಮದಾಂಬಾಂ” ಎಂದು ಭಜಿಸಿದರೆ ಒಳ್ಳೆಯದು. ಸ್ಕಂದ ಪುರಾಣದಲ್ಲಿ ರಾಜಾ ಸುಕೇತು ಹಾಗೂ ಸುವೇದಿ ದಂಪತಿಗಳು ಸರಸ್ವತಿ ಸಹಿತ ನವ ದುರ್ಗಾ ಪೂಜೆಯನ್ನು ಮಾಡಿ ಅತ್ಯಂತ ಯಶಸ್ಸು ಕಂಡಿರುವುದು ಉಲ್ಲೇಖಿತವಾಗಿದೆ.
ಮಾತೆ ಸರಸ್ವತಿಗೆ ಬಿಳಿಯ ಉಡುಪು ಜೇನುತುಪ್ಪ ಕಲ್ಲುಸಕ್ಕರೆ ಹಾಲು ಪಾಯಸ ತಾವರೆ ಮಲ್ಲಿಗೆ ಜಾಜಿಯಂತಹ ಶ್ವೇತ ಪುಷ್ಪಗಳು ವಿವಿಧ ಫಲವಸ್ತುಗಳು ಬಹಳ ಪ್ರಿಯ. ಜ್ಞಾನಕ್ಕಿಂತ ಶ್ರೇಷ್ಟವಾದುದು ಬೇರೊಂದಿಲ್ಲವಂತೆ. ಜೀವನದಲ್ಲಿ ಪಡೆದುದೆಲ್ಲವನ್ನು ಕಳೆದುಕೊಂಡರೂ ಜ್ಞಾನವೊಂದನ್ನು ಹೊಂದಿದ್ದರೆ ಕಳೆದುದೆಲ್ಲವನ್ನೂ ಮತ್ತೆ ಪಡೆಯಬಹುದಂತೆ. ಹಾಗಾಗಿ ”ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣೀ ವಿದ್ಯಾರಂಭಂ ಕರಿಷ್ಯಾಮಿ ಸಿದ್ದಿರ್ ಭವತು ಮೇ ಸದಾ ” ಎಂದು ಮಾತೆಯಲ್ಲಿ ಪ್ರಾರ್ಥಿಸೋಣ.
ಆಶ್ವೀಜ ಮಾಸದ ಶುಕ್ಲಪಕ್ಷದ ಈ ಸಪ್ತಮಿಯ ತಿಥಿಯಂದು ಕಾಲಾತೀತೆ ಕಾಲನಿಯಾಮಕಳಾದ ದುರ್ಗೆ ಕಾಲರಾತ್ರಿಯ ರೂಪದಲ್ಲಿ ಅವತರಿಸಿದ ದಿನ. ಆಕೆಯ ಈ ರೂಪ ಉಳಿದೆಲ್ಲಾ ರೂಪಗಳಿಗಿಂತ ಅತ್ಯಂತ ಭೀಕರ, ರೌದ್ರ ಹಾಗೂ ಭೀಭತ್ಸ ರೂಪ ಇದು. ಕರಾಳ ಆಕಾರದ ಕ್ರೋಧಾಗ್ನಿಯ ಮುಖವರ್ಣ, ಅಂಧಕಾರವೇ ಮೈಗೂಡಿ ಬಂದಂತಹ ಮೈಬಣ್ಣ, ಕೆಂಡಗಳನ್ನುಗುಳುವ ಮೂರು ಕಣ್ಣುಗಳು, ಕೊರಳಲ್ಲಿ ರಕ್ಕಸರ ಮೂಳೆ, ರುಂಡಗಳ ಮಾಲೆ, ಶ್ವಾಸ ನಿಶ್ವಾಸದಲ್ಲಿ ಅಗ್ನಿಯ ಜ್ವಾಲೆ, ಅಸುರರ ಹಸಿರಕ್ತವನ್ನೇ ಹೀರಲೆಂದು ಹೊರ ಚಾಚಿರುವ ರಕ್ತವರ್ಣದ ನಾಲಗೆ, ಗಾಳಿಗೆ ಸಿಕ್ಕ ಕಾರ್ಮೋಡದಂತೆ ಹರಡಿದ ತಲೆಗೂದಲು, ದಾನವರ ಕೆಚ್ಚೆದೆಯನ್ನೇ ಸೀಳಬಲ್ಲ ಕೋರೆ ಹಲ್ಲುಗಳು, ಝಳ ಝಳನೆ ಹೊಳೆಯುವ ಕಂಠಿ ಖಡ್ಗಾದಿ ಆಯುಧಗಳು. ಕತ್ತೆಯ ಮೇಲೆಯೇ ಆಕೆಯ ಸವಾರಿ. ಪ್ರಳಯೋಪಾದಿಯ ವರ್ಚಸ್ಸಿಗೆ ಕಲ್ಲೆದೆಯೂ ಕರಗಿ ನೀರಾಗಬೇಕು.
ಮಹಿಷಾಸುರನ ಅನುಚರ ರಕ್ತ ಬೀಜಾಸುರನ ಸಂಹಾರಕ್ಕಾಗಿಯೇ ದೇವಿ ದುರ್ಗೆ ಈ ಭಯಂಕರ ರೂಪವನ್ನು ತಳೆದಿದ್ದಾಳೆ. ಈ ರಕ್ತ ಬೀಜಾಸುರನ ಮೈಯಿಂದ ರಕ್ತ ಸುರಿದರೆ ಆ ಪ್ರತಿಯೊಂದು ರಕ್ತ ಕಣದಿಂದ ಸಾವಿರ ಸಾವಿರ ರಕ್ತ ಬೀಜಾಸುರರು ಹುಟ್ಟಿಕೊಳ್ಳುವ ವರವಿರುವ ಈತನನ್ನು ಸಂಹರಿಸಲು ಮಹಾಕಾಳಿ ರಕ್ತೇಶ್ವರಿ ರೂಪವನ್ನು ತಾಳಿ ಒಂದೇ ಒಂದು ಹನಿ ಆತನ ಮೈಯಿಂದ ರಕ್ತ ಕೆಳಗೆ ಬೀಳದಂತೆ ತನ್ನ ನಾಲಗೆಯನ್ನು ಚಾಚಿ ಹೀರಿಕೊಂಡು ಆತನ ಸಂಹಾರ ಗೈದು ಸಂತಸದ ರೌದ್ರ ನರ್ತನ ಮಾಡುತ್ತಾಳೆ. ಕೊನೆಗೆ ಆಕೆ ಶಿವನ ಎದೆಯ ಮೇಲೆ ಕಾಲಿಟ್ಟ ಮೇಲೆ ಶಾಂತಳಾಗುತ್ತಾಳಂತೆ. ಆ ತಾಯಿ ಈಗಲೂ ಭೂಲೋಕದಲ್ಲಿ ಸ್ತಿರವಾಗಿ ನಿಂತು ದುಷ್ಟಶಕ್ತಿಗಳ ದಮನ ಮಾಡುತ್ತ ಶಿಷ್ಟ ಜನರ ರಕ್ಷಣೆ ಮಾಡುತ್ತಾಳೆ ಎಂಬ ನಂಬಿಕೆ ಇದೆ.
ಮಾತೆ ಮಹಾಕಾಳಿಗೆ ನೀಲಿ ಬಣ್ಣದ ಹೂವುಗಳು, ನೀಲಿ ಬಣ್ಣದ ಬಟ್ಟೆ, ಗುಢಾನ್ನ ಅಂದರೆ ಬೆಲ್ಲ ಮತ್ತು ಅನ್ನ ಕಲಸಿದ ಪದಾರ್ಥಗಳು, ತುಪ್ಪದ ಖಾದ್ಯಗಳು ಈಕೆಗೆ ಅತಿಪ್ರಿಯ. ಆಕೆಯನ್ನು ಭಕ್ತಿಯಿಂದ ಪೂಜಿಸಿದರೆ ಭಕ್ತರ ಸರ್ವ ಕಷ್ಟಗಳನ್ನು ನಿವಾರಣೆ ಮಾಡಿ ಶತ್ರುಭಯ, ಮಾಟ ಮಂತ್ರ ಭೂತ ಪಿಶಾಚಿಯಂತಹ ದುಷ್ಟಶಕ್ತಿಗಳ ಉಪಟಳದಿಂದ ರಕ್ಷೆ ನೀಡಿ ಧೈರ್ಯ ಸ್ತೈರ್ಯವಿಜಯ ವೀರ್ಯವನ್ನು ಕರುಣಿಸಿ ಚೈತನ್ಯವನ್ನು ತುಂಬುತ್ತಾಳೆ. ಅಂಧಕಾರದಿಂದ ಬೆಳಕಿನೆಡೆಗೆ ನಮ್ಮನ್ನೆಲ್ಲ ಕರೆದೊಯ್ಯುವ ಮಾತೆ ಕಾಲ ರಾತ್ರಿಯನ್ನು ಮನದಾಳದಿಂದ ಪ್ರಾರ್ಥಿಸಿದರೆ ಎಂತಹ ಕಠಿಣ ಪರಿಸ್ಥಿತಿಯನ್ನೂ ತಡೆ ಹಿಡಿಯುವ ಹಾಗೂ ಧೈರ್ಯದಿಂದ ಎದುರಿಸುವ ಶಕ್ತಿಯನ್ನು ಶ್ರೀಮಾತೆ ಕರುಣಿಸಿ ನಮ್ಮೆಲ್ಲರನ್ನು ಅನುಗ್ರಹಿಸಲಿ..